ಬೆಂಗಳೂರು:ಕಳವು ಪ್ರಕರಣ - ಐವರು ಆರೋಪಿಗಳ ಬಂಧನ

Update: 2018-10-16 18:27 GMT

ಬೆಂಗಳೂರು, ಅ.16: ಕಳವು ಪ್ರಕರಣ ಸಂಬಂಧ ಐವರನ್ನು ಬಂಧಿಸಿರುವ ನಗರದ ದಕ್ಷಿಣ ವಿಭಾಗದ ಪೊಲೀಸರು 31 ಮನೆಗಳವು ಪ್ರಕರಣಗಳನ್ನು ಪತ್ತೆ ಹಚ್ಚಿ, 84 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಮೈಸೂರು ರಸ್ತೆಯ ವಾಲ್ಮೀಕಿ ನಗರದ ಇಮ್ರಾನ್(32), ನಾಯಂಡನಹಳ್ಳಿಯ ಖದೀರ್ ಅಹ್ಮದ್ (24), ಮತ್ತಿಕೆರೆಯ ಪ್ರಕಾಶ (29), ನಾಗಸಂದ್ರದ ಮಹೇಶ್ (25) ಹಾಗೂ ಅಂದರಹಳ್ಳಿಯ ದಯಾನಂದ್ (21) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್, ಐವರ ಬಂಧನದಿಂದ 31 ಗಂಭೀರ ಸ್ವರೂಪದ ಕಳ್ಳತನ ಪ್ರಕರಣಗಳು ಪತ್ತೆಯಾಗಿದೆ. ಪ್ರಕರಣದ ಪ್ರಮುಖ ಆರೋಪಿ ಇಮ್ರಾನ್ ವಿಲಾಸಿ ಜೀವನಕ್ಕಾಗಿ ಹಗಲು ವೇಳೆಯೇ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕನ್ನಗಳವು ಮಾಡುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದರು.

ಬಂಧಿತರು ಹನುಮಂತನಗರ, ಪುಟ್ಟೇನಹಳ್ಳಿ, ಜೆಪಿ ನಗರ, ಸುದ್ದಗುಂಟೆ ಪಾಳ್ಯ, ಮೈಸೂರಿನ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಗಳ 7ಕ್ಕೂ ಹೆಚ್ಚು ಕನ್ನಗಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಹನುಮಂತ ನಗರದಲ್ಲಿ ನಡೆದಿದ್ದ ಹಗಲು ಕಳ್ಳತನ ಪ್ರಕರಣವೊಂದನ್ನು ದಾಖಲಿಸಿಕೊಂಡಿದ್ದ ಪೊಲೀಸರು ಖಚಿತ ಮಾಹಿತಿಯಾಧರಿಸಿ ಇವರಿಬ್ಬರನ್ನು ಬಂಧಿಸಿ 2 ಕೆಜಿ 200 ಗ್ರಾಂ ಬೆಳ್ಳಿ, 801 ಗ್ರಾಂ ಚಿನ್ನಾಭರಣ ಸೇರಿ 24 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ವಿವರಿಸಿದರು.

ಗಿರಿನಗರ ಪೊಲೀಸರು ಮನೆಗಳ್ಳತನವೊಂದನ್ನು ದಾಖಲಿಸಿ ಕಾರ್ಯಾಚರಣೆ ನಡೆಸಿ ಮತ್ತಿಕೆರೆಯ ಆರೋಪಿ ಪ್ರಕಾಶ್‌ನನ್ನು ಬಂಧಿಸಿ 18 ಲಕ್ಷ ಮೌಲ್ಯದ 620 ಗ್ರಾಂ ಚಿನ್ನಾಭರಣ, ಸ್ಕೂಟರ್‌ನ್ನು ವಶಪಡಿಸಿಕೊಂಡಿದ್ದಾರೆ. ಈತನ ಬಂಧನದಿಂದ ಗಿರಿನಗರದಲ್ಲಿ ನಡೆದಿದ್ದ 8 ಮನೆಗಳ್ಳತನ ಕೃತ್ಯಗಳು ಪತ್ತೆಯಾಗಿವೆ.

ವಜ್ರದ ಬಳೆಗಳನ್ನು ಕಳವು ಮಾಡಿದ್ದ ಆರೋಪದಡಿ ಮಹೇಶ್ ಹಾಗೂ ದಯಾನಂದ್ ಬಂಧಿಸಿ ಇವರಿಂದ 41 ಲಕ್ಷ 70 ಸಾವಿರ ಮೌಲ್ಯದ 1 ಕೆಜಿ 200 ಗ್ರಾಂ ಚಿನ್ನ, 20 ಗ್ರಾಂ ತೂಕದ ವಜ್ರದ ಬಳೆ, 2 ಕೆಜಿ ಬೆಳ್ಳಿ, 4 ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ ಹನುಮಂತನಗರ, ಗಿರಿನಗರ, ಸಿಕೆ ಅಚ್ಚುಕಟ್ಟುನಲ್ಲಿ ನಡೆದಿದ್ದ ಮನೆಗಳ್ಳತನ ಸೇರಿ 7 ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದರು.

ಮಹೇಶನ ಮೇಲೆ ತಾವರೆಕೆರೆ ಠಾಣಾ ವ್ಯಾಪ್ತಿಯಲ್ಲಿ 6, ಕಬ್ಬನ್ ಪಾರ್ಕ್-2, ಬ್ಯಾಡರಹಳ್ಳಿ-1 ಸೇರಿ 9 ಕಳ್ಳತನ ಪ್ರಕರಣಗಳು ದಾಖಲಾಗಿದ್ದವು ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡಗಳಿಗೆ ನಗದು ಬಹುಮಾನ ಘೋಷಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ದಕ್ಷಿಣ ವಿಭಾಗದ ಡಿಸಿಪಿ ಡಾ. ಶರಣಪ್ಪ ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News