ಗುಜರಾತ್ ನಲ್ಲಿ ಲುಂಗಿ ಧರಿಸಿದ್ದಕ್ಕೆ ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆ

Update: 2018-10-17 08:22 GMT

ಗುಜರಾತ್, ಅ.17: ವಡೋದರ ಮುನಿಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯ ಪ್ರಾಥಮಿಕ ಶಾಲೆಯ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದ ಬಿಹಾರದ ಮಧುಬನಿ ಜಿಲ್ಲೆಯ ಸಿವಿಲ್ ಇಂಜಿನಿಯರ್ ಹಾಗೂ ಆರು ಪ್ಲಂಬರ್‌ಗಳ ಮೇಲೆ ಸೋಮವಾರ ರಾತ್ರಿ ಸ್ಥಳೀಯ ಮೂವರು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಕಾರ್ಮಿಕರು ಲುಂಗಿ ಧರಿಸಿದ್ದೇಕೆ ಎಂದು ಪ್ರಶ್ನಿಸಿ ಅವರ ಮೇಲೆ ಕೆಯೂರ್ ಪರ್ಮಾರ್ ಮತ್ತಿತರ ಇಬ್ಬರು ಹಲ್ಲೆ ನಡೆಸಿದ್ದಾರೆನ್ನಲಾಗಿದ್ದು ಪರ್ಮಾರ್‌ನನ್ನು ಬಂಧಿಸಲಾಗಿದೆ.

ಮೂವರು ಆರೋಪಿಗಳೂ ಮೊದಲು ಸಿವಿಲ್ ಇಂಜಿನಿಯರ್ ಶತ್ರುಘನ್ ಯಾದವ್ ಜತೆ ಜಗಳಕ್ಕಿಳಿದಿದ್ದು ನಂತರ ಹಲ್ಲೆ ನಡೆಸಿದ್ದರು. ಘಟನೆ ನಡೆದಾಗ ಏಳು ಸಂತ್ರಸ್ತರೂ ನಿರ್ಮಾಣ ಹಂತದ ಕಟ್ಟಡದಲ್ಲಿ ಕುಳಿತಿದ್ದರು. ಹಲ್ಲೆಯಲ್ಲಿ ಅವರೆಲ್ಲರಿಗೂ ಅಲ್ಪಪ್ರಮಾಣದ ಗಾಯಗಳಾಗಿವೆ. ಯಾದವ್ ಕೂಡಲೇ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದು, ಪೊಲೀಸ್ ವಾಹನ ಬರುತ್ತಿದ್ದಂತೆಯೇ ಆರೋಪಿಗಳು ಪರಾರಿಯಾಗಿದ್ದರು. ನಂತರ ಸಂತ್ರಸ್ತರೆಲ್ಲರೂ ಪೊಲೀಸ್ ದೂರು ದಾಖಲಿಸಲು ಸಮಾ ಪೊಲೀಸ್ ಠಾಣೆಗೆ ಹೋಗಿದ್ದು ಅವರು ಅಲ್ಲಿಂದ ವಾಪಸ್ ಬರುವಷ್ಟರಲ್ಲಿ ಯಾದವ್ ಅವರಿಗೆ ಅವರ ಗುತ್ತಿಗೆದಾರ ನೀಡಿದ್ದ ಮೋಟಾರ್ ಬೈಕ್ ಹಾಗೂ ಅಲ್ಲಿದ್ದ ಎರಡು ಪ್ಲಾಸ್ಟಿಕ್ ಕುರ್ಚಿಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು.

ಕಾರ್ಮಿಕರಿಗೆ ಅಸಭ್ಯ ರೀತಿಯಲ್ಲಿ ಲುಂಗಿ ಧರಿಸದಂತೆ ಸ್ಥಳೀಯರು ಕೆಲ ದಿನಗಳಿಂದ ಎಚ್ಚರಿಕೆ ನೀಡುತ್ತಿದ್ದರೂ ಅವರು ಅದಕ್ಕೆ ಕ್ಯಾರೇ ಅನ್ನದಿದ್ದುದೇ ಈ ಹಲ್ಲೆಗೆ ಕಾರಣವೆಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News