ಅಹಾರದ ಗುಣಮಟ್ಟ ಹೆಚ್ಚಿಸಲು ಆದ್ಯತೆ: ಬಿಬಿಎಂಪಿ ಸದಸ್ಯರಿಗೂ ಇಂದಿರಾ ಕ್ಯಾಂಟೀನ್ ಊಟದ ಭಾಗ್ಯ

Update: 2018-10-20 17:09 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ. 20: ರಾಜಧಾನಿಯ ಜನರಿಗೆ ಅಗ್ಗದ ದರದಲ್ಲಿ ಅನ್ನಾಹಾರ ಪೂರೈಕೆ ಮಾಡುತ್ತಿರುವ ಇಂದಿರಾ ಕ್ಯಾಂಟೀನ್‌ಗಳು, ಇನ್ನು ಮುಂದೆ ಮಾಸಿಕ ಸಭೆಯಲ್ಲಿ ಪಾಲ್ಗೊಳ್ಳುವ ಪಾಲಿಕೆಯ ಸದಸ್ಯರಿಗೂ ಊಟ ಪೂರೈಕೆ ಮಾಡಲಿದೆ.

ಪಾಲಿಕೆಯ ಸದಸ್ಯರು ಹಾಗೂ ಅಧಿಕಾರಿಗಳು ಕ್ಯಾಂಟೀನ್‌ಗಳಲ್ಲಿನ ಆಹಾರ ಊಟ ಮಾಡಲು ಹಿಂಜರಿಯುವುದರಿಂದ ಗುಣಮಟ್ಟದ ಬಗ್ಗೆ ತಿಳಿಯುವುದಿಲ್ಲ. ಇದೇ ಕಾರಣದಿಂದ ಗುತ್ತಿಗೆದಾರರು ಸಹ ಗುಣಮಟ್ಟದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಹೀಗಾಗಿ ಪಾಲಿಕೆಯ ಸದಸ್ಯರಿಗೂ ಇಂದಿರಾ ಕ್ಯಾಂಟೀನ್ ಊಟ ಪೂರೈಕೆ ಮಾಡಿದಾಗ ಈ ಬಗ್ಗೆ ಪ್ರಶ್ನಿಸುತ್ತಾರೆ ಎಂಬ ಭಯದಿಂದಲಾದರೂ ಜನರಿಗೆ ಗುಣಮಟ್ಟದ ಆಹಾರ ದೊರೆಯಲಿದೆ ಎಂಬುದು ಮೇಯರ್ ಉದ್ದೇಶವಾಗಿದೆ. ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್‌ಗಳು ನಿತ್ಯ ಲಕ್ಷಾಂತರ ಜನರಿಗೆ ಆಹಾರ ಪೂರೈಸಲಾಗುತ್ತಿದೆ. ಯೋಜನೆಯ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾದರೂ, ಕೆಲವರಿಂದ ಆಹಾರದ ಗುಣಮಟ್ಟ ಹಾಗೂ ರುಚಿಯ ಬಗ್ಗೆ ದೂರುಗಳು ಕೇಳಿಬರುತ್ತಲೇ ಇವೆ. ಪಾಲಿಕೆಯ ಸದಸ್ಯರು ಸಹ ಆಹಾರದ ಗುಣಮಟ್ಟ ಸರಿಯಾಗಿಲ್ಲ ಎಂಬ ಆರೋಪಗಳನ್ನು ಪಾಲಿಕೆ ಸಭೆಗಳಲ್ಲಿಯೇ ಮಾಡಿದ್ದಾರೆ.

ಆ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್‌ಗಳಲ್ಲಿನ ಆಹಾರದ ಗುಣಮಟ್ಟ ಹೆಚ್ಚಿಸಲು ಹಾಗೂ ಕ್ಯಾಂಟೀನ್‌ಗಳಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕಲು ನೂತನ ಮೇಯರ್ ಪಣ ತೊಟ್ಟಿದ್ದಾರೆ. ಅದರಂತೆ ತಮ್ಮ ಮೊದಲ ಪಾಲಿಕೆ ಸಭೆಯಲ್ಲಿಯೇ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳಿಗೂ ಇಂದಿರಾ ಕ್ಯಾಂಟೀನ್‌ನ ಊಟದ ರುಚಿ ಪರಿಚಯಿಸಲು ಚಿಂತನೆ ನಡೆಸಿದ್ದಾರೆ.

ಸುಮ್ಮನೆ ಆರೋಪ: ಇಂದಿರಾ ಕ್ಯಾಂಟೀನ್‌ಗಳಿಂದ ನಿತ್ಯ ಲಕ್ಷಾಂತರ ಜನರಿಗೆ ಆಹಾರ ಪೂರೈಕೆ ಮಾಡಲಾಗುತ್ತಿದೆ. ಆದರೆ, ಪಾಲಿಕೆ ಸಭೆಗಳಲ್ಲಿ ಕೆಲವು ಸದಸ್ಯರು ಉದ್ದೇಶಪೂರ್ವಕವಾಗಿ ಕ್ಯಾಂಟೀನ್‌ಗಳಲ್ಲಿನ ಆಹಾರ ರುಚಿಕರವಾಗಿಲ್ಲ, ಗುಣಮಟ್ಟದಿಂದ ಕೂಡಿಲ್ಲ ಎಂದು ಆರೋಪಿಸುತ್ತಾರೆ. ವಾಸ್ತವದಲ್ಲಿ ಅವರು ಎಂದೂ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟ ಮಾಡದಿದ್ದರೂ ಆರೋಪಿಸುತ್ತಾರೆ. ಹೀಗಾಗಿ ಪ್ರಾಯೋಗಿಕವಾಗಿ ತಿಂಗಳ ಸಭೆಯಲ್ಲಿ ಪಾಲಿಕೆ ಸದಸ್ಯರಿಗೂ ಇಂದಿರಾ ಕ್ಯಾಂಟೀನ್ ಊಟ ಪೂರೈಕೆ ಮಾಡಲಾಗುವುದು. ಊಟ ಮಾಡಿದ ನಂತರ ಅವರು ಆರೋಪಿಸಿದರೆ ಅದನ್ನು ಸರಿಪಡಿಸಿಕೊಳ್ಳಲು ಮುಂದಾಗುತ್ತೇವೆ ಎನ್ನುತ್ತಾರೆ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರು.

3 ಲಕ್ಷಕ್ಕೂ ಅಧಿಕ: ಪಾಲಿಕೆಯಿಂದ 180ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳು ಸೇವೆ ನೀಡುತ್ತಿದ್ದು, ನಿತ್ಯ 3 ಲಕ್ಷಕ್ಕೂ ಹೆಚ್ಚಿನ ಜನರಿಗೆ ತಿಂಡಿ-ಆಹಾರ ಪೂರೈಸುತ್ತಿವೆ. ಕೆಲವು ಕಡೆಗಳಲ್ಲಿ ಗುಣಮಟ್ಟ ಚೆನ್ನಾಗಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ಗುಣಮಟ್ಟ ನಿಗದಿತ ಪ್ರಮಾಣದಲ್ಲಿಲ್ಲ ಎಂಬ ಆರೋಪಗಳಿವೆ. ಬಾಕ್ಸ್...

ಇಂದಿರಾ ಕ್ಯಾಂಟೀನ್‌ನ ಊಟ ಮಾಡುವುದರಿಂದ ಊಟದ ಗುಣಮಟ್ಟ ತಿಳಿಯಲಿದ್ದು, ಸರಿಯಿಲ್ಲದಿದ್ದರೆ ಅದನ್ನು ಸರಿಪಡಿಸಬಹುದು.

-ಗಂಗಾಂಬಿಕೆ, ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News