ಕುವೆಂಪು ಸಂದರ್ಭದಲ್ಲಿ ಕನ್ನಡ -ಸಂಸ್ಕೃತದ ಸಂಬಂಧ

Update: 2018-10-20 15:59 GMT

ಕೆಲವು ಸಂಸ್ಕೃತ ಭಾಷಾ ಸಂಶೋಧಕರು ಹೇಳುವಂತೆ, ಸಂಸ್ಕೃತವು ಎಲ್ಲ ಭಾರತೀಯ ಮೂಲ ಭಾಷೆಗಳಿಂದ ಶಬ್ದ ಹಾಗೂ ಉಚ್ಚಾರಗಳನ್ನು ಎರವಲು ಪಡೆದೇ ಸಮೃದ್ಧವಾಗಿರುವುದು. ಸಾರಾಂಶದಲ್ಲಿ ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ಎರವಲು ಸಂಬಂಧವಿದೆಯೇ ಹೊರತು ಅದು ‘ತಾಯಿ-ಮಗಳ’ ಸಂಬಂಧದ ಸ್ವರೂಪದ್ದಲ್ಲ ಎನ್ನುವುದು ಭಾಷಾ ಶಾಸ್ತ್ರಜ್ಞರು ಅಧ್ಯಯನದಿಂದ ಕಂಡುಕೊಂಡ ಸತ್ಯವಾಗಿದೆ. ಆದರೆ ‘‘ಸಂಸ್ಕೃತ ಕನ್ನಡದ ತಾಯಿ’’ ಎನ್ನುವ ವ್ಯವಸ್ಥಿತ ಪ್ರಚಾರದಲ್ಲಿರುವ ಮಿಥ್ಯೆ ಕುವೆಂಪು ಅವರನ್ನೂ ಒಪ್ಪಿಸಿಬಿಟ್ಟಿತ್ತು ಎನ್ನುವುದು ಅಚ್ಚರಿಯ ಸಂಗತಿಯಾಗಿದೆ.

                        ಡಿವಿಜಿ

               ಯು.ಆರ್. ಅನಂತಮೂರ್ತಿ

                             ಬಂಜಗೆರೆ ಜಯಪ್ರಕಾಶ್

                   ರಹಮತ್ ತರೀಕೆರೆ

‘‘ಪ್ರಪಂಚದಲ್ಲಿ ಯಾವ ಸಮಯದಲ್ಲಿ ಏನು ಬೇಕಾದರೂ ಆಗಬಹುದು. ಎಂಥ ವಿನಾಶವಾದರೂ ಒದಗಬಹುದು. ಆದರೆ ಭರತಖಂಡದ ಸಾಂಸ್ಕೃತಿಕ ಐಕ್ಯತೆ ಮಾತ್ರ ಅವಿನಾಶಿ. ಈ ಸಂಸ್ಕೃತಿ ವಿಶೇಷವಾಗಿ ಸಂಸ್ಕೃತಭಾಷೆಯಲ್ಲಿ ರಕ್ಷಿತವಾಗಿ ಘನೀಭೂತವಾಗಿ ಇದೆ. ಅದು 14 ಮುಖ್ಯಭಾಷೆಗಳ ಮೂಲಕ ಸಾಮಾನ್ಯ ಜನರೆಡೆಗೆ ಹರಿದು ಬರುತ್ತಿದೆ. ಸಂಸ್ಕೃತಭಾಷೆ ಸರೋವರ ಇದ್ದ ಹಾಗೆ. 14 ಭಾಷೆಗಳು ಅಲ್ಲಿಂದ ಹೊಮ್ಮಿದ ಕಾಲುವೆಗಳು. -ಕನ್ನಡದ ಕಾಲುವೆ, ಮರಾಠಿ ಕಾಲುವೆ ಇತ್ಯಾದಿ’’ ಎಂದು ಕುವೆಂಪು ಸಂಸ್ಕೃತ ಭಾಷೆಯ ಮಹತ್ವವನ್ನು ವಿವರಿಸುತ್ತಾರೆ. ಕನ್ನಡ ಭಾಷೆಯ ಕುಡಿ ಚಿಗುರೊಡೆದಿದ್ದು ದ್ರಾವಿಡ ಭಾಷೆಯಿಂದ ಮತ್ತು ಬಹುತೇಕ ಭಾರತೀಯ ಭಾಷೆಗಳ ಮೂಲ ಸಂಸ್ಕೃತವಲ್ಲ ಎನ್ನುವ ಸಂಶೋಧನೆಗಳು ಕುವೆಂಪು ಹೀಗೆ ಬರೆದ ಆ ಕಾಲಘಟ್ಟದಲ್ಲಾಗಲೇ ದೃಢಪಡಿಸಿದ ಸಂಗತಿಗಳಾಗಿದ್ದವು. ಇಂಡೋ- ಆರ್ಯನ್ ಭಾಷಾ ಕುಟುಂಬಕ್ಕೆ ಸೇರಿದ ಸಂಸ್ಕೃತ ಮತ್ತು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಕನ್ನಡ ಭಾಷೆಯ ನುಡಿ ಸಾಮಗ್ರಿಗಳಾದ ಅಕ್ಷರ-ಪದ-ವಾಕ್ಯ ಅರ್ಥರಚನೆಯ ಬೇರೆ ಬೇರೆ ಬಗೆಗಳಲ್ಲಿವೆ. ಇವೆರೆಡು ಒಂದೇ ಭಾಷಾ ಮೂಲದಿಂದ ಹುಟ್ಟಿ ಬಂದಿಲ್ಲ. ಪ್ರಾಚೀನ ಕಾಲದಿಂದಲೂ ಕನ್ನಡ ಭಾಷೆಯು ಸಂಸ್ಕೃತ, ಪ್ರಾಕೃತ, ಅರೆಬಿಕ್, ಪರ್ಷಿಯನ್, ಪೋರ್ಚುಗೀಸ್ ಮತ್ತು ಇಂಗ್ಲಿಷ್ ಭಾಷೆಗಳಿಂದ ನೂರಾರು ಪದಗಳನ್ನು ಎರವಲಾಗಿ ಪಡೆದುಕೊಂಡಿದೆ. ಇವುಗಳ ಪೈಕಿ ಸಂಸ್ಕೃತ ಭಾಷೆಯಿಂದ ಅತೀ ಹೆಚ್ಚಿನ ಪದಗಳನ್ನು ಮತ್ತು ಅಂತಹ ಸಂಸ್ಕೃತ ಪದಗಳನ್ನು ಯಥಾವತ್ತಾಗಿ ಸಂಸ್ಕೃತದಲ್ಲಿರುವಂತೆ ಕನ್ನಡ ಬರಹದಲ್ಲಿ ಬರೆಯಲು ತೊಡಗಿದ್ದರಿಂದ ಸಂಸ್ಕೃತ ವರ್ಣಮಾಲೆಯ ಅನೇಕ ಅಕ್ಷರಗಳನ್ನು ಎರವಲಾಗಿ ಪಡೆದುಕೊಂಡಿದೆ. ಕೆಲವು ಸಂಸ್ಕೃತ ಭಾಷಾ ಸಂಶೋಧಕರು ಹೇಳುವಂತೆ, ಸಂಸ್ಕೃತವು ಎಲ್ಲ ಭಾರತೀಯ ಮೂಲ ಭಾಷೆಗಳಿಂದ ಶಬ್ದ ಹಾಗೂ ಉಚ್ಚಾರಗಳನ್ನು ಎರವಲು ಪಡೆದೇ ಸಮೃದ್ಧವಾಗಿರುವುದು. ಸಾರಾಂಶದಲ್ಲಿ ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ಎರವಲು ಸಂಬಂಧವಿದೆಯೇ ಹೊರತು ಅದು ‘ತಾಯಿ-ಮಗಳ’ ಸಂಬಂಧದ ಸ್ವರೂಪದ್ದಲ್ಲ ಎನ್ನುವುದು ಭಾಷಾ ಶಾಸ್ತ್ರಜ್ಞರು ಅಧ್ಯಯನದಿಂದ ಕಂಡುಕೊಂಡ ಸತ್ಯವಾಗಿದೆ. ಆದರೆ ‘‘ಸಂಸ್ಕೃತ ಕನ್ನಡದ ತಾಯಿ’’ ಎನ್ನುವ ವ್ಯವಸ್ಥಿತ ಪ್ರಚಾರದಲ್ಲಿರುವ ಮಿಥ್ಯೆ ಕುವೆಂಪು ಅವರನ್ನೂ ಒಪ್ಪಿಸಿಬಿಟ್ಟಿತ್ತು ಎನ್ನುವುದು ಅಚ್ಚರಿಯ ಸಂಗತಿಯಾಗಿದೆ.

ಸಾಯುತಿದೆ ನಿಮ್ಮ ನುಡಿ, ಓ ಕನ್ನಡದ ಕಂದರಿರ

ಹೊರ ನುಡಿಯ ಹೊರೆಯಿಂದ ಕುಸಿದು ಕುಗ್ಗಿ

ರಾಜ ನುಡಿಯೆಂದೊಂದು, ರಾಷ್ಟ್ರ ನುಡಿಯೆಂದೊಂದು

ದೇವ ನುಡಿಯೆಂದೊಂದು ಹತ್ತಿ ಜಗ್ಗಿ

..ಎಂಬ ತಮ್ಮ ಕವಿತೆಯಲ್ಲಿ ಇಂಗ್ಲಿಷ್, ಹಿಂದಿ ಮತ್ತು ಸಂಸ್ಕೃತ ಭಾಷೆಗಳ ಭಾರದಲ್ಲಿ ಕನ್ನಡ ಸಾಯುತ್ತಿರುವ ಬಗ್ಗೆ ಕುವೆಂಪು ಅವರಿಗೆ ಗಮನವಿದೆ. ಆದರೆ ಬಿ.ಎಂ.ಶ್ರೀ ಅವರಂತೆ ಕನ್ನಡದ ಮೇಲಿನ ಸಂಸ್ಕೃತದ ಭಾರವನ್ನು ಇಳಿಸುವ ಪ್ರಯತ್ನವನ್ನು ಕುವೆಂಪು ಅವರು ಮಾಡಿದಂತೆ ಕಾಣುವುದಿಲ್ಲ. ಆದ್ದರಿಂದ ‘ಕನ್ನಡ ಸಂರಕ್ಷಣೆಯ ಹೋರಾಟದಲ್ಲಿದ್ದ ಎಷ್ಟೋ ಜನರಿಗೆ ಸಂಸ್ಕೃತ ಹಾಗೂ ಹಿಂದಿ ಭಾಷೆಗಳು ಉಂಟುಮಾಡುವ ಅಪಾಯವನ್ನು ಅರಿಯಲಾಗಲೀ, ಅದನ್ನು ಆಡಲಾಗಲೀ ಅವರ ವರ್ಗಪ್ರಜ್ಞೆ ಅವಕಾಶ ಕೊಡಲಿಲ್ಲ. ಅತ್ಯಂತ ನಿಚ್ಚಳವಾಗಿ ಅದನ್ನು ಮಂಡಿಸಿದ ಕುವೆಂಪು ಅದನ್ನೊಂದು ಸಮಗ್ರ ಗ್ರಹಿಕೆಯನ್ನಾಗಿ ರೂಪಿಸಿದ್ದರು’ ಎನ್ನುವ ಸಂಸ್ಕೃತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಅವರ ಅಭಿಪ್ರಾಯ ಚರ್ಚೆಯನ್ನು ಆಹ್ವಾನಿಸುತ್ತದೆ. ‘ಮನುಷ್ಯ ಚೇತನದ ಸರ್ವತೋಮುಖವೂ ವಿಕಾಸಮಾನವೂ ಆದ ಆತ್ಮಶ್ರೀಯನ್ನು ಸಂಸ್ಕೃತಿ’ ಎಂದು ಸಂಕೇತಿಸಬಹುದು ಎಂದು ಕುವೆಂಪು ಅವರು ‘ಭಾರತೀಯ ಸಂಸ್ಕೃತಿ’ ಎಂಬ ತಮ್ಮ ಲೇಖನದಲ್ಲಿ ವಿಶ್ಲೇಷಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕುವೆಂಪು ಅವರು ಹೇಳುತ್ತಿರುವ ಸಂಸ್ಕೃತಭಾಷೆಯಲ್ಲಿ ಘನೀಭೂತವಾಗಿರುವ ಸಂಸ್ಕೃತಿ ಯಾವುದು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಸಂಸ್ಕೃತಭಾಷೆಯನ್ನು ಯಾರು ಬಳಸಬಹುದು, ಯಾರು ಬಳಸಲು ನಿಷಿದ್ಧ ಎನ್ನುವುದೇ ಸಮಾಜವನ್ನು ಜಾತಿ ಆಧಾರದಲ್ಲಿ ವಿಭಜಿಸಿದ್ದು ಚರಿತ್ರೆ. ಆದರೆ ಇದಕ್ಕೆ ಸಂಸ್ಕೃತ ಭಾಷೆಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಬೇಕಾಗಿಲ್ಲ. ಯಾಕೆಂದರೆ ಭಾಷೆಯೊಂದು ಸಂವಹನದ ಮಾಧ್ಯಮ ಅಷ್ಟೆ. ಎಲ್ಲ ಭಾಷೆಗಳಂತೆ ಇದನ್ನು ಸುಡುವ ಬೆಂಕಿಯಾಗಿಯೂ, ಕತ್ತಲೆ ನಿವಾರಿಸುವ ಬೆಳಕಾಗಿಯೂ ಬಳಸಬಹುದು. ಇದಕ್ಕಿಂತ ಮುಖ್ಯವಾಗಿದ್ದು ಸಂಸ್ಕೃತ ಭಾಷೆ ಬಹುಸಂಖ್ಯಾತ ಜನರಿಗೆ ದೂರದಲ್ಲಿ ಬೆರಗುಗೊಳಿಸುವ, ಭಯ ಹುಟ್ಟಿಸುವ ಭಾಷೆಯಾಗಿತ್ತೇ ವಿನಾ ದೈನಂದಿನ ಜೀವನದ ಭಾಗವಾಗಿರಲಿಲ್ಲ ಎನ್ನುವುದು. ಹೀಗಿರುವಾಗ ‘ಸಂಸ್ಕೃತಿ ನಿರ್ಮಾಣ’ದಲ್ಲಿ ಸಂಸ್ಕೃತ ಭಾಷೆಯ ಕೊಡುಗೆ ಏನು? ಇದು ಇಂಬು ನೀಡಿದ್ದು ಸಾಂಸ್ಕೃತಿಕ ಐಕ್ಯತೆಗೋ ಅಥವಾ ಛಿದ್ರತೆಗೋ ಎಂಬ ಪ್ರಶ್ನೆಗಳು ಉದ್ಭ್ಬವವಾಗುತ್ತವೆ. ಕನ್ನಡವು ದ್ರಾವಿಡ ಭಾಷಾ ಮೂಲದಿಂದ ಹುಟ್ಟಿದ್ದು, ಸಂಸ್ಕೃತ ಕನ್ನಡಕ್ಕೆ ವರವಲ್ಲ, ಶಾಪವಾಗಿದೆ ಎಂದು ಡಿ.ಎನ್ ಶಂಕರಭಟ್ಟರಂತಹ ದೇಶಿವಾದಿ ಭಾಷಾ ಶಾಸ್ತ್ರಜ್ಞರು ನಿರೂಪಿಸುತ್ತಿದ್ದಾರೆ. ಕುವೆಂಪು ಅವರ ತಲೆಮಾರಿನ ಹಿರಿಯ ಸಾಹಿತಿಗಳಾದ ಬಿ.ಎಂ ಶ್ರೀ ಅವರು ಹೇರಿಕೊಂಡ ನಿಲುವಿನಲ್ಲಿ ಬರುವ ಸಂಸ್ಕೃತ ಕನ್ನಡಕ್ಕೆ ಕಂಟಕ ಎಂದೇ ಪ್ರತಿಪಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕುವೆಂಪು ಅವರ ಸಂಸ್ಕೃತ ಭಾಷೆಯ ಬಗೆಗಿನ ಇತ್ಯಾತ್ಮಕ ಅಭಿಪ್ರಾಯ ಚರ್ಚಾರ್ಹವಾಗಿದೆ.

ನೀ ಮೆಟ್ಟುವ ನೆಲ -ಅದೆ ಕರ್ನಾಟಕ;

ನೀನೇರುವ ಮಲೆ ಸಹ್ಯಾದ್ರಿ.

ನೀ ಮುಟ್ಟುವ ಮರ - ಶ್ರೀಗಂಧದ ಮರ;

ನೀ ಕುಡಿಯುವ ನೀರ್ - ಕಾವೇರಿ ..ಹೀಗೆ ಕರ್ನಾಟಕವನ್ನು ಸಹ್ಯಾದ್ರಿ ಪರ್ವತ, ಶ್ರೀಗಂಧದ ಮರ ಮತ್ತು ಕಾವೇರಿ ನದಿಯಂತಹ ಉನ್ನತವೆನ್ನಿಸುವ ರೂಪಕಗಳ ಮೂಲಕ ಕುವೆಂಪು ಗುರುತಿಸುತ್ತಾರೆ. ಇದು ವಸ್ತುವಿನ ‘ಗುಣ’ ಕುರಿತ ಶ್ರೇಷ್ಠತೆಯ ಮಾನದಂಡದಿಂದ ಬಂದ ಸಹಜ ರೂಪಕಗಳಂತೆ ಮೇಲ್ನೋಟಕ್ಕೆ ಅನ್ನಿಸುತ್ತದೆ. ಆದರೆ ಕುವೆಂಪು ಅವರ ಸಾಹಿತ್ಯದಲ್ಲಿ ಇಂತಹ ಸಮಾಜ ರೂಢಿಗೆ ತಂದ ಶ್ರೇಷ್ಠತೆ ಮತ್ತು ಕನಿಷ್ಠತೆಯನ್ನು ಅನುಸರಿಸುವುದನ್ನೂ ಕಾಣಬಹುದು. ‘ಗೊಬ್ಬರ’, ‘ಹೀರೆ ಹೂ’, ‘ಕರಿಸಿದ್ದ’ರ ಕುರಿತು ಬರೆಯುವ, ‘ನೀರೆಲ್ಲವೂ ತೀರ್ಥ’ ಎಂದು ಪ್ರತಿಪಾದಿಸುವ ಕುವೆಂಪು ಚಿಂತನೆಯಲ್ಲಿನ ವೈರುಧ್ಯದಂತೆ ಇದು ಕಾಣುತ್ತದೆ. ‘ಹೂವಿನಂತೆಯೇ ಗೊಬ್ಬರ; ಕೋಗಿಲೆಯಂತೆಯೇ ರೈತ; ತಪಸ್ಸಿನಂತೆಯೇ ಶ್ರಮ’; ಹೀಗೆ ಪ್ರತಿಸಂಸ್ಕೃತಿ ಪ್ರತೀಕಗಳನ್ನು ಆಯ್ದುಕೊಳ್ಳುತ್ತಾ ಕುವೆಂಪು ಅವರು ಕಾವ್ಯ ನಿರ್ಮಿಸಿದ್ದಾರೆ. ‘ಅವರಿಗದೊಂದು ಸಾಂಸ್ಕೃತಿಕ ಯುದ್ಧ್ದ. ಅದು ನಿಜ ಕನ್ನಡತ್ವದ ನೆಲೆಗಟ್ಟಾಗಿಯೂ ಅವರ ಕಣ್ಣೊಳಗಿದೆ’ ಎಂಬ ಬಂಜಗೆರೆ ಅವರು ಕಾಣಿಸುವ ಕುವೆಂಪು ಅವರ ತಾತ್ವಿಕತೆಯನ್ನು ಒಪ್ಪಿಕೊಂಡ ನಂತರವೂ ಅವರು ಬಳಸುವ ಭಾಷೆಯ ಬಗೆಗಿನ ಪ್ರಶ್ನೆಗಳು ಉಳಿಯುತ್ತವೆ. ಮೇಲ್ಜಾತಿ ಲೇಖಕರೇ ತುಂಬಿದ್ದ ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮನ್ನು ಪ್ರತಿಷ್ಠಾಪಿಸಿಕೊಳ್ಳಲು ಕುವೆಂಪು ಸಂಸ್ಕೃತಭೂಯಿಷ್ಠವಾಗಿ ಕನ್ನಡವನ್ನು ಬರೆದರು ಎನ್ನುವ ಅಭಿಪ್ರಾಯವಿದೆ. ಇದರ ಜೊತೆಗೆ ಕುವೆಂಪು ಅವರು ಬಳಸಿದ ಕನ್ನಡಕ್ಕೆ ಕಾರಣವನ್ನು ಮೇಲೆ ಪ್ರಸ್ತಾಪಿಸಿದ ಆಯಾಮದಿಂದಲೂ ನೋಡಬೇಕಾಗಿದೆ.

ಕನ್ನಡ ಅಸ್ಮಿತೆಯನ್ನು ಮೇಲ್ಜಾತಿಮೂಲವಾದ ಇಂತಹ ಕ್ರಮಗಳಿಂದ ನೋಡುವುದನ್ನು ದಲಿತ-ಬಂಡಾಯದ ಲೇಖಕರು ಸಕಾರಣವಾಗಿಯೇ ಪ್ರಶ್ನಿಸುತ್ತಾರೆ. ‘ಕನ್ನಡನಾಡಲ್ಲಿ ಶ್ರೀಗಂಧವೂ ಇದೆ; ಜಾಲಿಯ ಮರವೂ ಇದೆ; ಕೋಗಿಲೆಯೂ ಇದೆ, ಕಾಗೆಯೂ ಇದೆ; ಹರಿಯುವ ನದಿಗಳಿವೆ. ಬತ್ತಿದ ಕೆರೆಗಳಿವೆ. ವೈಭವೋಪೇತ ಸೌಧಗಳಿವೆ; ಸೊರಗಿದ ಗುಡಿಸಲುಗಳಿವೆ. ತುಂಬಿದ ಕಡಲು ಇದೆ; ಹಸಿದ ಒಡಲು ಇದೆ. ಹಸಿರಿನ ಕಾಡು ಇದೆ; ಒಣಗಿದ ಊರು ಇದೆ. ಕಾವೇರಿ ಕೃಷ್ಣೆಯರೂ ಇದ್ದಾರೆ; ನೀರಿಲ್ಲದ ಹಳ್ಳಗಳೂ ಇವೆ. ಬಿರುಕುಬಿಟ್ಟ ಕೆರೆಗಳೂ ಇವೆ. ಕನ್ನಡ-ಕರ್ನಾಟಕವೆಂದರೆ ಇವೆಲ್ಲವೂ ಮುಖ್ಯ’ ಎಂದು ಬರಗೂರು ಅವರು ಹೇಳುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು. ‘ಇಲ್ಲ್ಲಿ ಜಾಲಿಯ ಮರ, ಕಾಗೆ, ಬತ್ತಿದ ಕೆರೆಗಳು, ಸೊರಗಿದ ಗುಡಿಸಲುಗಳು, ಹಸಿದ ಒಡಲು, ಒಣಗಿದ ಊರು, ನೀರಿಲ್ಲದ ಹಳ್ಳ, ಬಿರುಕುಬಿಟ್ಟ ಕೆರೆಗಳೂ ಮುಖ್ಯ’ ಎಂದು ಬರಗೂರು ಅವರು ಒತ್ತಿ ಹೇಳುವಲ್ಲಿ ಈವರೆಗೆ ಕೆಳವರ್ಗದವರನ್ನು ಅಮುಖ್ಯವೆಂದು ಭಾವಿಸಲಾಗಿತ್ತು ಎನ್ನುವ ವಿಷಾದದ ದನಿಯಿದೆ. ಇದನ್ನು ಭಾಷೆಗೆ ಅನ್ವಯಿಸಿ ನೋಡುವುದಾದರೆ ಕೆಳವರ್ಗದವರ ಭಾಷೆ ದಲಿತ-ಬಂಡಾಯ ಕಾಲಘಟ್ಟದವರೆಗೂ ಅವಜ್ಞೆಗೆ ಒಳಗಾಗಿರುವುದನ್ನು ಕಾಣಬಹುದು. ವಚನ ಚಳವಳಿ ಇಂತಹ ಅವಜ್ಞೆಯನ್ನು ನಿವಾರಿಸುವ ದಿಕ್ಕಿನಲ್ಲಿ ಮುನ್ನುಡಿ ಬರೆದರೂ ಅದು ಮುಂಬರಿಯಲಿಲ್ಲ. ಕುವೆಂಪು ಅವರು ತಮ್ಮ ಗುತ್ತಿ, ತಿಮ್ಮಿ, ಐತರಂತಹ ಕೆಳವರ್ಗದ ಪಾತ್ರಗಳನ್ನು ಜೀವಂತಿಕೆಯಿಂದ ಚಿತ್ರಿಸಿದರೂ ಅವರ ಒಟ್ಟು ಸಾಹಿತ್ಯದಲ್ಲಿ ಬಳಕೆಯಾದ ಭಾಷೆ ಮೇಲ್ವರ್ಗದ್ದಾಗಿತ್ತು. ‘ಕಲೆಗಾಗಿ ಕಲೆಯಲ್ಲ’ ಎಂದು ಬಲವಾಗಿ ಪ್ರತಿಪಾದಿಸಿದ ಪ್ರಗತಿಶೀಲರೂ, ಭಾಷೆಗೊಂದು ರೂಪಕಗಳ ಮಾಂತ್ರಿಕ ಶಕ್ತಿಯನ್ನು ತಂದುಕೊಟ್ಟ ನವ್ಯದವರೂ ಕೂಡ ದೇವನೂರ ಮಹಾದೇವ ಅವರ ಆಗಮನದವರೆಗೆ ಈ ಬಗ್ಗೆ ಚಿಂತಿಸಿದಂತೆ ಕಾಣುವುದಿಲ್ಲ.

ಕುವೆಂಪು ತಮ್ಮ ಸಾಹಿತ್ಯದಲ್ಲಿ ಸಂಸ್ಕೃತ ಭಾಷೆಯನ್ನು ಬಳಸುವ ಬಗೆಗಿನ ಚರ್ಚೆಗಳು ಇನ್ನೂ ಕೊನೆ ಮುಟ್ಟಿಲ್ಲ. ನಾನು ಕಂಡುಕೊಂಡಂತೆ ಕನ್ನಡ ವಿದ್ವತ್ ವಲಯದಲ್ಲಿ ಕುವೆಂಪು ಅವರಲ್ಲಿ ಕನ್ನಡ ಮತ್ತು ಸಂಸ್ಕೃತದ ನಡುವಿನ ಸಂಬಂಧವನ್ನು ಕುರಿತಂತೆ ಆರು ಗ್ರಹಿಕೆಗಳು ಇವೆ. ಇದನ್ನು ಕುವೆಂಪು ಅವರನ್ನು ಹೊರತುಪಡಿಸಿಯೂ ಕನ್ನಡ ಮತ್ತು ಸಂಸ್ಕೃತದ ಸಂಬಂಧದ ಗ್ರಹಿಕೆಯನ್ನಾಗಿ ನೋಡುವುದು ಸಾಧ್ಯವಿದೆ. ಆ ಆರು ಗ್ರಹಿಕೆಗಳು ಹೀಗಿವೆ :

1.ಕುವೆಂಪು ಬಳಸುವ ಸಂಸ್ಕೃತ ಕನ್ನಡಕ್ಕೆ ಹೊರೆಯಾಗುತ್ತದೆ.

2.ಸಂಸ್ಕೃತದ ಬಳಕೆಯಿಂದ ತಮ್ಮ ಬರಹದ ‘ಘನತೆ’ ಹೆಚ್ಚಿಸಿಕೊಳ್ಳುವ ಉದ್ದೇಶ.

3.ಯುದ್ಧತಂತ್ರವಾಗಿ ಮತ್ತು ಆಧ್ಯಾತ್ಮಿಕ ಹಕ್ಕುದಾರಿಕೆಯ ಪ್ರತಿಪಾದನೆಯಾಗಿ ಸಂಸ್ಕೃತವನ್ನು ಕುವೆಂಪು ಬಳಸುತ್ತಾರೆ.

4.ಕುವೆಂಪು ಸಾಹಿತ್ಯದ ಮೂಲಕ ಸಂಸ್ಕೃತದಲ್ಲಿದ್ದ ಕಾವ್ಯಗಳು, ವಿಚಾರಗಳು ಮತ್ತು ಕಲಾತ್ಮಕ ಸೂಕ್ಷ್ಮಗಳ ಲಾಭ ಕನ್ನಡಕ್ಕೆ ದಕ್ಕುತ್ತವೆ, ಸಂಸ್ಕೃತ ಭಾಷೆ ಮತ್ತು ವಾಙ್ಮಯದ ಕಸುವು ಕನ್ನಡಕ್ಕೆ ದಕ್ಕಿದೆ.

5.ಕನ್ನಡದಲ್ಲಿ ಬರೆಯುವಾಗ ಸಂಸ್ಕೃತ ಬಳಸುವುದು ಕುವೆಂಪು ಅವರಿಗೆ ಅನಿವಾರ್ಯವಾಗಿರಬಹುದು.

6.ಕುವೆಂಪು ಅವರ ಕನ್ನಡದ ಮೂಲಕ ಸಂಸ್ಕೃತ ಮರುಜೀವ ಪಡೆಯುತ್ತದೆ. ಮೇಲ್ಕಂಡ ಆರೂ ಗ್ರಹಿಕೆಗಳು ಮೂಡಿದ ಸಂದರ್ಭ ಮತ್ತು ಹಿನ್ನೆಲೆಯನ್ನು ಈಗ ನೋಡೋಣ.

1. ಕುವೆಂಪು ಅವರ ಭಾಷೆ ಮತ್ತು ಶೈಲಿಗಳು ಎಷ್ಟರಮಟ್ಟಿಗೆ ಸಂಸ್ಕೃತಭೂಯಿಷ್ಠವಾಗಿವೆಯೆಂದರೆ ಅವರ ಕಾದಂಬರಿಗಳಲ್ಲಿ ಕೆಲವು ಕಡೆ ಅವರು ಬರೆದಿದ್ದು ಓದುಗನಿಗೆ ಆರ್ಥವಾಗದೆ ಹೋಗುತ್ತವೆ ಎಂದು ದಲಿತ ಮುಖಂಡರಾದ ಬಿ.ಕೃಷ್ಣಪ್ಪನವರು ಅಭಿಪ್ರಾಯಪಟ್ಟಿದ್ದರು. ಈ ಅಭಿಪ್ರಾಯ ಒಂದು ವರ್ಗದ ಓದುಗರಲ್ಲಿ ಸಾಮಾನ್ಯವಾಗಿವೆ. ಈ ಅಭಿಪ್ರಾಯ ಸಮಾಜದ ಪ್ರತಿಷ್ಠಿತ ವರ್ಗವನ್ನು ಕುವೆಂಪು ಓಲೈಸುತ್ತಾರೆ ಎಂಬರ್ಥದ ಟೀಕೆಯಾಗಿ ವ್ಯಕ್ತವಾದದ್ದೇ ಹೆಚ್ಚು. ಇದು ಕುವೆಂಪು ಅವರು ತಮ್ಮ ಸಾಹಿತ್ಯದಲ್ಲಿ ಬಳಸುವ ಸಂಸ್ಕೃತ ಪದಗಳು, ನುಡಿಗಟ್ಟುಗಳು ಕನ್ನಡಕ್ಕೆ ಹೊರೆಯಾಗುತ್ತವೆ ಎಂದು ಗ್ರಹಿಸುವ ದೃಷ್ಟಿಕೋನ.

2. ಯೋಗ್ಯವಾದ ಕನ್ನಡ ಪದಗಳು ಇರುವಲ್ಲೂ ಸಂಸ್ಕೃತ ಪದಗಳನ್ನು ಬಳಸುವ ಪ್ರವೃತ್ತಿಗೆ ತಮ್ಮ ಬರಹದ ‘ಘನತೆ’ ಹೆಚ್ಚುತ್ತದೆಂಬ ಅನಿಸಿಕೆ ಕಾರಣವಾಗಿದೆ. ಮೇಲ್ವರ್ಗದ ಬರಹಗಾರರು ತಮ್ಮ ಬರಹಗಳ ಮೂಲಕ ವರ್ಗಭೇದವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವುದನ್ನು ವಿರೋಧಿಸುವ ಬಂಡಾಯ ಬರಹಗಾರರಿಗೂ ತಮ್ಮ ಬರಹಗಳಲ್ಲಿ ಅವುಗಳ ‘ಘನತೆ’ ಹೆಚ್ಚಿಸುವುದಕ್ಕಾಗಿ ಹೆಚ್ಚು ಹೆಚ್ಚು ಸಂಸ್ಕೃತ ಪದಗಳನ್ನು ಬಳಸುವಂತಹ ಪ್ರವೃತ್ತಿಯಿಂದ ಹೊರಬರಲು ಸಾಧ್ಯವಾಗಿಲ್ಲ ಎಂದು ಡಿ.ಎನ್. ಶಂಕರ ಭಟ್ಟರು ಅಭಿಪ್ರಾಯ ಪಟ್ಟಿದ್ದಾರೆ. ಕುವೆಂಪು ಅವರನ್ನು ಉದ್ದೇಶಿಸಿ ಅವರು ಈ ಅಭಿಪ್ರಾಯವನ್ನು ಮಂಡಿಸಿಲ್ಲವಾದರೂ ಕುವೆಂಪು ಅವರು ಶೂದ್ರ ಸಮುದಾಯದಿಂದ ಬಂದವರಾಗಿದ್ದು ಇದನ್ನು ಅವರ ಬರಹಗಳಿಗೂ ಅನ್ವಯಿಸಬಹುದಾಗಿದೆ.

3. ಕುವೆಂಪು ಕಾದಂಬರಿಗಳಲ್ಲಿ ದಲಿತ ಪಾತ್ರಚಿತ್ರಣ ಕುರಿತಂತೆ ಪ್ರಶ್ನೆಗಳನ್ನೆತ್ತಿದ ಬಿ.ಕೃಷ್ಣಪ್ಪ ಅವರು ಕುವೆಂಪು ಸಂಸ್ಕೃತಮಯ ಭಾಷೆ ಬಳಸಲು ಕಾರಣ ಆ ಕಾಲದ ಬ್ರಾಹ್ಮಣಶಾಹಿ ಭಾಷೆ, ಶೈಲಿಗೆ ಛಾಲೆಂಜ್ ಮಾಡುವುದಾಗಿತ್ತು ಎಂದು ಗ್ರಹಿಸುತ್ತಾರೆ. ಇದು ಭಾಷೆಯ ಹೊರಮೈ ಕುರಿತ ಗ್ರಹಿಕೆಯಾದರೆ ಸಂಸ್ಕೃತದ ಭಾಷೆಯೊಳಗೆ ಹುದುಗಿರುವ ಜ್ಞಾನಕ್ಕೆ ಸಂಬಂಧಿಸಿದಂತೆ ವೈದಿಕ ವಾಙ್ಮಯದಲ್ಲಿ ಇರುವ ಪ್ರಗತಿಪರ ಚಿಂತನೆಗಳನ್ನು ಪರಿಷ್ಕರಿಸಿ ಬರೆಯುವುದು ವೈದಿಕ ಸನಾತನವಾದವನ್ನು ಅದರ ಸರಕಿನಿಂದಲೇ ಎದುರಿಸುವ ಕುವೆಂಪು ಅವರ ಯುದ್ಧತಂತ್ರಗಳಲ್ಲೊಂದು ಎಂದು ರಹಮತ್ ತರೀಕೆರೆ ಅವರು ಗುರುತಿಸುತ್ತಾರೆ. ಇದೇ ರೀತಿ ಸಂಸ್ಕೃತಭೂಯಿಷ್ಠತೆಯಿಂದ ಬರೆಯುವ ಕ್ರಮ ಕೂಡ ವೈದಿಕ ಸನಾತನವಾದವನ್ನು ಅದರ ಭಾಷೆಯ ನೆರವಿನಲ್ಲೇ ಎದುರಿಸುವ ಕುವೆಂಪು ಅವರ ಇನ್ನೊಂದು ಯುದ್ಧತಂತ್ರವಾಗಿರಬಹುದು ಎಂದು ಅನುಮಾನಿಸಬಹುದಾಗಿದೆ. ಈ ಸಂಸ್ಕೃತಭೂಯಿಷ್ಠತೆ ‘ನಾನೇನು ನಿನಗಿಂತ ಕಮ್ಮಿಯಿಲ್ಲ’ ಎಂದು ತೋರಿಸುವ ತುಡಿತಗಳಿಂದ ಬಂದಿತು. ಇದರ ಹಿಂದೆ ಆಳುವ ವೈದಿಕ ಸಂಸ್ಕೃತಿಯ ಆಧ್ಯಾತ್ಮಿಕ ಹಕ್ಕುಗಳು ಶೂದ್ರರಿಗೂ ಇವೆ ಎಂಬ ಹಕ್ಕುದಾರಿಕೆಯ ನಿಲುವಿದೆ ಎಂದೂ ಅವರು ಅಭಿಪ್ರಾಯಪಡುತ್ತಾರೆ. ಈ ಅಭಿಪ್ರಾಯ ಕನ್ನಡ-ಸಂಸ್ಕೃತ ಸಂಬಂಧಗಳ ಕುರಿತ ಚರ್ಚೆಯನ್ನು ಉಳಿದ ನಾಲ್ಕು ಬಗೆಯ ಸಾಹಿತ್ಯಕ ನೆಲೆಗಳಿಂದ ಸಾಮಾಜಿಕ ನೆಲೆಗೆ ಕೊಂಡೊಯ್ಯುತ್ತದೆ. ಕುವೆಂಪು ವೈದಿಕ ಸನಾತನವಾದಕ್ಕೆ ಸವಾಲಾಗಿ, ಯುದ್ಧತಂತ್ರವಾಗಿ ಮತ್ತು ಆಧ್ಯಾತ್ಮಿಕ ಹಕ್ಕುದಾರಿಕೆಯ ಪ್ರತಿಪಾದನೆಯಾಗಿ ಸಂಸ್ಕೃತವನ್ನು ಬಳಸುತ್ತಾರೆ ಎನ್ನುವ ಗ್ರಹಿಕೆಯಿದು.

4. ಅನಂತಮೂರ್ತಿ ಅವರು ತಮ್ಮ ‘ಇಂಗ್ಲಿಷ್ ಬ್ರಾಹ್ಮಣ, ಕನ್ನಡ ಶೂದ್ರ’ ಲೇಖನದಲ್ಲಿ ಕುಮಾರವ್ಯಾಸ, ಪಂಪ, ಬಸವಣ್ಣರಂತಹ ಪ್ರಾಚೀನ ಕವಿಗಳು ಸಂಸ್ಕೃತದಲ್ಲಿದ್ದ ವಿಚಾರಗಳನ್ನು, ಕಾವ್ಯವನ್ನು ತಮ್ಮ ಜನರ ಸೊತ್ತಾಗಿ ಮಾಡಿರುವುದರ ಕಡೆ ನಮ್ಮ ಗಮನ ಸೆಳೆಯುತ್ತಾರೆ. ‘‘ನಿತ್ಯದ ವ್ಯವಹಾರದಲ್ಲಿ ನಿರುದ್ದೇಶವೂ, ನಿಯೋಗರಹಿತವೂ ಆಗಿರಬಹುದಾದ ಸಂಸ್ಕೃತದ ಬಳಕೆಯು ಕವಿತೆಯ ಚೌಕಟ್ಟಿನೊಳಗೆ ಕೆಲವು ಖಚಿತವಾದ ಕಲಾತ್ಮಕವಾದ ಉದ್ದೇಶಗಳನ್ನು ಹೊಂದಿರುತ್ತದೆ’’ ಎಂದು ಪಂಪನು ತನ್ನ ಸಾಹಿತ್ಯದಲ್ಲಿ ಸಂಸ್ಕೃತವನ್ನು ಬಳಸುವ ಹಿನ್ನೆಲೆಯನ್ನು ಕುರಿತು ಎಚ್.ಎಸ್ ರಾಘವೇಂದ್ರರಾವ್ ವಿಶ್ಲೇಷಿಸುತ್ತಾರೆ. ಅನಂತಮೂರ್ತಿ ಮತ್ತು ಎಚ್.ಎಸ್. ರಾಘವೇಂದ್ರರಾವ್ ಅವರು ಕುಮಾರವ್ಯಾಸ, ಬಸವಣ್ಣ, ಪಂಪ ಅವರ ಸಂದರ್ಭದಲ್ಲಿ ಮಾಡುವ ವಿಶ್ಲೇಷಣೆಗಳನ್ನು ಕುವೆಂಪು ಅವರ ಸಾಹಿತ್ಯದ ಸಂದರ್ಭಕ್ಕೂ ಅನ್ವಯಿಸಬಹುದಾಗಿದೆ. ‘‘ಕುವೆಂಪು ಅವರ ಶೈಲಿ ಸಂಸ್ಕೃತದಿಂದ ತನ್ನ ಶಕ್ತಿಯನ್ನೂ ಮಲೆನಾಡಿನ ಜಾನಪದದಿಂದ ತನ್ನ ಜೀವವನ್ನೂ ಪಡೆದುಕೊಳ್ಳುತ್ತದೆ, ಆದ್ದರಿಂದ ಸಂಸ್ಕೃತದಿಂದ ಕನ್ನಡಕ್ಕೆ ಒಳಿತೇ ಆಗಿದೆ’’ ಎಂದು ಅನಂತಮೂರ್ತಿ ತಮ್ಮ ‘ಬೆತ್ತಲೆ ಪೂಜೆ ಯಾಕೆ ಕೂಡದು?’ ಲೇಖನದಲ್ಲಿ ವ್ಯಕ್ತಪಡಿಸುವ ಅಭಿಪ್ರಾಯ ಇದನ್ನು ಸ್ಪಷ್ಟಪಡಿಸುತ್ತದೆ. ಕುವೆಂಪು ಅವರ ಸಾಹಿತ್ಯದ ಮೂಲಕ ಸಂಸ್ಕೃತದಲ್ಲಿದ್ದ ಕಾವ್ಯಗಳು, ವಿಚಾರಗಳು ಮತ್ತು ಕಲಾತ್ಮಕ ಸೂಕ್ಷ್ಮಗಳ ಲಾಭ ಕನ್ನಡಕ್ಕೆ ದಕ್ಕಿವೆ ಎನ್ನುವ ಗ್ರಹಿಕೆ ಇದಾಗಿದೆ. ಇದರೊಂದಿಗೆ ಕನ್ನಡ ಭಾಷೆ ಮತ್ತು ವಾಙ್ಮಯದ ಒಡನಾಟದಿಂದ ಬಂದಿರುವ ಕಸುವನ್ನು ಕುವೆಂಪು ಗದ್ಯದಲ್ಲಿ ರಹಮತ್ ಅವರು ಗುರುತಿಸುತ್ತಾರೆ.

5. ಕನ್ನಡ ಮತ್ತು ಸಂಸ್ಕೃತ ಸಂಬಂಧ ಕುರಿತ ನಾಲ್ಕನೆಯ ಗ್ರಹಿಕೆ ‘ಅನಿವಾರ್ಯವಾಗಿ ಕನ್ನಡದಲ್ಲಿ ಸಂಸ್ಕೃತ ಬಳಸುತ್ತಾರೆ’ ಎನ್ನುವುದು. ಎಚ್.ಎಸ್. ರಾಘವೇಂದ್ರರಾವ್ ಅವರು ನಯಸೇನ ಮತ್ತು ಅಂಡಯ್ಯ ಅಚ್ಚಕನ್ನಡದಲ್ಲಿ ಬರೆಯಲು ಪ್ರಯತ್ನಿಸಿದ ಪ್ರಯೋಗವನ್ನು ಕುರಿತು ಬರೆಯುತ್ತ ‘ಇವರ ಪ್ರಯೋಗಗಳು ಸಾಹಿತ್ಯಕವಾಗಿ ಏಕೆ ವಿಫಲವಾದವೆನ್ನುವುದು, ಅವರ ವೈಯಕ್ತಿಕ ಪರಿಮಿತಿಯ ಪ್ರಶ್ನೆಯೋ ಅಥವಾ ಮಹಾಕಾವ್ಯದಂಥ ಸುದೀರ್ಘ ಬರವಣಿಗೆಯಲ್ಲಿ ಅನ್ಯಭಾಷಾ ಸಂಯೋಜನೆಯ ಅನಿವಾರ್ಯತೆಯನ್ನು ಸೂಚಿಸುತ್ತದೆಯೋ ಹೇಗೆ ಹೇಳುವುದು?’ ಎಂಬ ಪ್ರಶ್ನೆಯನ್ನೆತ್ತುತ್ತಾರೆ. ಆದರೆ ನಯಸೇನ, ಅಂಡಯ್ಯ ವಿಫಲವಾದ ಕಡೆ ಬಸವಣ್ಣ, ಬೇಂದ್ರೆ, ಕೆ.ಎಸ್.ನ ಮತ್ತು ಜಾನಪದ ಕವಿಗಳು ಯಶಸ್ವಿಯಾಗುವುದನ್ನು ಎಚ್.ಎಸ್. ರಾಘವೇಂದ್ರರಾವ್ ಅವರು ಗಮನಿಸುತ್ತಾರೆ. ‘ಆದರೆ ಯಶಸ್ವಿಯಾದ ಈ ಕವಿಗಳೆಲ್ಲರ ಕಾವ್ಯ ಸ್ವರೂಪದಲ್ಲಿ ಕಿರುಗಾತ್ರದವಾಗಿದ್ದು, ಅದೇ ಕುವೆಂಪು, ಪು.ತಿ.ನ, ಗೋಕಾಕರು ಮಹಾಕಾವ್ಯಗಳನ್ನು ಬರೆದಾಗ ಸಂಸ್ಕೃತವನ್ನು ಸಂಯೋಜಿಸಿಕೊಳ್ಳುತ್ತಾರೆ’ ಎನ್ನುವ ಮೂಲಕ ಈ ಕವಿಗಳಿಗೆ ‘ಸಂಸ್ಕೃತ ಬಳಕೆ ಅನಿವಾರ್ಯವಾಗಿರಬಹುದು’ ಎಂದು ಗ್ರಹಿಸುತ್ತಾರೆ. ಕುವೆಂಪು ಅವರಿಗೆ ಸಂಸ್ಕೃತ ಬಳಕೆ ಅನಿವಾರ್ಯವಾಗಿದ್ದಿರಬಹುದಾದ ಸಾಧ್ಯತೆಯನ್ನು ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಮುಂದಿನ ಮಾತುಗಳನ್ನು ಕಾಣಬಹುದಾಗಿದೆ : ‘‘ಕುವೆಂಪು ಅವರಿಗೆ ಹೊರಗಿನ ಹೋರಾಟದಷ್ಟೇ ಒಳಗಿನ ಹೋರಾಟವೂ ಮುಖ್ಯವಾಗಿತ್ತು. ಉಳಿದವರಿಗೆ ಹೊರಗಿನ ಹೋರಾಟದ ಬಗ್ಗೆ ಆಸಕ್ತಿ. ಒಳಗಿನ ಸ್ಥಿತಿಯ ಬಗ್ಗೆ ಸಹಾನುಭೂತಿ, ಆದರೆ ಕುವೆಂಪು ಅವರಂತೆ ಅದಕ್ಕಾಗಿ ಅವರು ಹೋರಾಡಬೇಕಾದ ಅಗತ್ಯವಿರಲಿಲ್ಲ. ಕುವೆಂಪು ‘ಕಾವ್ಯ’ ಚರಿತ್ರೆಯನ್ನು ತನ್ನ ಒಡಲಲ್ಲಿಟ್ಟುಕೊಂಡೇ ಸೃಷ್ಟಿಯಾದ ಕಾವ್ಯ’

6. ಮಡಿಕೇ

Writer - ಡಾ.ಸರ್ಜಾಶಂಕರ ಹರಳಿಮಠ

contributor

Editor - ಡಾ.ಸರ್ಜಾಶಂಕರ ಹರಳಿಮಠ

contributor

Similar News