ಏಷ್ಯಾದ ಅತಿ ಉದ್ದದ ಸೇತುವೆ ಎಲ್ಲಿ ನಿರ್ಮಾಣವಾಗುತ್ತಿದೆ ಗೊತ್ತೇ?

Update: 2018-10-20 04:34 GMT

ಹೊಸದಿಲ್ಲಿ, ಅ.20: ಏಷ್ಯಾದ ಅತಿ ಉದ್ದದ ಸೇತುವೆಯನ್ನು ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದೆ. 19.3 ಕಿಲೋಮೀಟರ್ ಉದ್ದದ ಈ ಸೇತುವೆ ಅಸ್ಸಾಂನ ಧುಬ್ರಿ ಮತ್ತು ಮೇಘಾಲಯದ ಫುಲ್‌ಬರಿ ಮಧ್ಯೆ ಸಂಪರ್ಕ ಕಲ್ಪಿಸಲಿದ್ದು, 203 ಕಿಲೋಮೀಟರ್ ಪ್ರಯಾಣವನ್ನು ಇದು ಕಡಿಮೆ ಮಾಡಲಿದೆ.

ನಾಲ್ಕು ಪಥಗಳ ಈ ಸೇತುವೆ ನಿರ್ಮಾಣ ಕಾಮಗಾರಿ 2026-27ರಲ್ಲಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಪ್ರಮುಖ ಸೇತುವೆ ನಿರ್ಮಾಣಕ್ಕಾಗಿ ಸರ್ಕಾರದ ಹೆದ್ದಾರಿ ನಿರ್ಮಾಣ ವಿಭಾಗ, ರಾಷ್ಟ್ರೀಯ ಹೆದ್ದಾರಿ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮಗಳು ಫ್ರಾನ್ಸ್‌ನಿಂದ ಜಾಗತಿಕ ಮಟ್ಟದ ಸಂಸ್ಥೆಗಳ ನೆರವು ಪಡೆಯಲು ನಿರ್ಧರಿಸಿವೆ.

ಸದ್ಯ ನರನಾರಾಯಣ ಸೇತುವೆ ಮೂಲಕ ತೆರಳಿ 200 ಕಿಲೋಮೀಟರ್ ರಸ್ತೆ ಈ ಎರಡು ನಗರಗಳನ್ನು ಸಂಪರ್ಕಿಸುತ್ತದೆ. ಹೊಸ ಸೇತುವೆಯು ರಾಷ್ಟ್ರೀಯ ಹೆದ್ದಾರಿ 127ಬಿನಲ್ಲಿ ಅಸ್ಸಾಂ ಮತ್ತು ಮೇಘಾಲಯ ನಡುವೆ ಸಂಪರ್ಕ ಕಲ್ಪಿಸಲಿದೆ. ಇದೀಗ ಧುಬ್ರಿ ಮತ್ತು ಫುಲ್‌ಬರಿ ನಡುವೆ ಚಿಕ್ಕ ನಾವೆಗಳು ಸಂಚರಿಸುತ್ತವೆ. ನದಿ ದಾಟಲು ಎರಡೂವರೆ ಗಂಟೆ ತಗುಲುತ್ತದೆ. ಕಳೆದ ವರ್ಷ ಉದ್ಘಾಟನೆಯಾದ ಧೋಲಾ- ಸಾಧಿಯಾ ಸೇತುವೆ ಸದ್ಯ  ಭಾರತದ ಅತಿ ಉದ್ದದ ಸೇತುವೆಯಾಗಿದೆ. ಇದರ ಉದ್ದ 9.15 ಕಿಲೋಮೀಟರ್.

ಹೊಸ ಸೇತುವೆ ಕಾರ್ಯಾರಂಭವಾದಲ್ಲಿ ಬ್ರಹ್ಮಪುತ್ರಾ ದಾಟಲು ಕೇವಲ 15-20 ನಿಮಿಷ ಸಾಕಾಗುತ್ತದೆ. ಇದು ನದಿಯ ಇಕ್ಕೆಲಗಳ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡಲಿದೆ ಎಂದು ರಸ್ತೆ ಸಾರಿಗೆ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. ಜಪಾನ್‌ನ ಫಂಡಿಂಗ್ ಏಜೆನ್ಸಿ ಜೆಐಸಿಎ ಇದಕ್ಕೆ ಸಾಲ ನೀಡಲು ಒಪ್ಪಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News