ಅ.25ಕ್ಕೆ ಗುತ್ತಿಗೆ ನೌಕರರ ದೇಶವ್ಯಾಪಿ ಧರಣಿ ಸತ್ಯಾಗ್ರಹ

Update: 2018-10-17 17:11 GMT

ಬೆಂಗಳೂರು, ಅ. 17: ಗುತ್ತಿಗೆ ನೌಕರರಿಗೆ ಸಮಾನವೇತನ ಹಾಗೂ ಸೇವಾ ಭದ್ರತೆ ಸಿಗಬೇಕು ಎಂಬ ಹಕ್ಕೊತ್ತಾಯ ಮುಂದಿಟ್ಟು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅ.25ರಂದು ಆರೋಗ್ಯ ಇಲಾಖೆಯ ಎಲ್ಲ ಗುತ್ತಿಗೆ ನೌಕರರು ಹಾಗೂ ಸಾರ್ವಜನಿಕರು ದೇಶವ್ಯಾಪಿ ಧರಣಿ ಸತ್ಯಾಗ್ರಹ ಮಾಡುವುದಾಗಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ವೇದಿಕೆ ತಿಳಿಸಿದೆ.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಅಧ್ಯಕ್ಷ ಡಾ.ಎಚ್.ವಿ.ವಾಸು ಮಾತನಾಡಿ, ಜೀತ ವ್ಯವಸ್ಥೆಯ ಬದಲಾದ ರೂಪ ದಂತಿರುವ ಗುತ್ತಿಗೆ ಪದ್ಧತಿಯೇ ಒಂದು ಅಸಾಂವಿಧಾನಿಕ ವ್ಯವಸ್ಥೆಯಾಗಿದೆ. ತಮ್ಮ ದುಡಿಯುವ ಆಯಸ್ಸಿನ ಬಹು ಭಾಗವನ್ನು ಇಲಾಖೆಯೊಂದರಲ್ಲಿ ಗುತ್ತಿಗೆ ನೌಕರರಾಗಿ ದುಡಿದು, ಒಂದು ದಿನ ಇದ್ದಕ್ಕಿದ್ದಂತೆ ಇಲಾಖೆಗೆ ಸಂಬಂಧವೇ ಇಲ್ಲದಂತೆ ಹೊರ ದೂಡಲ್ಪಡುವುದು ಅಮಾನವೀಯವಾದುದು ಎಂದು ಹತಾಶೆ ವ್ಯಕ್ತಪಡಿಸಿದರು.

ಕೆಲಸದ ಜಾಗದಲ್ಲಿ ತಾರತಮ್ಯ, ಸಂಬಳದ ಅನಿಶ್ಚಿತತೆ, ಮೂರು ತಿಂಗಳ ಬಾಂಡ್, ವರ್ಷಕ್ಕೊಂದು ದಿನ ಬ್ರೇಕ್ ಇನ್ ಸರ್ವೀಸ್ ಥರದ ವಿವಿಧ ರೀತಿಯ ಅತಂತ್ರದೊಂದಿಗೆ ಸದಾಕಾಲ ಹತ್ತು ಹಲವು ರೀತಿಯ ಸಮಸ್ಯೆಗಳನ್ನು ಗುತ್ತಿಗೆ ನೌಕರರು ಎದುರಿಸಬೇಕಾಗುತ್ತದೆ. ಒಳ ಗುತ್ತಿಗೆಯಲ್ಲಿರುವವರು ಇದ್ದಕ್ಕಿದ್ದಂತೆ ಹೊರಗುತ್ತಿಗೆ ಆಗಬೇಕಾಗುತ್ತದೆ. ಹಾಗೂ ನೇರ ನೇಮಕಾತಿ ಆದರೆ ಕೆಲಸ ಕಳೆದುಕೊಳ್ಳುವ ತೂಗುಗತ್ತಿಯೂ ಸದಾ ತೂಗುತ್ತಿರುತ್ತದೆ ಎಂದು ಬೇಸರಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News