ಶಬರಿಮಲೆ ಮತ್ತು ಮಹಿಳೆಯರ ಪ್ರವೇಶ

Update: 2018-10-16 18:34 GMT

ಬಡತನ ಮತ್ತು ಮಹಿಳೆಯರ ರಕ್ಷಣೆಯ ಕೊರತೆ ಮುಂತಾದ ಸಾಮಾಜಿಕ ಸ್ಥಿತಿಗಳು ಈ ಪಿತೃಪ್ರಧಾನ ರಚನೆಯನ್ನು ಪೋಷಿಸುವ ಪ್ರಮುಖ ಅಂಶಗಳಾಗಿವೆ. ಕಾನೂನುಗಳನ್ನು ಅನುಷ್ಠಾನಕ್ಕೆ ತರುವ ಬದ್ಧತೆಯ ಅಡಿಪಾಯವನ್ನು ಹಾಕಿಕೊಡುವ ಸಾಮಾಜಿಕ ನಿಯಮಗಳ ಅಗತ್ಯವಿದೆ. ಸರ್ವೋಚ್ಚ ನ್ಯಾಯಾಲಯ ಈ ನಿಟ್ಟಿನಲ್ಲಿ ಮುನ್ನಡೆಯನ್ನು ಇಟ್ಟಿದ್ದು ಮುಂದಿನ ದಿನಗಳಲ್ಲಿ ಸಮಾನತೆಯ ಹಾದಿಯಲ್ಲಿ ಸಾಗುವ ಹೊಣೆ ನಮ್ಮದಾಗಿದೆ. ಇಂಥ ಆದೇಶಗಳಿಗೆ ಸರಿಹೊಂದುವ ಪರಿಸ್ಥಿತಿಯನ್ನು ನಿರ್ಮಿಸುವ ಅಗತ್ಯವಿದೆ.


ನಾವು ಒಂದು ಪ್ರಜಾಸತ್ತಾತ್ಮಕ ಸಮಾಜದಲ್ಲಿ ಜೀವಿಸುತ್ತಿದ್ದೇವೆ, ಇಲ್ಲಿ ಎಲ್ಲರೂ ಸಮಾನರು ಎಂದು ನಂಬಲಾಗುತ್ತದೆ. ಕೈಗಾರಿಕಾಪೂರ್ವ ಸಮಾಜದಲ್ಲಿ ಅಸಮಾನತೆ ಎಲ್ಲಡೆಯೂ ಇತ್ತು ಮತ್ತು ಅದು ಜನ್ಮ ಆಧರಿತವಾಗಿತ್ತು. ಭಾರತೀಯ ಸಮಾಜದಲ್ಲಿ ಜನ್ಮ ಆಧರಿತ ಅಸಮಾನತೆಯು ಜಾತಿ ಮತ್ತು ಲಿಂಗವನ್ನೂ ವ್ಯಾಪಿಸಿತ್ತು. ಈ ಅಸಮಾನತೆಯ ಪಳೆಯುಳಿಕೆ ಈಗಲೂ ನಮ್ಮ ಸಮಾಜದಲ್ಲಿದೆ. ಇದರ ಒಂದು ಆಯಾಮ ಪ್ರಾರ್ಥನಾ ಸ್ಥಳಗಳಿಗೆ ಮಹಿಳೆಯರ ಪ್ರವೇಶಕ್ಕೆ ಹೇರಲಾಗಿರುವ ನಿಷೇಧವಾಗಿದೆ. ದೇವಸ್ಥಾನಗಳಲ್ಲಿ ಈ ಅಸಮಾನತೆಯು ಜಾತಿ ಮತ್ತು ಲಿಂಗ ಆಧಾರಿತವಾಗಿರುತ್ತದೆ. ಕಾಲರಾಮ ಮಂದಿರಕ್ಕೆ ದಲಿತರಿಗೆ ಪ್ರವೇಶ ದೊರೆಯಲು ಡಾ. ಭೀಮರಾವ್ ಅಂಬೇಡ್ಕರ್ ಮಾಡಿದ ಹೋರಾಟದ ಬಗ್ಗೆ ಎಲ್ಲರಿಗೂ ತಿಳಿದಿದೆ. ಹಿಂದೂ ದೇವಾಲಯಗಳಿಗೆ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಇತ್ತೀಚೆಗೆ ತೃಪ್ತಿ ದೇಸಾಯಿ ನಡೆಸಿದ ಹೋರಾಟದ ಬಗ್ಗೆಯೂ ಎಲ್ಲರಿಗೂ ತಿಳಿದಿದೆ. ಮುಂಬೈಯ ಹಾಜಿ ಅಲಿ ದರ್ಗಾದ ಒಳಗಿನ ಆವರಣಕ್ಕೆ ಪ್ರವೇಶಿಸಲು ಅವಕಾಶ ನೀಡಬೇಕೆಂದು ಕೋರಿ ಕೆಲವು ಮುಸ್ಲಿಂ ಮಹಿಳೆಯರು ಪ್ರತಿಭಟನೆ ನಡೆಸಿದ ಘಟನೆಯೂ ಇತ್ತೀಚೆಗೆ ನಡೆದಿತ್ತು. ಈ ಪ್ರತಿಭಟನೆಗಳಿಂದ ಈ ಪವಿತ್ರ ಸ್ಥಳಗಳಿಗೆ ಪ್ರವೇಶಿಸಲು ಮಹಿಳೆಯರು ಯಶಸ್ವಿಯಾಗಿದ್ದರು.

ಆದರೆ ಇದು ಕೊನೆಯಲ್ಲ. ಕೆಲವು ಜಾತಿ ಮತ್ತು ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡದ ಅನೇಕ ಪ್ರಸಿದ್ಧ ಮತ್ತು ಪ್ರಸಿದ್ಧವಲ್ಲದ ದೇವಾಲಯಗಳು ನಮ್ಮಲ್ಲಿವೆ. ಇವುಗಳಲ್ಲಿ ಒಂದು ಅತ್ಯಂತ ಪ್ರಸಿದ್ಧ ಪುಣ್ಯ ಸ್ಥಳ ಶಬರಿಮಲೆಯ ಅಯ್ಯಪ್ಪನ ದೇವಸ್ಥಾನ. ಇಲ್ಲಿ ಋತುಮತಿಯರಾಗುವ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಇದಕ್ಕೆ ನೀಡಲಾಗಿರುವ ಕಾರಣವೆಂದರೆ, ಅಯ್ಯಪ್ಪ ಶಾಶ್ವತವಾಗಿ ಬ್ರಹ್ಮಚಾರಿಯಾಗುಳಿಯುವ ಶಪಥ ಮಾಡಿದ್ದರು ಎಂಬುದು. ಸೆಪ್ಟಂಬರ್ 28, 2018ರಂದು ಸರ್ವೋಚ್ಚ ನ್ಯಾಯಾಲಯ ಪಂಚ ಸದಸ್ಯ ಪೀಠವು 4-1 ಅಂತರದಲ್ಲಿ ನೀಡಿದ ತೀರ್ಪಿನಲ್ಲಿ, ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಿರುವುದು ಅಸಮಾನತೆಯಾಗಿದ್ದು ಹಿಂದೂ ಮಹಿಳೆಯರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ತಿಳಿಸಿತ್ತು. ಈ ತೀರ್ಪನ್ನು ಬಹುತೇಕ ಮಹಿಳಾ ಹಕ್ಕುಗಳ ಗುಂಪುಗಳು ಮತ್ತು ಇತರ ಸಂಘಟನೆಗಳು ಸ್ವಾಗತಿಸಿವೆ. ಧಾರ್ಮಿಕ ಆಚರಣೆಗಳಿಗಾಗಿ ಮಹಿಳೆಯರ ಸಮಾನತೆಯ ಹಕ್ಕನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂಬುದನ್ನು ತಕ್ಷಣದ ತ್ರಿವಳಿ ತಲಾಖ್, ಹಾಜಿ ಅಲಿ ಮತ್ತು ಶಬರಿಮಲೆ ಪ್ರಕರಣಗಳಲ್ಲಿ ನ್ಯಾಯಾಲಯ ತೋರಿಸಿಕೊಟ್ಟಿದೆ. ಜಾತಿ ಆಧಾರದಲ್ಲಿ ದೇವಸ್ಥಾನದ ಒಳಗೆ ಪ್ರವೇಶವನ್ನು ನಿರಾಕರಿಸುವುದು ಹೇಗೆ ಅಸಾಂವಿಧಾನಿಕವೋ ಹಾಗೆಯೇ ಲಿಂಗ ಆಧಾರದಲ್ಲಿ ಪ್ರವೇಶ ನಿಷೇಧಿಸುವುದೂ ಅಸಾಂವಿಧಾನಿಕವಾಗಿದೆ. ಮುಖ್ಯವಾಗಿ ನಾವು ನಮ್ಮ ಪ್ರತಿಷ್ಠೆಯನ್ನು ಮತ್ತು ಪಿತೃಪ್ರಧಾನ ವೌಲ್ಯಗಳನ್ನು ದೇವರ ಮೇಲೆ ಹೊರಿಸುತ್ತೇವೆ. ಪುರುಷರ ಬ್ರಹ್ಮಚರ್ಯ ಮತ್ತು ಲೈಂಗಿಕ ಆಯ್ಕೆಗಳ ಹೊರೆಯನ್ನು ಮಹಿಳೆಯರ ಮೇಲೆ ಹೇರುವ ಮೂಲಕ ನಿಜ ಜೀವನದಲ್ಲಿ ಮಹಿಳೆಯರಿಗೆ ತೀವ್ರ ಸ್ವರೂಪದ ಹಾನಿ ಮಾಡಲಾಗುತ್ತಿದೆ.

ಇದೇ ವೇಳೆ, ಜನರ ಭಾವನೆಯನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಆರೆಸ್ಸೆಸ್ ಎಚ್ಚರಿಸಿದೆ. ನ್ಯಾಯಾಲಯದ ತೀರ್ಪನ್ನು ಪರಿಶೀಲಿಸಲು ಮನವಿ ಮಾಡುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಕಾಂಗ್ರೆಸ್ ಸಲಹೆ ನೀಡಿದೆ. ಮತ್ತೊಂದೆಡೆ, ಈ ತೀರ್ಪನ್ನು ರದ್ದುಪಡಿಸಲು ಸುಗ್ರೀವಾಜ್ಞೆಯನ್ನು ಜಾರಿಗೆ ತರುವಂತೆ ರಾಜ್ಯ ಸರಕಾರಕ್ಕೆ ಬಿಜೆಪಿ ಆಗ್ರಹಿಸಿದೆ. ಇನ್ನು ಅನೇಕ ಸಂಘಟನೆಗಳು ಈ ಆದೇಶದ ವಿರುದ್ಧ ಮೇಲ್ಮನವಿ ಹಾಕಲು ಯೋಜನೆಗಳನ್ನು ರೂಪಿಸುತ್ತಿವೆ. ಸಮಾನತೆಯ ಕಡೆಗಿನ ಮಹಿಳೆಯರ ಪ್ರಯಾಣ ಸುಲಭದ್ದೇನೂ ಅಲ್ಲ. ಅಸಹ್ಯ ಸತಿ ಪದ್ಧತಿ ಮೊದಲನೆಯದ್ದು. ರಾಜಾರಾಮ ಮೋಹನ ರಾಯ್ ಅವರು ಈ ಪದ್ಧತಿಯನ್ನು ಮೊದಲ ಬಾರಿಗೆ ವಿರೋಧಿಸಿದರು. ವಿಧವೆಯನ್ನು ಜೀವಂತ ಸುಡುವ ಈ ಅಮಾನವೀಯ ಪದ್ಧತಿಯನ್ನು ತಡೆಯಲು ಕಾನೂನಾತ್ಮಕ ಬೆಂಬಲವಿದ್ದರೂ ಮೋಹನ್ ರಾಯ್ ಅನೇಕ ಸವಾಲುಗಳನ್ನು ಎದುರಿಸಬೇಕಾಗಿಬಂತು. ಹಲವು ಕಾನೂನುಗಳ ಜಾರಿಯ ನಂತರವೂ ಸತಿ ಪದ್ಧತಿಯನ್ನು ಸುಲಭವಾಗಿ ತೊಡೆದು ಹಾಕಲು ಸಾಧ್ಯವಾಗಲಿಲ್ಲ. ಕೆಲವು ದಶಕಗಳ ಹಿಂದೆ 1987ರಲ್ಲಿ ರಾಜಸ್ಥಾನದಲ್ಲಿ ರಜಪೂತ ಮಹಿಳೆ ರೂಪ ಕನ್ವರ್‌ರನ್ನು ಸತಿ ಪದ್ಧತಿಗೆ ಒಳಪಡಿಸಿದಾಗ ಎಚ್ಚೆತ್ತುಕೊಂಡ ಸಮಾಜ ಈ ಕಟುಕ ಪದ್ಧತಿಯನ್ನು ನಿಷೇಧಿಸುವಂತೆ ಆಗ್ರಹಿಸಿತು. ಈ ವೇಳೆ, ಅಂದು ಬಿಜೆಪಿಯ ಉಪಾಧ್ಯಕ್ಷೆಯಾಗಿದ್ದ ವಿಜಯರಾಜೇ ಸಿಂಧ್ಯಾ ಸತಿ ಪದ್ಧತಿಯನ್ನು ಬೆಂಬಲಿಸಿ ರ್ಯಾಲಿಗಳನ್ನು ನಡೆಸಿದ್ದರು. ಹಿಂದೂ ಮಹಿಳೆಯರಿಗೆ ಸಂಬಂಧಿಸಿದಂತೆ ನಡೆದ ಇನ್ನೊಂದು ಪ್ರಮುಖ ಸುಧಾರಣೆಯೆಂದರೆ ಮದುವೆಯ ವಯಸ್ಸಿನದ್ದಾಗಿದೆ.

ಆರಂಭದಲ್ಲಿ ಮಹಿಳೆಯರ ವಿವಾಹದ ವಯಸ್ಸನ್ನು 10ರಿಂದ 12ಕ್ಕೆ ಏರಿಸಬೇಕು ಎಂಬ ವಾದದ ಜೊತೆಗೆ ಹಲವು ವಾದಗಳನ್ನು ಮಂಡಿಸಲಾಗಿತ್ತು. ಆದರೆ ಇದು ಹಿಂದೂ ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂಬ ಹಿನ್ನೆಲೆಯಲ್ಲಿ ಬಾಲ ಗಂಗಾಧರ ತಿಲಕರಂಥ ನಾಯಕರೂ ಇದನ್ನು ವಿರೋಧಿಸಿದ್ದರು. ಹೆಣ್ಮಕ್ಕಳು ಋತುಮತಿಯಾಗುವುದಕ್ಕೂ ಮೊದಲು ಅವರಿಗೆ ವಿವಾಹ ಮಾಡಬೇಕು ಎಂಬ ಭಾವನೆ ಆ ಕಾಲದಲ್ಲಿ ಗಾಢವಾಗಿತ್ತು. ಹಿಂದೂ ಸಮಾಜದಲ್ಲಿ ಸುಧಾರಣೆಗಳನ್ನು ತರಲು ನಡೆಸಲಾದ ಹೋರಾಟಗಳ ಬಗ್ಗೆ ಉಲ್ಲೇಖಗಳಿರುವ ಅನೇಕ ಪುಸ್ತಕಗಳನ್ನು ಬರೆಯಲಾಗಿದೆ. ಅವುಗಳಲ್ಲಿ ಒಂದು, ತನಿಕಾ ಸರ್ಕಾರ್ ಅವರ, ‘ಹಿಂದೂ ವೈಫ್, ಹಿಂದೂ ನೇಶನ್’ ಎಂಬುದು. ಮಹಿಳೆಯರ ವಿವಾಹದ ವಯಸ್ಸನ್ನು 18 ವರ್ಷಕ್ಕೆ ಏರಿಕೆ ಮಾಡಿರುವುದರ ವಿರುದ್ಧ ಕೆಲವು ವರ್ಷಗಳ ಹಿಂದೆ ಅನೇಕ ವೌಲಾನಾಗಳು ವಿರೋಧ ವ್ಯಕ್ತಪಡಿಸಿದ್ದರು. ಅವರ ಪ್ರಕಾರ ಮುಸ್ಲಿಂ ಹೆಣ್ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಮದುವೆ ಮಾಡುವುದು ಕಡ್ಡಾಯವಾಗಿದೆ. ನಮ್ಮದು ಅಸಮಾನತೆಯಿಂದ ಕೂಡಿದ ಸಮಾಜ. ಬಾಲ್ಯ ವಿವಾಹವೆಂಬುದು ಮುಖ್ಯವಾಗಿ ಬಡವರಲ್ಲಿ ಶಿಕ್ಷಣದ ಕೊರತೆಯೊಂದಿಗೆ ಸಂಬಂಧ ಹೊಂದಿದೆ. ಈ ವರ್ಗದಲ್ಲಿ ಹೆಣ್ಮಕ್ಕಳ ಸುರಕ್ಷತೆಯು ಅತ್ಯಂತ ದೊಡ್ಡ ವಿಷಯವಾಗಿದೆ.

ಇಂದು, ಶಬರಿಮಲೆಯ ತೀರ್ಪು ಸಮಾನತೆಯನ್ನು ಬಯಸುವ ಜನರ ಮತ್ತು ಮಹಿಳಾ ಅಸಮಾನತೆಯನ್ನು ಮೈಗೂಡಿಸಿಕೊಂಡಿರುವ ಪ್ರಾಚೀನ ಸಂಪ್ರದಾಯಕ್ಕೆ ಅಂಟಿಕೊಂಡಿರುವವರ ನಡುವೆ ನಡೆಯುವ ಚರ್ಚೆಯ ವಿಷಯವಾಗಿದೆ. ಇಂದಿಗೂ ಈ ವಿಷಯದ ಬಗ್ಗೆ ವಿಸ್ತಾರವಾದ ಸಾಮಾಜಿಕ ಯೋಚನೆಗಳಿವೆ. ಒಂದು ಕಡೆ, ಋತುಮತಿಯರಾದ ಮಹಿಳೆಯರನ್ನು ದೇವಾಲಯ ಪ್ರವೇಶಿಸಲು ಅವಕಾಶ ನೀಡದಂತೆ ನೋಡಿಕೊಳ್ಳುವುದಾಗಿ ಮಹಿಳೆಯರ ಒಂದು ಗುಂಪು ಸವಾಲು ಹಾಕಿದ್ದರೆ ಇನ್ನೊಂದು ಕಡೆಯಲ್ಲಿ, ಋತುಮತಿಯಾದ ಮಹಿಳೆಯರೂ ಜೊತೆಯಾಗಿ ಪ್ರಾರ್ಥಿಸುವ ಏಕಲವ್ಯ ಆಶ್ರಮವಿದೆ. ಇಲ್ಲಿ ಋತುಸ್ರಾವವನ್ನು ಒಂದು ಅನಿಷ್ಟವಾಗಿ ಪರಿಗಣಿಸಲಾಗುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಸಮತೋಲನವನ್ನು ಕಾಪಾಡುವುದು ಹಗ್ಗದ ಮೇಲೆ ನಡೆದಾಡಿದಂತೆ. ಎಲ್ಲ ಧರ್ಮಗಳೂ ಪಿತೃಪ್ರಧಾನವಾಗಿವೆ. ಹಾಗಾಗಿ ನಾವ್ಯಾಕೆ ಈ ಬಲೆಯಲ್ಲಿ ಬೀಳಬೇಕು ಎಂಬ ಕಾರಣಕ್ಕೆ ಅನೇಕ ಮಹಿಳಾ ಸಂಘಟನೆಗಳು ಮಹಿಳೆಯರ ದೇವಾಲಯ ಪ್ರವೇಶದ ಹೋರಾಟದಿಂದ ದೂರ ಉಳಿಯಲು ನಿರ್ಧರಿಸಿದವು.

ಬಹುತೇಕ ಸಾಂಸ್ಥಿಕ ಧರ್ಮಗಳ ಅಡಿಪಾಯ ಪಿತೃಪ್ರಧಾನವೇ ಆಗಿದೆ. ಈಗ ದೇವಾಲಯ ಪ್ರವೇಶಕ್ಕೆ ನಡೆಯುತ್ತಿರುವ ಹೋರಾಟವು ಈ ಪಿತೃಪ್ರಧಾನ ರಚನೆಯ ಸರ್ವನಾಶದತ್ತ ಇಟ್ಟ ಹೆಜ್ಜೆಯಾಗಿದೆ. ಈ ಹೆಜ್ಜೆಯು ಮುಂದಿನ ದಿನಗಳಲ್ಲಿ ಈ ರಚನೆಯನ್ನು ಸಂಪೂರ್ಣ ಹೋಗಲಾಡಿಸುವತ್ತ ಕೊಂಡೊಯ್ಯಲಿದೆ. ಕಾನೂನುಗಳು ತಾವಾಗಿಯೇ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ; ಆದರೆ ಸಮಾನತೆಗಾಗಿ ನಡೆಯುವ ಮೆರವಣಿಗೆಯ ಭವಿಷ್ಯದ ದಿಕ್ಕನ್ನು ನಿಗದಿಪಡಿಸುವಲ್ಲಿ ಈ ಕಾನೂನುಗಳು ಪ್ರಮುಖ ಪಾತ್ರ ನಿಭಾಯಿಸುತ್ತವೆ. ಬಡತನ ಮತ್ತು ಮಹಿಳೆಯರ ರಕ್ಷಣೆಯ ಕೊರತೆ ಮುಂತಾದ ಸಾಮಾಜಿಕ ಸ್ಥಿತಿಗಳು ಈ ಪಿತೃಪ್ರಧಾನ ರಚನೆಯನ್ನು ಪೋಷಿಸುವ ಪ್ರಮುಖ ಅಂಶಗಳಾಗಿವೆ. ಕಾನೂನುಗಳನ್ನು ಅನುಷ್ಠಾನಕ್ಕೆ ತರುವ ಬದ್ಧತೆಯ ಅಡಿಪಾಯವನ್ನು ಹಾಕಿಕೊಡುವ ಸಾಮಾಜಿಕ ನಿಯಮಗಳ ಅಗತ್ಯವಿದೆ. ಸರ್ವೋಚ್ಚ ನ್ಯಾಯಾಲಯ ಈ ನಿಟ್ಟಿನಲ್ಲಿ ಮುನ್ನಡೆಯನ್ನು ಇಟ್ಟಿದ್ದು ಮುಂದಿನ ದಿನಗಳಲ್ಲಿ ಸಮಾನತೆಯ ಹಾದಿಯಲ್ಲಿ ಸಾಗುವ ಹೊಣೆ ನಮ್ಮದಾಗಿದೆ. ಇಂಥ ಆದೇಶಗಳಿಗೆ ಸರಿಹೊಂದುವ ಪರಿಸ್ಥಿತಿಯನ್ನು ನಿರ್ಮಿಸುವ ಅಗತ್ಯವಿದೆ.

Writer - ರಾಮ್ ಪುನಿಯಾನಿ

contributor

Editor - ರಾಮ್ ಪುನಿಯಾನಿ

contributor

Similar News