ದಲಿತರಿಗೆ ಮೀಸಲಿಟ್ಟ ಹಣ ಮತ್ತು ದಲಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣ

Update: 2018-10-17 18:41 GMT

ಅಂಬೇಡ್ಕರ್ ರವರು 1927 ಅಕ್ಟೋಬರ್ 2ರಂದು ಪುಣೆಯಲ್ಲಿ ನಡೆದ ದಲಿತ ವಿದ್ಯಾರ್ಥಿಗಳ ವಾರ್ಷಿಕ ಸಾಮಾಜಿಕ ಸಮ್ಮೇಳನವನ್ನು ಉದ್ದೇಶಿಸಿ ‘‘ದಲಿತ ವಿದ್ಯಾರ್ಥಿಗಳ ಕರ್ತವ್ಯದ ಮೇಲೆಯೇ, ದಲಿತರ ಭವಿಷ್ಯ ಅವಲಂಬಿಸಿದೆ’’ ಎಂದು ನುಡಿದಿದ್ದರು. ಅಂತೆಯೇ ಒಂದು ಸಮುದಾಯದ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಆ ಸಮುದಾಯದ ಶಿಕ್ಷಣದಿಂದ ಮಾತ್ರ ಎಂಬುದು ಸರ್ವಕಾಲಿಕ ಸತ್ಯ. ಈ ಹಿಂದಿನ ಸರಕಾರವು ತನ್ನ ಅವಧಿಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಒಟ್ಟು ಹಣ ಸುಮಾರು 86 ಸಾವಿರ ಕೋಟಿಗಳು. ಸರಕಾರ ವಾರ್ಷಿಕ ದಲಿತರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಮೀಸಲಿಟ್ಟ ಒಟ್ಟು ಮೊತ್ತದಲ್ಲಿ ಶೇ. 50ರಷ್ಟು ಹಣ ಖರ್ಚಾಗಿಲ್ಲ ಎಂಬುದು ಅಂಕಿ ಅಂಶಗಳ ಮೂಲಕ ನಮಗೆಲ್ಲಾ ತಿಳಿದಿರುವ ವಿಚಾರ. ಖರ್ಚಾದ ಒಟ್ಟು ಶೇ. 50ರಲ್ಲಿ, ಶೇ. 50ರಷ್ಟು ಹಣ ದಲಿತರನ್ನು ತಲುಪದೆ ಅಧಿಕಾರಿಗಳ, ಮಧ್ಯವರ್ತಿಗಳ ಪಾಲಾಗುತ್ತದೆ ಎಂಬುದು ಸಾಮಾನ್ಯ ಜ್ಞಾನ. ರಾಜ್ಯದ ದಲಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಪ್ರಗತಿಯನ್ನು ಒಮ್ಮೆ ಸಂಬಂಧಿತರು ಅವಲೋಕನ ಮಾಡಿದರೆ ಖಂಡಿತ ದಲಿತರ ಪಾಲಿನ ಬಜೆಟ್‌ನ್ನು ದಲಿತರಿಗೆ ತಲುಪಿಸಬಹುದಾಗಿದೆ.

1.ಕರ್ನಾಟಕ ಸರಕಾರವು ಪಿಎಚ್.ಡಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮಾಸಿಕ 5,000 ರೂ. ಫೆಲೋಷಿಪ್ ನೀಡುತ್ತಿದ್ದು, 2018ನೇ ಸಾಲಿನ ಬಜೆಟ್‌ನಲ್ಲಿ ಈ ಮೊತ್ತವನ್ನು 10,000ಕ್ಕೆ ಹೆಚ್ಚಿಸಿದೆ. ಅಂತೆಯೇ ಅಲ್ಪಸಂಖ್ಯಾತರಲ್ಲಿ ಪಿಎಚ್.ಡಿ ಮತ್ತು ಎಂ.ಫಿಲ್ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಸಹ ಮಾಸಿಕ 25 ಸಾವಿರ ರೂ. ನೀಡಲು ಸರಕಾರ ಕ್ರಮ ಕೈಗೊಂಡಿದೆ. ಆದರೆ ದಲಿತ ವಿದ್ಯಾರ್ಥಿಗಳಿಗೆ?

ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಶೋಷಿತ ಸಮುದಾಯದ ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಿಂತ ಆರ್ಥಿಕವಾಗಿ, ಸಾಮಾಜಿಕವಾಗಿ ದುರ್ಬಲರಾಗಿದ್ದು ಪ್ರತಿಭೆ ಇದ್ದರೂ ಆರ್ಥಿಕ ಸಂಕಷ್ಟದಿಂದ, ತಮ್ಮ ಉನ್ನತ ಶಿಕ್ಷಣವನ್ನು ಪಡೆಯಲು ಸಾಧ್ಯವಿಲ್ಲದೆ ಶಿಕ್ಷಣವನ್ನು ಮಧ್ಯದಲ್ಲಿಯೇ ಮೊಟಕುಗೊಳಿಸಿ, ಸ್ನಾತಕೋತ್ತರ ಪದವಿಗಳನ್ನು ಬಿಟ್ಟು ಮನೆಗೆ ವಾಪಸಾಗುತ್ತಿದ್ದಾರೆ. ಹಾಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ

* ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ (ಎ.ಎಸ್ಸಿ, ಎಂ.ಎ, ಎಂ.ಬಿ.ಎ, ಎಂ.ಫಿಲ್ ಮುಂತಾದ ಕೋರ್ಸ್‌ಗಳು) ಮಾಸಿಕ ರೂ. 15,000 * ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾಸಿಕ ರೂ. 25,000 ಫೆಲೋಷಿಪ್ ನೀಡಿದರೆ, ಈ ಸಮುದಾಯಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವ ಶೇಕಡಾವಾರಿನಲ್ಲಿ ಪ್ರಗತಿ ಕಾಣಬಹುದಾಗಿದೆ.

2.ರಾಜ್ಯ ಸರಕಾರವು 2017ನೇ ಸಾಲಿನ ಬಜೆಟ್‌ನಲ್ಲಿ ಎಲ್ಲಾ ವರ್ಗದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ ಆದಾಯ ಮಿತಿ ಇಲ್ಲದೆ ಶುಲ್ಕವಿನಾಯಿತಿಯನ್ನು ನೀಡಲು ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಅದೇ ರೀತಿ 1968 ಮಾತು 1982ರ ಸರಕಾರದ ಆದೇಶದ ಅನ್ವಯ ಎಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸ್ನಾತಕ, ಸ್ನಾತಕೋತ್ತರ ಮತ್ತು ಪಿಎಚ್.ಡಿ ವಿದ್ಯಾರ್ಥಿಗಳಿಗೆ (ಬಾಲಕರಿಗೆ, ಯಾವುದೇ ಆದಾಯ ಮಿತಿ ಇಲ್ಲದೆ) ಶುಲ್ಕ ವಿನಾಯಿತಿಯನ್ನು ನೀಡಬೇಕಿದೆ. ಇದು ದಲಿತ ವಿದ್ಯಾರ್ಥಿಗಳ ದಶಕಗಳ ಬೇಡಿಕೆಯಾಗಿದೆ.

3. ಉನ್ನತ ಶಿಕ್ಷಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳನ್ನು ಹೊರತುಪಡಿಸಿ, ಮೆಡಿಕಲ್, ಇಂಜಿನಿಯರಿಂಗ್, ಪಶುಸಂಗೋಪನೆ ಮತ್ತು ಕೃಷಿ ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ವಿಶ್ವವಿದ್ಯಾನಿಲಯಗಳ ಮತ್ತು ಕಾಲೇಜುಗಳ ಹಾಸ್ಟೆಲ್‌ಗಳಲ್ಲಿ ದಲಿತ ವಿದ್ಯಾರ್ಥಿಗಳು (ರೂ. 2000-4000ಕ್ಕ್ಕೂ) ಹೆಚ್ಚುವರಿಯಾಗಿ ಊಟದ ವೆಚ್ಚವನ್ನು/ಮೆಸ್ ಬಿಲ್ ಪಾವತಿಸುತ್ತಿದ್ದು, ಈ ಹೊರೆಯನ್ನು ಕಡಿಮೆ ಮಾಡಲು ಕರ್ನಾಟಕ ಸರಕಾರವು ಕೆಲವು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿನಿಲಯಗಳಲ್ಲಿ ಮಾತ್ರ ಅಲ್ಪಮೊತ್ತದ ಹೆಚ್ಚುವರಿ ಊಟದ ವೆಚ್ಚವನ್ನು ನೀಡುತ್ತಿದೆ.

ಆದರೆ ಕೆಲವು ವಿದ್ಯಾರ್ಥಿಗಳು ಹೆಚ್ಚುವರಿ ಭೋಜನ ವೆಚ್ಚವನ್ನು ಪಾವತಿಸಲಾಗದೆ ತಮ್ಮ ಶಿಕ್ಷಣವನ್ನು ಅರ್ಧದಲ್ಲೇ ಬಿಟ್ಟಿರುವ ಉದಾಹರಣೆಗಳು ಅನೇಕ, ಆದುದರಿಂದ ಈ ಸಮುದಾಯಗಳಲ್ಲಿ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಸರಕಾರವು ಭಾರತೀಯ ವಿದ್ಯಾರ್ಥಿ ವೇತನದ 1,200 ರೂ ಜೊತೆಗೆ, ಶಾಶ್ವತವಾಗಿ ಕರ್ನಾಟಕ ವಿದ್ಯಾರ್ಥಿ ವೇತನ 1,200 ರೂ. ಘೋಷಿಸಿ, ಸಮಾನ ವಿದ್ಯಾರ್ಥಿ ವೇತನ ಮೊತ್ತವನ್ನು ನೀಡಬೇಕಾಗಿದೆ. ಆಗ ಒಟ್ಟು ವಿದ್ಯಾರ್ಥಿ ವೇತನ 2.400 ರೂ. ಆಗಲಿದೆ ಅಥವಾ ವಿಶ್ವವಿದ್ಯಾನಿಲಯಗಳಲ್ಲಿ ದಲಿತ ವಿದ್ಯಾರ್ಥಿಗಳಿಗೆ ಶೂನ್ಯ ರೂಪಾಯಿ ಮೆಸ್ ಬಿಲ್ ಯೋಜನೆಯನ್ನು ಜಾರಿಗೊಳಿಸಿ ಉಚಿತ ಶಿಕ್ಷಣದ ನೀತಿಯನ್ನು ಎತ್ತಿ ಹಿಡಿಯಬೇಕಿದೆ. ಈ ಯೋಜನೆಯು ಈಗಾಗಲೇ ಕೆಲವು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಜಾರಿಯಲ್ಲಿರುವುದು ಗಮನಾರ್ಹ.

4. ದಲಿತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಪ್ರಕಟವಾಯಿತು, ಕರ್ನಾಟಕ ರಾಜ್ಯದ ಕೃಷಿ ವಿಶ್ವವಿದ್ಯಾನಿಲಯಗಳು, ಪಶುವೈದ್ಯಕೀಯ ವಿಶ್ವವಿದ್ಯಾನಿಲಯ ಮತ್ತು ರಾಜ್ಯದ ಇತರ ಬೆರಳೆಣಿಕೆಯಷ್ಟು ವಿದ್ಯಾಲಯಗಳು ಮಾತ್ರ ಸ್ವಂತ ನಿರ್ಧಾರದ ಮೇಲೆ ಸರಕಾರದಿಂದ ವಿಶೇಷ ಘಟಕ ಮತ್ತು ಗಿರಿಜನ ಅಭಿವೃದ್ಧಿಯ ಯೋಜನೆಯ ಅಡಿಯಲ್ಲಿ ಬಂದಂತಹ ಹಣದಿಂದ ದಲಿತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಒದಗಿಸಿದವು. ಈ ಯೋಜನೆ ಶಾಶ್ವತಗೊಳಿಸಲು ಒಂದು ಆದೇಶವನ್ನು ಜಾರಿಗೆ ತರಬೇಕಾಗಿರುವುದು ಆವಶ್ಯಕ.

ಸರಕಾರ ಕೇವಲ ವೃತ್ತಿಪರ ಪದವಿಗಳ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್ ಟಾಪ್ ಲಭ್ಯ ಎಂದಿದೆ, ಹಾಗಾದರೆ ಉಳಿದ ವಿದ್ಯಾರ್ಥಿಗಳ ಗತಿಯೇನು? 21ನೇ ಶತಮಾನದಲ್ಲಿ ಅರ್ಥಿಕವಾಗಿ ಸದೃಢವಾಗಿ ಇರುವಂತಹ ಪ್ರತಿಯೊಬ್ಬರ ಮನೆಯಲ್ಲೂ ಕಂಪ್ಯೂಟರ್ ಇದೆ, ಅದೇ ರೀತಿ ದಲಿತರ ಮನೆಗೆ, ದಲಿತ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸಿಗಬೇಕಿದೆ ಇದು ಶೈಕ್ಷಣಿಕ ಹಕ್ಕಿನ ಭಾಗವಾಗಬೇಕಿದೆ.

ಈ ಎಲ್ಲಾ ಶೈಕ್ಷಣಿಕ ನೀತಿಗಳನ್ನು ಜಾರಿಗೊಳಿಸಿ ಸಾಮಾಜಿಕ ನೀತಿಯಿಂದ, ಸಮಾನತೆಯನ್ನು ಸಾಕಾರಗೊಳಿಸುವ ಪ್ರಯತ್ನ ಸರಕಾರದ್ದಾಗಬೇಕಿದೆ. ಅಲ್ಲದೆ ಸರಕಾರವು ರಾಜ್ಯದ ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳ ಶಿಕ್ಷಣದ ವಸ್ತು ಸ್ಥಿತಿಯನ್ನು ಅಭ್ಯಾಸ ಮಾಡಲು ಮತ್ತು ಅವರಿಗೆ ಅನುಗುಣವಾಗಿ ನೀತಿಗಳನ್ನು ರೂಪಿಸಿ, ಸೌಕರ್ಯಗಳನ್ನು ನೀಡಲು, ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿ ಮುಂದಿನ ಹೆಜ್ಜೆ ಇಡಬೇಕಿದೆ.

Writer - ಡಾ.ರಮೇಶ್. ವಿ., ಬೆಂಗಳೂರು

contributor

Editor - ಡಾ.ರಮೇಶ್. ವಿ., ಬೆಂಗಳೂರು

contributor

Similar News