ಶ್ರೀ ಮಂಗಳಾದೇವಿ ಹುಲಿ ವೇಷ ತಂಡದಲ್ಲಿ ಬಣ್ಣ ಬಳಿಯುವ ಮುಸ್ಲಿಂ - ಕ್ರೈಸ್ತ ಯುವಕರು !

Update: 2018-10-19 07:24 GMT

ಮಂಗಳೂರು, ಅ.19: ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ‘ಮುಳಿಹಿತ್ಲು ಗೇಮ್ಸ್ ಟೀಮ್’ (ಎಂಜಿಟಿ)ನ ಶ್ರೀ ಮಂಗಳಾದೇವಿ ಹುಲಿ ವೇಷ ತಂಡದಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಯುವಕರು ಕೂಡಾ ಬಣ್ಣ ಬಲಿಯುತ್ತಿದ್ದು, ಸೌಹಾರ್ದಕ್ಕೆ ಮಾದರಿಯಾಗಿದೆ.

ಈ ಹುಲಿ ವೇಷ ತಂಡ ಇಂದು ನಿನ್ನೆಯದಲ್ಲ. ಇದಕ್ಕೆ ಸುಮಾರು 80 ವರ್ಷಗಳ ಇತಿಹಾಸವಿದೆ. ಆದರೆ, ಅದನ್ನು ದಾಖಲಿಸುವ ಕಾರ್ಯವಾಗದ ಕಾರಣ ಕರಾರುವಕ್ಕಾದ ವರ್ಷ ಸಿಗುತ್ತಿಲ್ಲ. ಆದಾಗ್ಯೂ 1968ರಿಂದ ಮುಳಿಹಿತ್ಲು ಗೇಮ್ಸ್ ಟೀಮ್ ವರ್ಷಾಚರಣೆ ಮಾಡುತ್ತಿದೆ. ಹಾಗಾಗಿ ಇದೀಗ ಈ ಟೀಮ್ 50ನೆ ವರ್ಷಾಚರಣೆಯಲ್ಲಿದೆ.

ಇದೊಂದು ಸಾಂಪ್ರದಾಯಿಕ ಹುಲಿವೇಷ ತಂಡವಾಗಿದೆ. ಜೊತೆಗೆ ಸಾಮರಸ್ಯಕ್ಕೂ ಒತ್ತು ನೀಡಿದೆ. ಅಂದರೆ, ಈ ತಂಡದಲ್ಲಿ ಹಿಂದೂಗಳಲ್ಲದೆ ಮುಸ್ಲಿಂ ಮತ್ತು ಕ್ರೈಸ್ತರು ಕೂಡಾ ಬಣ್ಣ ಬಲಿಯುತ್ತಿದ್ದರು. ಆ ಮೂಲಕ ಸೌಹಾರ್ದಕ್ಕೆ ಈ ತಂಡ ವಿಶೇಷ ಒತ್ತು ನೀಡಿದೆ.

ಪ್ರಸ್ತುತ ಈ ತಂಡದ ಪ್ರಮುಖರಾದ ಸಾಮಾಜಿಕ ಹೋರಾಟಗಾರ ದಿನೇಶ್ ಕುಂಪಲ ಹೇಳುವ ಪ್ರಕಾರ 1968ರಲ್ಲಿ ನಾರಾಯಣ ರೈ ಎಂಬವರು ‘ಎಂಜಿಟಿ’ ತಂಡವನ್ನು ಮುನ್ನಡೆಸಿದರು. ಆ ಬಳಿಕ ನಾರಾಯಣ ಶೆಟ್ಟಿ ಪಡೀಲ್ ಮುನ್ನಡೆಸಿದರು. 1969ರಿಂದ 1982ರವರೆಗೆ ವಿಠಲ ಶೆಟ್ಟಿ ಈ ತಂಡವನ್ನು ಮುನ್ನಡೆಸಿದ್ದರು. ಆರಂಭದಿಂದಲೇ ಈ ತಂಡದಲ್ಲಿ ಮುಸ್ಲಿಂ ಮತ್ತು ಕ್ರೈಸ್ತರು ಕೂಡಾ ವೇಷ ಹಾಕುತ್ತಿದ್ದರು. ಆವಾಗ ಹಿಂದೂ-ಮುಸ್ಲಿಂ-ಕ್ರೈಸ್ತ ಬಾಂಧವ್ಯ ಚೆನ್ನಾಗಿತ್ತು. ಹುಲಿ ವೇಷಧಾರಿಯಾದ ಬಗ್ಗೆ ಹೇಳಿಕೊಳ್ಳಲು ಯಾವ ಮುಸಲ್ಮಾನ, ಕ್ರೈಸ್ತ ವ್ಯಕ್ತಿ ಕೂಡಾ ಹಿಂಜರಿಯುತ್ತಿರಲಿಲ್ಲ. ಈಗ ಹಾಗಲ್ಲ, ಒಂದೆಡೆ ಸಮುದಾಯದವರ ಟೀಕೆ, ಇನ್ನೊಂದೆಡೆ ಕೆಲವು ಶಕ್ತಿಗಳಿಂದ ಮುಸ್ಲಿಂ-ಕ್ರೈಸ್ತರು ಹುಲಿವೇಷ ಹಾಕಬಾರದು ಎಂಬ ಫರ್ಮಾನು. ಹಾಗಾಗಿ ವೇಷ ಹಾಕಿದರೂ ಕೂಡಾ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಹಲವರಿದ್ದಾರೆ.

ಹುಲಿವೇಷದಲ್ಲಿ ಹಸಿರುಬಣ್ಣದ ವೇಷಧಾರಿಯ ಪಾತ್ರ ಪ್ರಮುಖವಾಗಿದೆ. ಇದು ಮುಸ್ಲಿಮರಿಂದಲೇ ಬಂದಿದೆ ಎಂಬ ಪ್ರತೀತಿ ಇದೆ. ಅಂದರೆ, ಹಸಿರು ಬಣ್ಣಧಾರಿಗೆ ಎಲ್ಲವೂ ತಿಳಿದಿದೆ ಎಂಬ ನಂಬಿಕೆ ಇದೆ. ಹುಲಿಯ ಕಸರತ್ತಿನ ಸಂದರ್ಭ ಅಕಸ್ಮಾತ್ ಏನಾದರು ಘಟಿಸಿದರೆ ಆ ಸ್ಥಾನವನ್ನು ತುಂಬಲು ಹಸಿರು ಬಣ್ಣದ ವೇಷಧಾರಿ ಸಿದ್ಧ ಎಂಬ ಸಂದೇಶವನ್ನೂ ಇದು ಸಾರುತ್ತದೆ. ನಮ್ಮ ತಂಡದ ಅನೇಕ ಕಸರತ್ತುಗಳನ್ನು ಜಿಲ್ಲೆಯ ಬಹುತೇಕ ತಂಡಗಳು ಅನುಕರಿಸುತ್ತಿದೆ. ಕುಣಿತದ ಶೈಲಿಗಾಗಿಯೇ ಎಂಜಿಟಿಯ ‘ಮಂಡೆಹುಲಿ’ಗೆ ಬೇಡಿಕೆ ಇರುವುದು ಸುಳ್ಳಲ್ಲ.

ಅದು 1975-76ನೆ ಇಸವಿ. ದೇಶಾದ್ಯಂತ ತುರ್ತು ಪರಿಸ್ಥಿತಿ ಇತ್ತು. ಹಾಗಾಗಿ ಸಾಂಪ್ರದಾಯಿಕ ಹುಲಿವೇಷಕ್ಕೂ ಅವಕಾಶವಿರಲಿಲ್ಲ. ಆದರೆ ಎಂಜಿಟಿ ತಂಡದ ಹಿರಿಯ ಸದಸ್ಯರಾಗಿದ್ದ ಉಮೇಶ್ ಮಂಗಳಾದೇವಿಯವರು ಯಾವುದನ್ನೂ ಲೆಕ್ಕಿಸದೆ ಹುಲಿವೇಷ ಹಾಕಿ ಸಂಪ್ರದಾಯ ಪಾಲಿಸಿ ತಂಡಕ್ಕೆ ಹೆಸರು ತಂದಿರುವುದನ್ನು ದಿನೇಶ್ ಕುಂಪಲ ನೆನಪಿಸುತ್ತಾರೆ.

2000ನೆ ಇಸವಿಯಲ್ಲಿ ಜರ್ಮನಿಯಲ್ಲಿ ಜರುಗಿದ ಬಾಲಮೇಳದಲ್ಲಿ ಎಂಜಿಟಿ ತಂಡದ ಮಕ್ಕಳು ಪಾಲ್ಗೊಂಡಿದ್ದಾರೆ. ಆ ಮೂಲಕ ದೇಶದ ಏಕೈಕ ಮಕ್ಕಳ ವೇಷಧಾರಿ ತಂಡ ಎಂಬ ಕೀರ್ತಿಗೂ ಎಂಜಿಟಿ ತಂಡ ಪಾತ್ರವಾಗಿದೆ. 2014ರಲ್ಲಿ ಮಂಗಳೂರಿನಲ್ಲಿ ನಡೆದ ಪಿಲಿನಲಿಕೆಯಲ್ಲಿ ಪ್ರಮ ಬಹುಮಾನವೂ ಎಂಜಿಟಿಗೆ ಲಭಿಸಿದೆ.

ಸತತ 43 ವರ್ಷದಿಂದ ಮುಳಿಹಿತ್ಲುವಿನ ನವೀನ್ ಎಂಬವರು ವೇಷಧರಿಸಿ ಗಮನ ಸೆಳೆದಿದ್ದರೆ, ಉಮೇಶ್ ಬೋಳಾರ ಎಂಬವರು ಸತತ 45 ವರ್ಷಗಳ ಕಾಲ ಬಣ್ಣ ಹಚ್ಚುವುದರಲ್ಲಿ ಹೆಸರುವಾಸಿಯಾಗಿದ್ದಾರೆ.

‘ನಮ್ಮಲ್ಲಿ ಲ್ಯಾನ್ಸಿ, ಆಲ್ವಿನ್ ಮೊಂತೆರೋ, ಡಾಲ್ಫಿ ಮೊಂತೆರೋ, ಬೆನೆಟ್ ಮೊಂತೆರೋ ಹೀಗೆ ಹಲವು ಕ್ರೈಸ್ತರು ವೇಷಧಾರಿಯಾಗಿದ್ದರು. ಈಗಲೂ ಇದ್ದಾರೆ. ಮುಸ್ಲಿಂ ಯುವಕರಿದ್ದರೂ ಕೂಡಾ ಬೇರೆ ಬೇರೆ ಕಾರಣಕ್ಕೆ ಅವರು ಬಹಿರಂಗಗೊಳ್ಳಲು ಇಷ್ಟಪಡುತ್ತಿಲ್ಲ. ಆದಾಗ್ಯೂ ಈ ಭಾಗದಲ್ಲಿದ್ದ ಇಸ್ಮಾಯೀಲ್-ಖದೀಜಾ ಮತ್ತವರು ಮಕ್ಕಳು ಹುಲಿವೇಷಧಾರಿಗಳಿಗೆ ಅನ್ನದಾನ ಮಾಡುತ್ತಿದ್ದರು. ಮೊದಲ ದಿನ ವೇಷ ಹಾಕಿ ಹೊರಗೆ ಹೋಗುವಾಗ ಇವರ ಮನೆಯಲ್ಲೇ ಪಾನೀಯ ಸೇವಿಸುತ್ತಿದ್ದುದು ಈಗಲೂ ಹಸಿರಾಗಿದೆ ಎಂದು ದಿನೇಶ್ ಕುಂಪಲ ನೆನಪಿಸುತ್ತಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News