27 ಜಿಲ್ಲಾ, 176 ತಾಲೂಕು ಗ್ರಂಥಾಲಯಗಳಲ್ಲಿ ಡಿಜಿಟಲ್ ವಿಭಾಗ ಸ್ಥಾಪನೆ: ಡಾ.ಸತೀಶ್‌ಕುಮಾರ್

Update: 2018-10-16 17:11 GMT

ಬೆಂಗಳೂರು, ಅ.16: ರಾಜ್ಯದ ಜನತೆಗೆ ಓದುವ ಹವ್ಯಾಸವನ್ನು ಹೆಚ್ಚಿಸುವ ಸಲುವಾಗಿ ಮೊದಲ ಹಂತವಾಗಿ 27ಜಿಲ್ಲಾ ಕೇಂದ್ರ ಗ್ರಂಥಾಲಯ ಹಾಗೂ 176 ತಾಲೂಕು ಗ್ರಂಥಾಲಯಗಳಲ್ಲಿ ಡಿಜಿಟಲ್ ಲೈಬ್ರರಿ ವಿಭಾಗವನ್ನು ಸ್ಥಾಪಿಸಲಾಗುತ್ತಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್ ಕುಮಾರ್ ತಿಳಿಸಿದರು.

ಮಂಗಳವಾರ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬೆಂಗಳೂರು ಪುಸ್ತಕೋತ್ಸವದಲ್ಲಿ ಆಯೋಜಿರುವ ಪುಸ್ತಕ ಸಂಸ್ಕೃತಿ ಹೆಚ್ಚಿಸುವ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು, ಯುವ ಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ ಓದುವ ಆಸಕ್ತಿಯನ್ನು ಹೆಚ್ಚಿಸಲು ಡಿಜಿಟಲ್ ಗ್ರಂಥಾಲಯ ಸ್ಥಾಪನೆ ಅಗತ್ಯವಿದೆ ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿ ಲೈಬ್ರರಿಗಳಿಗೆ ರಾಜ್ಯದ 9ನಗರಗಳು ಆಯ್ಕೆಯಾಗಿವೆ. ತುಮಕೂರಿನಲ್ಲಿ 17ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಇಲ್ಲಿ ಒಂದು ಕೋಟಿ ರೂ.ವೆಚ್ಚದಲ್ಲಿ 1500 ಪುಸ್ತಕಗಳು ಲಭ್ಯವಾಗಲಿವೆ. ಹಾಗೂ 100ಕ್ಕೂ ಹೆಚ್ಚು ಅಂತರ್‌ರಾಷ್ಟ್ರೀಯ ನಿಯತಕಾಲಿಕೆಗಳನ್ನು ಉಚಿತವಾಗಿ ಗ್ರಂಥಾಲಯಗಳಿಗೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಇಡೀ ದೇಶದಲ್ಲಿ ರಾಜ್ಯದ ಸಾರ್ವಜನಿಕ ಗ್ರಂಥಾಲಯಗಳು ಮಾದರಿಯಾಗಿವೆ. ಇದನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಹಾಗೂ ಮಕ್ಕಳಿಗಾಗಿ ಟಾಕಿಂಗ್ ಲೈಬ್ರರಿ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.

ಎಚ್.ಡಿ.ದೇವೇಗೌಡ ಭೇಟಿ: ಬೆಂಗಳೂರು ಪುಸ್ತಕೋತ್ಸವಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭೇಟಿ ನೀಡಿ ಲೇಖಕರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News