ಫೀಬಾ ಏಷಿಯಾ ಮಹಿಳಾ ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಸಜ್ಜು: ಡಾ.ಜಿ. ಪರಮೇಶ್ವರ್

Update: 2018-10-15 17:09 GMT

ಬೆಂಗಳೂರು, ಅ. 15: ಫೀಬಾ ಏಷಿಯಾ ಯು-18 ಮಹಿಳಾ ಬಾಸ್ಕೆಟ್ ಬಾಲ್ ಪಂದ್ಯಾವಳಿ ಅ.28ರಿಂದ ನ.3ರ ವರೆಗೆ ನಗರದ ಕಂಠೀರವ ಸ್ಟೇಡಿಯಂ ಹಾಗೂ ಕೋರಮಂಗಲದಲ್ಲಿ ನಡೆಯಲಿದ್ದು, ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವರೂ ಆಗಿರುವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿ ಪೂರ್ವಭಾವಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಸತತ ಮೂರನೇ ಬಾರಿಗೆ ಬೆಂಗಳೂರಿನಲ್ಲಿ ಫೀಬಾ ಏಷಿಯಾ ಅಂಡರ್-18 ಮಹಿಳಾ ಬಾಸ್ಕೆಟ್ ಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದರು.

ಆಸ್ಟ್ರೇಲಿಯಾ, ಇಂಡೋನೇಶಿಯಾ, ನ್ಯೂಜಿಲ್ಯಾಂಡ್, ಚೈನಾ, ಜಪಾನ್, ಮಲೇಶಿಯಾ ಸೇರಿ ಒಟ್ಟು 16 ರಾಷ್ಟ್ರದಿಂದ 16 ತಂಡಗಳ 320 ಆಟಗಾರ್ತಿಯರು ಆಗಮಿಸುತ್ತಿದ್ದಾರೆ. ಇವರಿಗೆ ಅಗತ್ಯ ಸಾರಿಗೆ, ಆರೋಗ್ಯ, ವಸತಿ ಸೇರಿದಂತೆ ಎಲ್ಲ ಸೌಕರ್ಯ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.

2 ಕೋಟಿ ರೂ.ವೆಚ್ಚದಲ್ಲಿ ಕ್ರೀಡಾಂಗಣವನ್ನು ಮೇಲ್ದರ್ಜೆಗೇರಿಸಿದ್ದು, ಅಂತರ್ ರಾಷ್ಟ್ರೀಯ ಮಟ್ಟದ ಸ್ಟೇಡಿಯಂ ಇದಾಗಿದೆ ಎಂದ ಅವರು, ಈ ಬಾರಿ ಪಂದ್ಯಾವಳಿ ವೀಕ್ಷಿಸಲು ಪ್ರವೇಶ ಶುಲ್ಕವಿರುವುದಿಲ್ಲ. ಅ.27ಕ್ಕೆ ಉದ್ಘಾಟನೆಯನ್ನು ರಾಜ್ಯಪಾಲ ವಿ.ಆರ್.ವಾಲಾ ನೆರವೇರಿಸಲಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News