ಕೇಂದ್ರ ಸರಕಾರದಿಂದ ಅಭಿವ್ಯಕ್ತಿ ಸ್ವಾತಂತ್ರದ ದಮನ: ಐಕ್ಯಮತ ವೇದಿಕೆ ಅಸಮಾಧಾನ

Update: 2018-10-15 17:20 GMT

ಬೆಂಗಳೂರು, ಅ. 15: ಕ್ವಿಂಟ್ ಹಾಗೂ ಗ್ರೀನ್ ಪೀಸ್ ಇಂಡಿಯಾ ಸಂಸ್ಥೆಗಳ ಮೇಲೆ ಭಾರತೀಯ ಹಣಕಾಸು ಇಲಾಖೆಯ ಜಾರಿ ನಿರ್ದೇಶನಾಲಯ ವಾರಂಟ್ ಇಲ್ಲದೆ ದಾಳಿ ಮಾಡಿರುವುದು ಕಾನೂನು ಬಾಹಿರವಾದದ್ದು ಎಂದು ಐಕ್ಯಮತ ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ.

ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಎಎಸ್‌ಜಿ ಸಂಸ್ಥೆಯ ಸದಸ್ಯ ಲಿಯೋ ಸಾಲ್ಡಾನಾ ಮಾತನಾಡಿ, ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಹೇರುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರವನ್ನು ಕೇಂದ್ರ ಸರಕಾರ ದಮನಗೊಳಿಸಿದೆ. ಅಲ್ಲದೆ, ಮಾನವ ಹಕ್ಕು ಕಾರ್ಯಕರ್ತರ ಮೇಲೆ ಹಲ್ಲೆ ಮಾಡುತ್ತಿದೆ. ಇದು ಸಾಮಾಜಿಕ ಕಾರ್ಯಕರ್ತರ ಬಾಯಿ ಮುಚ್ಚುವಂತೆ ಮಾಡುವ ಪ್ರಕ್ರಿಯೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾವು ಈ ದಾಳಿಯನ್ನು ಕೇವಲ ಈ ಎರಡು ಸಂಸ್ಥೆಗಳ ಮೇಲೆ ನಡೆದ ದಾಳಿಯೆಂದು ಪರಿಗಣಿಸುವುದಿಲ್ಲ. ಬದಲಾಗಿ ಈ ದಾಳಿಯು ಸಾಮಾಜಿಕ ಸೇವಾ ಸಂಸ್ಥೆ ಹಾಗೂ ಮಾಧ್ಯಮಗಳ ಮೇಲೆ ನಡೆಸಿದ ದಾಳಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕೆಲವು ನಿಗಮಗಳು ಮಾಡುತ್ತಿರುವ ಪರಿಸರ ಉಲ್ಲಂಘನೆಯನ್ನು ಬಹಿರಂಗ ಪಡಿಸುವ ಮೂಲಕ ಅನ್ಯಾಯವನ್ನು ಬಯಲು ಮಾಡಿರುವವರನ್ನು ಈ ದಾಳಿಗೆ ಗುರಿ ಮಾಡಲಾಗಿರುವುದು ಶೋಚನೀಯವಾದದ್ದು ಎಂದರು.

ಅದರಲ್ಲೂ ಶೋಷಣೆಗೊಳಪಟ್ಟ ಸಮುದಾಯಗಳ ಜತೆ, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ಮಂಗಳಮುಖಿಯರು, ಲೈಂಗಿಕ ಕಾರ್ಯನಿರತ ಸಮುದಾಯಗಳ ಜತೆ ಅವರ ಹಕ್ಕುಗಳಿಗಾಗಿ ತೊಡಗಿಕೊಂಡ ಕಾರ್ಯಕರ್ತರು ಹಾಗೂ ಪತ್ರಕರ್ತರನ್ನೇ ಗುರಿ ಮಾಡಲಾಗಿದೆ ಎಂಬುದು ಗಮನಾರ್ಹವಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಿಕ್ರಮ್ ಸಂಸ್ಥೆಯ ಸದಸ್ಯ ಮ್ಯಾಥ್ಯೂ ಫಿಲಿಪ್, ಗ್ರೀನ್ ಪೀಸ್ ಪ್ರಾಯೋಜಕಿ ನಂದಿನಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News