×
Ad

ಗೃಹಿಣಿ ಆತ್ಮಹತ್ಯೆ: ಕೊಲೆ ಶಂಕೆ

Update: 2018-10-20 22:06 IST

ಬೆಂಗಳೂರು, ಅ.20: ಗೃಹಿಣಿಯೊಬ್ಬಾಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ನೆಲಮಂಗಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನೆಲಮಂಗಲದ ಲೋಹಿತ್ ನಗರದ ಮುತ್ತುರಾಣಿ (30) ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ. ಆದರೆ, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮುತ್ತುರಾಣಿಯನ್ನು ಪತಿ ಓಂಕಾರ್ ಕೊಲೆ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.

ಶುಕ್ರವಾರ ರಾತ್ರಿಯೇ ಮುತ್ತುರಾಣಿ ನೇಣು ಬಿಗಿದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ತುಮಕೂರು ಪಾವಗಡ ಮೂಲದ ಓಂಕಾರ್ ಮುತ್ತುರಾಣಿ ದಂಪತಿ ಲೋಹಿತ್‌ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು ಎನ್ನಲಾಗಿದೆ.

ಓಂಕಾರ್ ಪ್ರತಿದಿನ ಮದ್ಯದ ಅಮಲಿನಲ್ಲಿ ಗಲಾಟೆ ಮಾಡುತ್ತಿದ್ದನು. ಕುಡಿದ ಮತ್ತಿನಲ್ಲಿ ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದನು. ಈ ಬಗ್ಗೆ ಹಲವು ಬಾರಿ ಸಂಧಾನ ಕೂಡ ಮಾಡಿಸಿದ್ದರೂ ಓಂಕಾರ್ ವರ್ತನೆ ಸರಿಹೋಗಿರಲಿಲ್ಲ ಎಂದು ಮುತ್ತುರಾಣಿ ಪೋಷಕರು ಆರೋಪಿಸಿದ್ದಾರೆ.

ರಾತ್ರಿ ಮದ್ಯ ಸೇವಿಸಿ ಬಂದು ಜಗಳ ಮಾಡಿ ನನ್ನ ಮಗಳನ್ನು ಕೊಲೆ ಮಾಡಿ ಬಳಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕತೆ ಕಟ್ಟಿದ್ದಾನೆ ಎಂದು ಆರೋಪಿಸಿ ಮುತ್ತುರಾಣಿ ತಂದೆ ದೂರು ನೀಡಿದ್ದಾರೆ. ಓಂಕಾರ್‌ನನ್ನು ನೆಲಮಂಗಲ ನಗರ ಠಾಣಾ ಪೊಲೀಸರು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News