ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿ ಗೆದ್ದುಕೊಂಡ ಪಾಕಿಸ್ತಾನ

Update: 2018-10-19 13:06 GMT

ಅಬುಧಾಬಿ,ಅ.19: ವೇಗದ ಬೌಲರ್ ಮುಹಮ್ಮದ್ ಅಬ್ಬಾಸ್ ಅಬ್ಬರದ ಬೌಲಿಂಗ್ ನೆರವಿನಿಂದ ಪಾಕಿಸ್ತಾನ ತಂಡ ಆಸ್ಟ್ರೇಲಿಯ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು 373 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಈ ಗೆಲುವಿನೊಂದಿಗೆ ಪಾಕ್ ತಂಡ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡಿದೆ. ಮೊದಲ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತ್ತು.

 ಗೆಲ್ಲಲು 538 ರನ್ ಗುರಿ ಪಡೆದಿದ್ದ ಆಸ್ಟ್ರೇಲಿಯ 49.4 ಓವರ್‌ಗಳಲ್ಲಿ 164 ರನ್‌ಗೆ ಆಲೌಟಾಯಿತು. 1 ವಿಕೆಟ್ ನಷ್ಟಕ್ಕೆ 47 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯಕ್ಕೆ ಅಬ್ಬಾಸ್ ಮತ್ತೊಮ್ಮೆ ಕಬ್ಬಿಣದ ಕಡಲೆಯಾದರು.

ಮೊದಲ ಇನಿಂಗ್ಸ್‌ನಲ್ಲಿ 33 ರನ್‌ಗೆ 5 ವಿಕೆಟ್‌ಗಳನ್ನು ಕಬಳಿಸಿದ್ದ ಅಬ್ಬಾಸ್ ಎರಡನೇ ಇನಿಂಗ್ಸ್‌ನಲ್ಲೂ ಆಸೀಸ್‌ಗೆ ಸವಾಲಾದರು. 62 ರನ್‌ಗೆ 5 ವಿಕೆಟ್‌ಗಳನ್ನು ಉರುಳಿಸಿದ ಅಬ್ಬಾಸ್ ಪಂದ್ಯದಲ್ಲಿ ಒಟ್ಟು 10 ವಿಕೆಟ್ ಗೊಂಚಲು ಪಡೆದರು. ಈ ಸಾಧನೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೊಂದಿಗೆ ಸರಣಿಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

ಆಸ್ಟ್ರೇಲಿಯದ ಪರ ಎರಡನೇ ಇನಿಂಗ್ಸ್‌ನಲ್ಲಿ ಲಾಬುಚಾಗ್ನೆ(43, 78 ಎಸೆತ)ಅಗ್ರ ಸ್ಕೋರರ್ ಎನಿಸಿಕೊಂಡರೆ, ಆ್ಯರೊನ್ ಫಿಂಚ್(31),ಟಿಮ್ ಹೆಡ್(36),ಮಿಚೆಲ್ ಸ್ಟಾರ್ಕ್(28)ಎರಡಂಕೆಯ ಸ್ಕೋರ್ ಗಳಿಸಿದರು.

ಪಾಕ್ ಪರ ಅಬ್ಬಾಸ್ ಯಶಸ್ವಿ ಬೌಲರ್ ಎನಿಸಿಕೊಂಡರೆ, ಸ್ಪಿನ್ನರ್ ಯಾಸಿರ್ ಶಾ(3-45)ಅಬ್ಬಾಸ್‌ಗೆ ಉತ್ತಮ ಸಾಥ್ ನೀಡಿದರು.

ಸಂಕ್ಷಿಪ್ತ ಸ್ಕೋರ್

ಪಾಕಿಸ್ತಾನ ಮೊದಲ ಇನಿಂಗ್ಸ್: 282/10

ಆಸ್ಟ್ರೇಲಿಯ ಮೊದಲ ಇನಿಂಗ್ಸ್: 145/10

ಪಾಕಿಸ್ತಾನ ಎರಡನೇ ಇನಿಂಗ್ಸ್: 400/9 ಡಿಕ್ಲೇರ್

ಆಸ್ಟ್ರೇಲಿಯ ಎರಡನೇ ಇನಿಂಗ್ಸ್: 164 ರನ್‌ಗೆ ಆಲೌಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News