ಶಂಕಿತ ಹಂತಕನಿಗೆ ಸೌದಿ ರಾಜಕುಮಾರನ ನಂಟು: ವರದಿ

Update: 2018-10-17 11:03 GMT

ವಾಷಿಂಗ್ಟನ್, ಅ.17: ಸೌದಿ ಪತ್ರಕರ್ತ ಜಮಾಲ್ ಖಶೋಗಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟರ್ಕಿ ಗುರುತಿಸಿದ ಶಂಕಿತನೊಬ್ಬ ಸೌದಿ ಅರೇಬಿಯಾದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅವರ ಸಮೀಪವರ್ತಿಯಾಗಿದ್ದಾನೆಂದು ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಮೂವರು ಇತರ ಶಂಕಿತರು ರಾಜಕುಮಾರ ಮುಹಮ್ಮದ್ ಅವರ ಭದ್ರತೆಗೆ ಸಂಬಂಧಪಟ್ಟವರಾಗಿದ್ದರೆ ಐದನೇ ಶಂಕಿತ ಉನ್ನತ ಮಟ್ಟದ ಫೊರೆನ್ಸಿಕ್ ವೈದ್ಯನಾಗಿದ್ದಾನೆಂದು ‘ನ್ಯೂಯಾರ್ಕ್ ಟೈಮ್ಸ್’ ಹೇಳಿದೆ.

ಇಂತಹುದೇ ವರದಿ ವಾಷಿಂಗ್ಟನ್ ಪೋಸ್ಟ್‍ನಲ್ಲೂ ವರದಿಯಾಗಿರುವುದರಿಂದ ಖಶೋಗಿ ಅವರ ನಾಪತ್ತೆಗೆ ಕೆಲ `ಅಪರಿಚಿತ ಹಂತಕರು' ಕಾರಣವಾಗಿರಬಹುದೆಂದು ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರ ಹೇಳಿಕೆಯ ಬಗ್ಗೆ ಸಂಶಯ ಮೂಡುವಂತಾಗಿದೆ. “ಏನು  ನಡೆದಿದೆ ಎಂದು ನನಗೆ ಗೊತ್ತಿಲ್ಲ” ಎಂದು ಸೌದಿ ದೊರೆ ಸಲ್ಮಾನ್ ಹೇಳಿದ ನಂತರ ಟ್ರಂಪ್ ಮೇಲಿನ ಹೇಳಿಕೆ ನೀಡಿದ್ದರು.

ಸೌದಿ ರಾಜಕುಮಾರ ಮುಹಮ್ಮದ್ ಸಲ್ಮಾನ್ ಅವರ ನೀತಿಗಳ ಕಟು ಟೀಕಾಕಾರರಾಗಿದ್ದ ಖಶೋಗಿ ಅಕ್ಟೋಬರ್ 2ರಂದು ಇಸ್ತಾಂಬುಲ್‍ನ ಸೌದಿ ಕಾನ್ಸುಲೇಟ್ ಕಚೇರಿಗೆ ಸದ್ಯದಲ್ಲಿಯೇ ನಡೆಯಬೇಕಿದ್ದ ತಮ್ಮ ವಿವಾಹಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಹೋದ ನಂತರ ನಾಪತ್ತೆಯಾಗಿದ್ದರು.

ಅವರನ್ನು ಕೊಲ್ಲಲೆಂದೇ ನಿಯೋಜಿಸಲ್ಪಟ್ಟ 15 ಮಂದಿ ಸೌದಿ ಅಧಿಕಾರಿಗಳ ತಂಡ ಇಸ್ತಾಂಬುಲ್ ನಲ್ಲಿ ಅವರನ್ನು ಹತ್ಯೆ ನಡೆಸಿರಬೇಕೆಂದು ಟರ್ಕಿ ಸರಕಾರಿ ಮೂಲಗಳು ಸಂಶಯ ವ್ಯಕ್ತಪಡಿಸಿವೆ. ಆದರೆ ಅವರು ಕಾನ್ಸುಲೇಟ್‍ನಿಂದ ಸುರಕ್ಷಿತವಾಗಿ ವಾಪಸಾಗಿದ್ದರು ಎಂದು ಸೌದಿ ಸರಕಾರ ಹೇಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News