ಬಿಬಿಎಂಪಿ ರಸ್ತೆ, ಚರಂಡಿ ಅಭಿವೃದ್ಧಿಗೆ 168 ಕೋಟಿ ರೂ. ಅನುಮೋದನೆ: ಇಮ್ರಾನ್ ಪಾಷಾ

Update: 2018-10-19 18:04 GMT

ಬೆಂಗಳೂರು, ಅ. 19: ಬಿಬಿಎಂಪಿಯ ವಾರ್ಡ್‌ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಸಭೆಯು ನಗರದ ಅನೇಕ ವಾರ್ಡ್‌ಗಳಲ್ಲಿ 168 ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಅನುಮೋದನೆ ನೀಡಿದೆ ಎಂದು ಸಮಿತಿ ಅಧ್ಯಕ್ಷ ಇಮ್ರಾನ್ ಪಾಷಾ ತಿಳಿಸಿದ್ದಾರೆ.

ಕೆಆರ್‌ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 3 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ, ಬ್ಯಾಟರಾಯನಪುರ ವಾರ್ಡ್‌ನಲ್ಲಿ ರಂಗಮಂದಿರ ನಿರ್ಮಾಣಕ್ಕೆ, ಕರಿಸಂದ್ರ ವಾರ್ಡ್‌ನಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿಗೆ, ಮಾರುತಿ ಮಂದಿರ ವಾರ್ಡ್‌ನಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಬೀದಿ ದೀಪ ಅಳವಡಿಕೆಗೆ, ಮಲ್ಲೇಶ್ವರ ವಾರ್ಡ್‌ನಲ್ಲಿ 145 ಕೋಟಿ ರೂ. ವೆಚ್ಚದಲ್ಲಿ ಜಿಮ್, ಆರೋಗ್ಯ ಕೇಂದ್ರ, ಗ್ರಂಥಾಲಯ ನಿರ್ಮಾಣ ಕಾಮಗಾರಿಗಳಿಗೆ ಸಮ್ಮತಿ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಗಾಯತ್ರಿನಗರ ವಾರ್ಡ್‌ನಲ್ಲಿ 50 ಲಕ್ಷ ವೆಚ್ಚದಲ್ಲಿ ಹರಿಶ್ಚಂದ್ರ ಘಾಟ್ ಅಭಿವೃದ್ಧಿ, ಮೈಸೂರು ರಸ್ತೆಯ ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರದ ಅಭಿವೃದ್ಧಿ, ಕಮ್ಮನಹಳ್ಳಿ ಹಾಗೂ ಕಾಚರಕನಹಳ್ಳಿ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ 75 ಲಕ್ಷ ರೂ. ವೆಚ್ಚದ ಯೋಜನೆಗೆ ಹಾಗೂ 14ನೇ ಹಣಕಾಸು ನಿಧಿಯ 2 ಕೋಟಿ ರೂ. ಅನುದಾನದಲ್ಲಿ ಸಗಾಯಪುರ ವಾರ್ಡ್‌ನಲ್ಲಿ ಬೀದಿದೀಪ ಅಳವಡಿಕೆ, ಸ್ಮಶಾನ ಅಭಿವೃದ್ಧಿ, ಒಳಚರಂಡಿ ಸಂಪರ್ಕ, ನೀರಿನ ವ್ಯವಸ್ಥೆ, ಶೌಚಾಲಯ ಕಾಮಗಾರಿಗಳನ್ನು ಕೈಗೊಳ್ಳಲು ಸಮ್ಮತಿ ಸೂಚಿಸಿದ್ದೇವೆ ಎಂದರು. ಸಿದ್ದಾಪುರ ಮತ್ತು ಹೊಂಬೇಗೌಡ ನಗರ ವಾರ್ಡ್‌ಗಳಲ್ಲಿ ನೀರಿನ ವ್ಯವಸ್ಥೆ ಕಲ್ಪಿಸುವ 60ಲಕ್ಷ ರೂ. ವೆಚ್ಚದ ಕಾಮಗಾರಿಗೆ ಕ್ರಿಯಾ ಯೋಜನೆ ರೂಪಿಸಲು ಅನುಮೋದನೆ ನೀಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News