ಶಿಕ್ಷಣಾಭಿವೃದ್ಧಿಗೆ 'ರೋಷಿಣಿ' ಉಪಯುಕ್ತ: ಮೇಯರ್ ಗಂಗಾಂಬಿಕೆ

Update: 2018-10-20 16:56 GMT

ಬೆಂಗಳೂರು, ಅ.20: ಬಿಬಿಎಂಪಿ ವ್ಯಾಪ್ತಿಯ ಬಡ ಮಕ್ಕಳ ಶಿಕ್ಷಣಾಭಿವೃದ್ಧಿಗೆ ರೋಷಿಣಿ ಯೋಜನೆಯು ಉಪಯಕ್ತ ಎಂದು ಪಾಲಿಕೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಇಂದಿಲ್ಲಿ ಹೇಳಿದರು.

ಶನಿವಾರ ನಗರದ ಪುರಭವನ ಸಭಾಂಗಣದಲ್ಲಿ ಬಿಬಿಎಂಪಿ ಆಯೋಜಿಸಿದ್ದ, ಸುಮಾರು 800 ಉಪನ್ಯಾಸಕರಿಗೆ ‘ಕಲಿಕೆ ಕುರಿತು ಒಂದು ದಿನದ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.

ಖಾಸಗಿ ಶಾಲೆ, ಕಾಲೇಜುಗಳಲ್ಲಿ ನೀಡುವ ಗುಣಮಟ್ಟದ ಶಿಕ್ಷಣ, ಪಾಲಿಕೆ ಶಾಲೆ ವಿದ್ಯಾರ್ಥಿಗಳಿಗೂ ದೊರೆಯುವಂತೆ ಮಾಡುವುದು ಹಾಗೂ ಮಕ್ಕಳು ಶಿಕ್ಷಣದ ಜತೆ ಜತೆಗೆ ಕ್ರೀಡೆ, ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯ, ಕಂಪ್ಯೂಟರ್ ಸೇರಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ರೋಷಿಣಿ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಗಂಗಾಂಬಿಕೆ ವಿವರಿಸಿದರು.

ಪಾಲಿಕೆಯ ಶಾಲೆಯ ಮಕ್ಕಳು ಖಾಸಗಿ ಶಾಲೆಗಳ ಮಕ್ಕಳಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ. ತುಂಬಾ ಬುದ್ಧಿವಂತರಿದ್ದಾರೆ ಎಂದ ಅವರು, ತಂತ್ರಜ್ಞಾನ ಮತ್ತು ಆಂಗ್ಲ ಭಾಷೆಯ ಅರಿವು ಮಕ್ಕಳಿಗೆ ನೀಡಲಾಗುತ್ತಿದೆ. ಜೊತೆಗೆ, ಈ ಬಾರಿ ಶಿಕ್ಷಕರಿಗೆ ರೋಷಿಣಿ ಯೋಜನೆಯ ಬಗ್ಗೆ ಕಾರ್ಯಾಗಾರ ನಡೆಸಲು ಮುಂದಾಗಿದ್ದೇವೆ ಎಂದರು.

ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರೋಬ್ಬರಿ 156 ಶಾಲಾ ಕಾಲೇಜುಗಳು ಬರುತ್ತವೆ. ಅಷ್ಟೇ ಅಲ್ಲದೆ, 17 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅದೇ ರೀತಿ, ಪಾಲಿಕೆ ವ್ಯಾಪ್ತಿ ಸುಮಾರು 800ಕ್ಕೂ ಅಧಿಕ ಪ್ರಾಧ್ಯಾಪಕರಿದ್ದಾರೆ ಎಂದು ಹೇಳಿದರು.

ಬಿಬಿಎಂಪಿ ಶಾಲೆಗಳು ಎಂದರೆ, ಈಗ ಜನ ಮೂಗು ಮುರಿಯುತ್ತಿದ್ದಾರೆ. ಆ ಎಲ್ಲ ಅಪನಂಬಿಕೆಗಳನ್ನು ಹೋಗಲಾಡಿಸಲು ಸರಕಾರದ ಜೊತೆ ಬಿಬಿಎಂಪಿ ಕೈ ಜೋಡಿಸಲು ಮುಂದಾಗುತ್ತಿದೆ. ಇಂಗ್ಲಿಷ್ ಅನ್ನು ರಾಜ್ಯದ ಮಕ್ಕಳಿಗೆ ಬೋಧಿಸಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಅದರಂತೆ, ಸರಕಾರಿ ಶಾಲೆಗಳನ್ನು ಮಾಡೆಲ್ ಶಾಲೆಗಳಾಗಿ ಪರಿವರ್ತಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಬೆಂಗಳೂರು ವಿವಿಯ ಉಪಕುಲಪತಿ ಡಾ.ಕೆ.ಆರ್. ವೇಣುಗೋಪಾಲ್, ಅಮೆರಿಕಾ ವಿಶ್ವವಿದ್ಯಾಲಯದ ಡಾ.ಖಾಝೀ ಅಝಾರ್, ಅಲಿ ಸೇಠ್, ಬಿಬಿಎಂಪಿ ಸಹಾಯಕ ಆಯುಕ್ತೆ ಪಲ್ಲವಿ ಸೇರಿದಂತೆ ಪ್ರಮುಖರು ಹಾಜರಿದ್ದರು.

ಇಂಗ್ಲಿಷ್‌ಗಾಗಿ ಹೊಸ ಚಾನೆಲ್

ಸರಕಾರಿ ಶಾಲಾ-ಕಾಲೇಜು ಮಕ್ಕಳಲ್ಲಿ ಇಂಗ್ಲಿಷ್ ಸಂವಹನ ವೃದ್ಧಿಗೆ ಪ್ರಸ್ತುತ ಸಾಲಿನ ನವೆಂಬರ್ 14ರಿಂದ ದೂರದರ್ಶನ ವ್ಯಾಪ್ತಿಯೊಳಗೆ ಹೊಸ ಚಾನೆಲ್ ಆರಂಭವಾಗಲಿದೆ. ಇದರ ಸದುಪಯೋಗ ಪಡಿಸಿಕೊಳ್ಳಲು ವಿದ್ಯಾರ್ಥಿ ಸಮೂಹ ಮುಂದಾಗಬೇಕು.

-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ,

ಶೌಚಾಲಯ ನಿರ್ಮಾಣ ಮಾಡಿ

ಬಿಬಿಎಂಪಿ ವ್ಯಾಪ್ತಿಯಲ್ಲಿನ ಹಲವು ಶಾಲಾ-ಕಾಲೇಜುಗಳಲ್ಲಿ ಶೌಚಾಲಯಗಳೇ ಇಲ್ಲ. ಇದರಿಂದ ಹಲವು ಸಮಸ್ಯೆ ಎದುರಿಸಬೇಕಾದ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ, ಶೀಘ್ರದಲ್ಲಿ ಶೌಚಾಲಯ ನಿರ್ಮಾಣ ಮಾಡಬೇಕು ಎಂದು ಬೆಂಗಳೂರು ವಿವಿಯ ಉಪಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News