ಬಿಬಿಎಂಪಿಯಿಂದ ಕಾಂಪೋಸ್ಟ್ ಸಂತೆ ಆರಂಭಕ್ಕೆ ಚಿಂತನೆ

Update: 2018-10-19 17:50 GMT

ಬೆಂಗಳೂರು, ಅ.19: ನಗರದಲ್ಲಿ ವೈಜ್ಞಾನಿಕ ತ್ಯಾಜ್ಯ ವಿಂಗಡಣೆ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಕಾಂಪೋಸ್ಟ್ ಸಂತೆ ಆರಂಭಿಸುವ ಕುರಿತು ಬಿಬಿಎಂಪಿ ಚಿಂತನೆ ನಡೆಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ನಿತ್ಯ ನಾಲ್ಕು ಸಾವಿರ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಆದರೆ, ಶೇ.40ರಷ್ಟು ಪ್ರಮಾಣದ ತ್ಯಾಜ್ಯ ಮಾತ್ರ ವಿಂಗಡಣೆಯಾಗುತ್ತಿದ್ದು, ಉಳಿದ ತ್ಯಾಜ್ಯವನ್ನು ಕ್ವಾರಿಗಳಿಗೆ ನೇರವಾಗಿ ಸುರಿಯಲಾಗುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ತ್ಯಾಜ್ಯ ಸಮಸ್ಯೆ ಉದ್ಭವವಾಗುವ ಸಾಧ್ಯತೆಯಿದ್ದು, ಕೂಡಲೇ ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿ ಕಾಂಪೋಸ್ಟ್ ಸಂತೆಗಳನ್ನು ಆರಂಭಿಸುವ ಬಗ್ಗೆ ಆಡಳಿತ ಪಕ್ಷ ನಾಯಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ನಗರದಲ್ಲಿ ದಿನದಿಂದ ದಿನಕ್ಕೆ ತ್ಯಾಜ್ಯ ಪ್ರಮಾಣ ಹೆಚ್ಚಾಗುತ್ತಿದ್ದು, ವಿಂಗಡಣೆ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ತ್ಯಾಜ್ಯ ಸಮಸ್ಯೆ ಸೃಷ್ಟಿಯಾಗುವ ಆತಂಕ ಎದುರಾಗಿದೆ. ಆ ಹಿನ್ನೆಲೆಯಲ್ಲಿ ಪಾಲಿಕೆಯ ಎಲ್ಲ 198 ವಾರ್ಡ್‌ಗಳಲ್ಲಿ ತ್ಯಾಜ್ಯ ವಿಂಗಡಣೆಯ ಕುರಿತು ಜನರಿಗೆ ಜಾಗೃತಿ ಮೂಡಿಸುವ ಕಾಂಪೋಸ್ಟ್ ಸಂತೆಗಳನ್ನು ಆರಂಭಿಸುವಂತೆ ಪತ್ರದಲ್ಲಿ ಕೋರಿದ್ದಾರೆ. ಪದ್ಮಾವತಿ ಮೇಯರ್ ಆಗಿದ್ದ ಸಂದರ್ಭದಲ್ಲಿ ಪ್ರತಿ ರವಿವಾರ ಒಂದೊಂದು ವಾರ್ಡ್‌ನಲ್ಲಿ ಕಾಂಪೋಸ್ಟ್ ಸಂತೆ ನಡೆಸಲಾಗುತ್ತಿತ್ತು. ಆದರೆ, ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಕಳೆದ ಒಂದು ವರ್ಷದಿಂದ ಯಾವುದೇ ವಾರ್ಡ್‌ನಲ್ಲಿ ಸಂತೆಗಳನ್ನು ಆಯೋಜನೆ ಮಾಡಿಲ್ಲ. ಇದರೊಂದಿಗೆ ತ್ಯಾಜ್ಯ ವಿಂಗಡಣೆಯ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ಆಯೋಜಿಸಿಲ್ಲ.

ಸಾರ್ವಜನಿಕರು ಹಾಗೂ ಹಿರಿಯ ಪಾಲಿಕೆ ಸದಸ್ಯರು ಪಾಲಿಕೆಯ ಸಭೆಗಳಲ್ಲಿ ಮಾತನಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆ ಹಿನ್ನೆಲೆಯಲ್ಲಿ ಎಂ.ಶಿವರಾಜು ಅವರು ಆಯುಕ್ತರಿಗೆ ಪತ್ರ ಬರೆದಿದ್ದು, ನಗರದಲ್ಲಿ ತ್ಯಾಜ್ಯ ಸಮಸ್ಯೆ ತಪ್ಪಿಸಲು ಹಾಗೂ ವಿಂಗಡಣೆ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಸಮರ್ಪಕವಾಗಿ ಸಂತೆಗಳನ್ನು ಆಯೋಜಿಸುವಂತೆ ತಿಳಿಸಿದ್ದಾರೆ.

ಕಾಂಪೋಸ್ಟ್ ಸಂತೆಗಳ ಅನುಕೂಲಗಳೇನು?: ವಾರ್ಡ್‌ವಾರು ಆಯೋಜಿಸುವ ಕಾಂಪೋಸ್ಟ್ ಸಂತೆಗಳಲ್ಲಿ ವಿವಿಧ ಸಂಸ್ಥೆಗಳು, ಎನ್‌ಜಿಒಗಳು ಹಾಗೂ ಸ್ವಯಂ ಸೇವಕ ಸಂಸ್ಥೆಗಳು ಭಾಗವಹಿಸುತ್ತವೆ. ಜತೆಗೆ ಮನೆಯಲ್ಲಿಯೇ ಉಚಿತವಾಗಿ ಹಾಗೂ ಅತ್ಯಂತ ಕಡಿಮೆ ಖರ್ಚಿನಲ್ಲಿ ತ್ಯಾಜ್ಯವನ್ನು ಗೊಬ್ಬರವನ್ನಾಗಿಸುವ ಉಪಾಯಗಳು ಹಾಗೂ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡುತ್ತಾರೆ. ಜತೆಗೆ ಗೊಬ್ಬರವನ್ನು ಮನೆಯಲ್ಲಿಯೇ ಹೇಗೆ ಬಳಸಬಹುದು ಹಾಗೂ ಗೊಬ್ಬರದಿಂದ ಹಣ ಸಂಪಾದನೆಯ ಕುರಿತು ಮಾಹಿತಿ ನೀಡುತ್ತಾರೆ. ಇದರಿಂದಾಗಿ ತ್ಯಾಜ್ಯ ವಿಂಗಡಣೆ ಸಮರ್ಪಕವಾಗಿ ಆಗಿ ಪಾಲಿಕೆಯ ಮೇಲಿನ ಹೊರೆ ಕಡಿಮೆಯಾಗುತ್ತದೆ.

ಪ್ರತಿಯೊಂದು ವಾರ್ಡ್‌ಗಳಲ್ಲಿ ಕಾಂಪೋಸ್ಟ್ ಸಂತೆ ಆಯೋಜನೆ ಮಾಡುವುದರಿಂದ ತ್ಯಾಜ್ಯ ವಿಂಗಡಣೆ ಪ್ರಮಾಣ ಹೆಚ್ಚಾಗುತ್ತದೆ. ಜತೆಗೆ ಸಾರ್ವಜನಿಕರಿಗೆ ತ್ಯಾಜ್ಯ ವಿಂಗಡಣೆಯ ಬಗ್ಗೆ ಜಾಗತಿ ಮೂಡಲಿದ್ದು, ಪಾಲಿಕೆಯ ಮೇಲಿನ ಹೊರೆ ಕಡಿಮೆಯಾಗಲಿದೆ. ಕಾಂಪೋಸ್ಟ್ ಸಂತೆ ನಡೆಸುವಂತೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ.

-ಎಂ.ಶಿವರಾಜು, ಆಡಳಿತ ಪಕ್ಷ ನಾಯಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News