ಖಶೋಗಿ ನಾಪತ್ತೆ ಪ್ರಕರಣದ ಶಂಕಿತ ವ್ಯಕ್ತಿ ಕಾರು ‘ಅಪಘಾತ’ದಲ್ಲಿ ಮೃತ್ಯು

Update: 2018-10-20 10:15 GMT

ರಿಯಾದ್,ಅ:19 ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿ ಅವರ ನಾಪತ್ತೆ ಪ್ರಕರಣದಲ್ಲಿ ಶಾಮೀಲಾಗಿದ್ದನೆನ್ನಲಾದ ಶಂಕಿತರಲ್ಲೊಬ್ಬ ಶುಕ್ರವಾರ ರಿಯಾದ್‌ನಲ್ಲಿ ‘ಸಂದೇಹಾಸ್ಪದವಾದ ಕಾರು ಅಪಘಾತ’ದಲ್ಲಿ ಮೃತಪಟ್ಟಿದ್ದಾನೆ.

ಸೌದಿ ರಾಯಲ್ ವಾಯುಪಡೆಯಲ್ಲಿ ಲೆಪ್ಟಿನೆಂಟ್ ಆಗಿರುವ 31 ವರ್ಷದ ಮಶಾಲ್ ಸಾದ್ ಅಲ್ ಬೊಸ್ತಾನಿಯು,ಟರ್ಕಿಯ ಸೌದಿ ರಾಯಭಾರಿ ಕಚೇರಿಗೆ ಅಕ್ಟೋಬರ್ 2ರಂದು ಆಗಮಿಸಿದ್ದರೆನ್ನಲಾದ 15 ಮಂದಿ ಶಂಕಿತರಲ್ಲೊಬ್ಬರಾಗಿದ್ದರೆಂದು ಟರ್ಕಿಯ ಸುದ್ದಿಪತ್ರಿಕೆ ಯೆನಿ ಸಫಕ್‌ನ ವರದಿಯನ್ನು ಉಲ್ಲೇಖಿಸಿ ಹುರ್ರಿಯತ್ ಡೈಲಿ ನ್ಯೂಸ್ ಪತ್ರಿಕೆ ವರದಿ ಮಾಡಿದೆ. ಅಕ್ಟೋಬರ್ 2ರಂದು ಟರ್ಕಿ ರಾಯಭಾರಿ ಕಚೇರಿಗೆ ಭೇಟಿ ನೀಡಿದ್ದ ಖಶೋಗಿ ಆನಂತರ ನಿಗೂಢವಾಗಿ ನಾಪತ್ತೆಯಾಗಿದ್ದರು.

ರಿಯಾದ್‌ನಲ್ಲಿ ಬೊಸ್ತಾನಿಯ ಸಾವಿಗೆ ಕಾರಣವಾದ ಅಪಘಾತದ ಕುರಿತಾಗಿ ಯಾವುದೇ ವಿವರಗಳನ್ನು ಸೌದಿಯ ಸುದ್ದಿಮೂಲಗಳು ಬಹಿರಂಗಪಡಿಸಿಲ್ಲವೆಂದು ಹೇಳಿದೆ. ಆದರೆ ಖಶೋಗಿಯ ಶಂಕಿತ ಕೊಲೆ ಪ್ರಕರಣದಲ್ಲಿ ಬೊಸ್ತಾನಿಯ ಪಾತ್ರವಿರುವುದು ಇನ್ನೂ ಸ್ಪಷ್ಟವಾಗಿಲ್ಲವೆಂದು ಮೂಲಗಳು ತಿಳಿಸಿವೆ.

  ಸೌದಿ ಆಡಳಿತವು ಖಶೋಗಿ ಹತ್ಯೆಗೆ ಸಂಬಂಧಿಸಿದ ಪುರಾವೆಗಳನ್ನು ತೊಡೆದುಹಾಕಲು ಏನನ್ನೂ ಮಾಡಲು ಸಿದ್ಧವಿದ್ದು, ಇಸ್ತಾಂಬುಲ್‌ನಲ್ಲಿರುವ ಸೌದಿ ಆರೇಬಿಯದ ಕಾನ್ಸುಲ್ ಜನರಲ್ ಮುಹಮ್ಮದ್ ಅಲ್ ಒತ್ತೈಬಿ ಮುಂದಿನ ಗುರಿಯಾಗುವ ಸಾಧ್ಯತೆಯಿದೆಯೆಂದು ಹುರ್ರಿಯತ್ ಡೈಲಿ ನ್ಯೂಸ್ ಹೇಳಿದೆ.

  ಸೌದಿ ದೂತಾವಾಸ ಕಚೇರಿಯಲ್ಲಿ ಖಶೋಗಿಯನ್ನು ಸೌದಿ ಅಧಿಕಾರಿಗಳು ವಿಚಾರಣೆ ನಡೆಸುವ ವಿವರಗಳಿವೆಯ್ನೆಲಾದ ಧ್ವನಿಮುದ್ರಣದಲ್ಲಿ ಅಲ್‌ಒತ್ತೈಬಿಯ ಧ್ವನಿ ಕೇಳಿಸಿತ್ತೆಂದು ಯೆನಿ ಸಫೆಕ್ ವರದಿ ಮಾಡಿದೆ.

ರಿಯಾದ್ ಉದ್ಯಮ ಸಮಾವೇಶಕ್ಕೆ ಆಮೆರಿಕ, ಫ್ರಾನ್ಸ್ ಬಹಿಷ್ಕಾರ?

ಈ ಮಧ್ಯೆ ಖಶೋಗಿ ನಾಪತ್ತೆ ಪ್ರಕರಣದ ಹಿನ್ನೆಲೆಯಲ್ಲಿ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಟೀವನ್ ಮುನುಚಿನ್, ಫ್ರೆಂಚ್ ವಿತ್ತ ಸಚಿವ ಬ್ರುನೊ ಲೆ ಮೈರ್ ಹಾಗೂ ಬ್ರಿಟನ್‌ನಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ ಕಾರ್ಯದರ್ಶಿ ಲಿಯಾಮ್ ಫಾಕ್ಸ್ ಅವರು ಸೌದಿ ಆರೇಬಿಯದಲ್ಲಿ ನಡೆಯಲಿರುವ ಉದ್ಯಮ ಸಮಾವೇಶದಲ್ಲಿ ಭಾಗವಹಿಸದಿರಲು ತೀರ್ಮಾನಿಸಿದ್ದಾರೆ. ನೆದರ್‌ಲ್ಯಾಂಡ್‌ನ ವಿತ್ತಸಚಿವರೂ ಸೌದಿ ತಂತ್ರಜ್ಞಾನ ಶೃಂಗಸಭೆಗೆ ಹಾಜರಾಗಲು ನಿರಾಕರಿಸಿದ್ದಾರೆ. ಕಳೆದ ಒಂದು ವಾರದಿಂದ ಹಲವಾರು ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಮಾಧ್ಯಮಸಂಸ್ಥೆಗಳು ಕೂಡಾ ಸೌದಿ ತಂತ್ರಜ್ಞಾನ ಶೃಂಗಭೆಯನ್ನು ಬಹಿಷ್ಕರಿಸಲು ನಿರ್ಧರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News