ಮೊದಲ ಸುತ್ತಿನಲ್ಲೇ ಸೋತ ಸಿಂಧು

Update: 2018-10-16 18:38 GMT

ಒಡೆನ್ಸ್, ಅ.16: ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ.ಸಿಂಧು ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದಾರೆ. ಇನ್ನೋರ್ವ ಹಿರಿಯ ಆಟಗಾರ್ತಿ ಸೈನಾ ನೆಹ್ವಾಲ್ ಶುಭಾರಂಭ ಮಾಡಿದ್ದಾರೆ.

ಇಲ್ಲಿ ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಆರಂಭಿಕ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಸಿಂಧು ಅಮೆರಿಕದ ಬೆವೆನ್ ಝಾಂಗ್ ವಿರುದ್ಧ 17-21, 21-16, 18-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ. ಸಿಂಧು-ಝಾಂಗ್ ನಡುವಿನ ಪಂದ್ಯ ಕೇವಲ 56 ನಿಮಿಷಗಳಲ್ಲಿ ಕೊನೆಗೊಂಡಿದೆ.

ಸಿಂಧು ಸತತ ಮೂರನೇ ಬಾರಿ ಝಾಂಗ್‌ಗೆ ಶರಣಾಗಿದ್ದಾರೆ. ಅಮೆರಿಕದ ಶಟ್ಲರ್ ಝಾಂಗ್ ಈ ವರ್ಷಾರಂಭದಲ್ಲಿ ನಡೆದ ಇಂಡಿಯನ್ ಓಪನ್‌ನಲ್ಲಿ ಸಿಂಧು ಅವರನ್ನು ಸೋಲಿಸಿದ್ದರು.

ಜಕಾರ್ತ ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ ಬಳಿಕ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಸಿಂಧು ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸಿಂಧು ಜಪಾನ್ ಓಪನ್‌ನಲ್ಲಿ ಗಾಯೊ ಫಾಂಗ್‌ಜಿ ವಿರುದ್ಧ ಎರಡನೇ ಸುತ್ತಿನಲ್ಲಿ ನೇರ ಗೇಮ್‌ಗಳಿಂದ ಸೋತಿದ್ದರು.

ಚೀನಾ ಓಪನ್‌ನಲ್ಲೂ ಕಳಪೆ ಪ್ರದರ್ಶನ ನೀಡಿದ್ದ 23ರ ಹರೆಯದ ಸಿಂಧು ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಚೆನ್ ಯುಫಿ ವಿರುದ್ಧ 11-21, 21-11, 15-21 ಅಂತರದಿಂದ ಸೋತಿದ್ದರು.

ಸೈನಾ ಶುಭಾರಂಭ: ಸೈನಾ ನೆಹ್ವಾಲ್ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಹಾಂಕಾಂಗ್‌ನ ನಗಾನ್ ಯಿ ಚೆವುಂಗ್ ವಿರುದ್ಧ 20-22, 21-17, 24-22 ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸೈನಾ-ಚೆವುಂಗ್ ನಡುವಿನ ಹೋರಾಟ 81 ನಿಮಿಷಗಳ ಕಾಲ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News