ಅರೆ ಹೊಟ್ಟೆಯಲ್ಲಿ ಬೆಂಗಳೂರು ವಿವಿಯ ವಸತಿ ನಿಲಯದ ವಿದ್ಯಾರ್ಥಿಗಳು : ಬ್ರೆಡ್, ಬಿಸ್ಕೆಟ್ ಊಟವೇ ಗತಿ!

Update: 2018-10-16 17:15 GMT

ಬೆಂಗಳೂರು, ಅ. 16: ಬೆಂಗಳೂರು ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ ಸಿಗಬೇಕಾದ ಕನಿಷ್ಠ ಮಟ್ಟದ ಊಟದ ಸೌಲಭ್ಯವೂ ಸಿಗದೆ, ಕೆಲವು ನಿಲಯದ ವಿದ್ಯಾರ್ಥಿಗಳು ಸ್ಥಳೀಯ ಸ್ನೇಹಿತರು ತಂದ ಊಟದ ಬಾಕ್ಸ್‌ನಲ್ಲಿ ಹೊಟ್ಟೆ ತುಂಬಿಸಿ ಕೊಂಡರೆ, ಇನ್ನು ಕೆಲವರು ಬ್ರೆಡ್, ಬಿಸ್ಕೆಟ್ ತಿಂದು ಅರೆ ಹೊಟ್ಟೆಯಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ.

ಬೆಂ ವಿವಿಯ ವಸತಿ ನಿಲಯದಲ್ಲಿರುವ ಬಹುಪಾಲು ವಿದ್ಯಾರ್ಥಿಗಳು ಬಡ ಕುಟುಂಬದವರು. ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಕನಸು ಹೊತ್ತು ರಾಜ್ಯದ ನಾನಾ ಭಾಗಗಳಿಂದ ಬಂದು ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಹಸಿವಾಗುತ್ತಿದೆ ಊಟ ಕೊಡಿ ಎಂದು ಹಾಸ್ಟೆಲ್ ವಾರ್ಡನ್ ಬಳಿ ವಿದ್ಯಾರ್ಥಿಗಳು ಕೇಳಿಕೊಂಡಾಗ, ಕನಿಷ್ಠ ಮಾನವೀಯತೆ ತೋರದೆ ಹಣ ಕಟ್ಟಿ ಊಟ ಮಾಡಿ ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಾರೆ. ಹೀಗಾಗಿ ಮೂರು ತಿಂಗಳಿನಿಂದ ವಸತಿ ನಿಲಯದಲ್ಲಿ ಊಟ ಸಿಗದೆ ಹೊಟ್ಟೆ ಕಟ್ಟಿಕೊಳ್ಳುವ ಪರಿಸ್ಥಿತಿ ಒದಗಿಬಂದಿದೆ ಎಂಬುದು ವಿದ್ಯಾರ್ಥಿಗಳ ನೋವು.

ವಿದ್ಯಾರ್ಥಿ ವೇತನವನ್ನು ವಸತಿ ನಿಲಯಕ್ಕೆ ಹಿಂದಿರುಗಿಸಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಊಟ ನೀಡದೆ ಸತಾಯಿಸಲಾಗುತ್ತಿದೆ. ಎಸ್ಸಿ-ಎಸ್ಟಿ ಹಾಗೂ ಪ್ರ.1ಕ್ಕೆ ಸೇರಿದಂತೆ ಒಟ್ಟು 110 ವಿದ್ಯಾರ್ಥಿಗಳಲ್ಲಿ ಸುಮಾರು 15 ವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿ ಊಟ ಸಿಗುತ್ತಿಲ್ಲ. ಈ ಹಿಂದೆ ವಸತಿ ನಿಲಯದಿಂದ ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯಗಳು ಸಿಗುತ್ತಿದ್ದವು. ವಿದ್ಯಾರ್ಥಿಗಳಿಗೆ ಸರಕಾರ ನೀಡುವ ವಿದ್ಯಾರ್ಥಿ ವೇತನವನ್ನು ವಸತಿ ನಿಲಯಕ್ಕೆ ನೀಡಿಲ್ಲ ಎಂಬ ಕಾರಣಕ್ಕೆ ಮೂರು ತಿಂಗಳಿಂದ ವಿದ್ಯಾರ್ಥಿಗಳಿಗೆ ಊಟ ಕೊಡುವುದನ್ನೇ ನಿಲ್ಲಿಸಲಾಗಿದೆ ಎಂದು ಆರೋಪಿಸಲಾಗಿದೆ.

ಸಚಿವರಿಗೆ ಮನವಿ ಪತ್ರ
ಕುಲಪತಿ ಹಾಗೂ ಕುಲ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ತಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೂ ಮನವಿ ಪತ್ರ ಸಲ್ಲಿಸಿದ್ದೇವೆ.
-ನಿಲಯದ ನೊಂದ ವಿದ್ಯಾರ್ಥಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News