ಜಾರ್ಜ್ ಆರ್ವೆಲ್

Update: 2018-10-20 17:44 GMT

ಜಾರ್ಜ್ ಆರ್ವೆಲ್ ಕಾವ್ಯ ನಾಮದಿಂದ 20ನೇ ಶತಮಾನದ ಅತ್ಯಂತ ಮಹತ್ವದ ಲೇಖಕನೆಂದು ಪ್ರಸಿದ್ಧನಾದ ಎರಿಕ್ ಅರ್ಥರ್ ಬ್ಲೇರ್‌ನ ಬೇರುಗಳು ಭಾರತದಲ್ಲಿದೆ ಎಂಬುದು ಸೋಜಿಗದ ಸಂಗತಿ. ಆ ದಿನಗಳ ಅವಿಭಕ್ತ ಬಂಗಾಳದಲ್ಲಿ 1903ರಲ್ಲಿ ಜನಿಸಿದ. ತಂದೆ ಇಲ್ಲಿಯೇ ಸಿವಿಲ್ ಸರ್ವಿಸ್‌ನಲ್ಲಿದ್ದರು. ಇವನ ನಾಲ್ಕನೇ ವರ್ಷದವರೆಗೆ ಭಾರತದಲ್ಲಿಯೇ ಇದ್ದು, 1907ರಲ್ಲಿ ಇವನ ಕುಟುಂಬ ಇಂಗ್ಲೆಂಡಿನಲ್ಲಿ ನೆಲೆಸಿತು. ನಂತರ 1917ರಲ್ಲಿ, ಏಟನ್‌ಗೆ ಹೋದ. ಜಾರ್ಜ್ ತನ್ನ ಬಾಲ್ಯದ ಬಗ್ಗೆ ಬರೆದಿರುವುದನ್ನು ನೋಡಿದರೆ, ಅಷ್ಟು ಸಂತೋಷಕರವಾಗಿ ಇರಲಿಲ್ಲವೆಂಬುದು ಸ್ಪಷ್ಟವೆನಿಸಿಸುತ್ತದೆ. ಅನೇಕ ಪ್ರತಿಭಾವಂತರ ಬದುಕುಗಳಲ್ಲಿ ಕಾಣುವಂತೆ ತಂದೆಯ ಜೊತೆ ಆತ್ಮೀಯ ಸಂಬಂಧವಿರಲಿಲ್ಲ. ತಂದೆಯನ್ನು ದ್ವೇಷಿಸುತ್ತಿದ್ದನೆಂಬುದು ವಿಷಾದದ ಸಂಗತಿಯಾಗಿದೆ. ತಾಯಿಯ ಜೊತೆಯ ಸಂಬಂಧವೂ ಹೆಚ್ಚು ಕಡಿಮೆ ಇದೇ ರೀತಿಯಲ್ಲಿತ್ತು. ತಂದೆತಾಯಿಯರೊಂದಿಗಿನ ಸಂಬಂಧಗಳ ಆರ್ಥಿಕ ಪರಿಸ್ಥಿತಿಗಳು ಅವನಲ್ಲಿ ಒಂಟಿತನವನ್ನು ಉಂಟು ಮಾಡಿದವು.

ಇದರ ಜೊತೆಗೆ ಅನಾರೋಗ್ಯದಿಂದ ನರಳುತ್ತಿದ್ದ ಇವನಿಗೆ ಅಷ್ಟಾಗಿ ಸ್ನೇಹಿತರೂ ಇರಲಿಲ್ಲ. ಅಲ್ಲದೆ ತನ್ನ ಸಹಪಾಠಿಗಳೆಲ್ಲ ಶ್ರೀಮಂತ ಕುಟುಂಬದಿಂದ ಬಂದವರಾದ್ದರಿಂದ, ಸ್ನೇಹ ಮಾಡಿಕೊಳ್ಳುವುದೂ ಸಾಧ್ಯವಾಗಲಿಲ್ಲ. ತನ್ನ ಪ್ರೈಮರಿ ವಿದ್ಯಾಭ್ಯಾಸವನ್ನು ಮುಗಿಸಿ, ಏಟನ್ ಪಬ್ಲಿಕ್ ಶಾಲೆಯಲ್ಲಿ ಐದು ವರ್ಷ ವಿದ್ಯಾಭ್ಯಾಸ ಮುಂದುವರಿಸಿದ. ಇಚ್ಛಿಸಿದಲ್ಲಿ ಇವನು ಕೇಂಬ್ರಿಡ್ಜ್‌ಗೆ ಹೋಗಿ ಶಿಕ್ಷಣವನ್ನು ಮುಂದುವರಿಸಬಹುದಾಗಿದ್ದರೂ, ಹದಿನೆಂಟನೇ ವಯಸ್ಸಿಗೇ ಪೊಲೀಸ್ ಆಫೀಸರನ ತರಬೇತಿ ಪಡೆದು, ಬರ್ಮೀಸ್ ಪೊಲೀಸ್ ಅಧಿಕಾರಿಯಾದ. ವಿದ್ಯಾರ್ಥಿಯಾಗಿ ಇವನೇನೂ ಅಷ್ಟು ಪ್ರತಿಭಾವಂತನಾಗಿ ಕಾಣಿಸಿಕೊಂಡಿರಲಿಲ್ಲ. ಅಲ್ಲಿ ಇವನು ಮನಸ್ಸು ಮಾಡಿದ್ದರೆ ಅದ್ಭುತವಾದ ಅವಕಾಶಗಳನ್ನು ಉಪಯೋಗಿಸಿಕೊಂಡು ಏನೆಲ್ಲವನ್ನೂ ಸಾಧಿಸಬಹುದಾಗಿತ್ತು. ಆದರೆ ಇವನು ಹಾಗೆ ಮಾಡದೆ ಪೊಲೀಸ್ ಹುದ್ದೆಗೆ ಬಂದು ಸೇರಿದ. 1922ರಿಂದ 1927 ರವರೆಗೆ ಇಂಡಿಯನ್ ಇಂಪೀರಿಯಲ್ ಪೊಲೀಸ್ ಪಡೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ.

ಬಾಲ್ಯದಿಂದಲೂ ಇವನಿಗೆ ಓದುವುದೊಂದು ಹುಚ್ಚು. ಹದಿನೈದನೇ ವಯಸ್ಸಿನಷ್ಟು ಹೊತ್ತಿಗೇ ಇಂಗ್ಲಿಷ್ ಕ್ಲಾಸಿಕ್ಸ್‌ಗಳನ್ನು ಓದಿ ಮುಗಿಸಿದ್ದ. ಅಕಾಡಮಿಕ್ ಪದವಿಗಳನ್ನು ಪಡೆಯದಿದ್ದರೂ ಇವನ ಓದುವ ಪ್ರವೃತ್ತಿ ಮುಂದೆ ಲೇಖಕನಾಗುವುದಕ್ಕೆ ಪರೋಕ್ಷವಾಗಿ ಸಹಾಯವಾಯಿತು. ಇವನು ಬರೆದ ಕೃತಿಗಳಾದ ಬರ್ಮೀಸ್ ಡೇಸ್ ಮತ್ತು ಶೂಟಿಂಗ್ ಆ್ಯನ್‌ಎಲಿಫೆಂಟ್‌ಗಳಲ್ಲಿ ಭಾರತ ಮತ್ತು ಇತರ ರಾಷ್ಟ್ರಗಳಲ್ಲಿ ಪ್ರಚಲಿತವಿದ್ದ ಬ್ರಿಟಿಷ್ ಇಂಪೀರಿಯಲಿಸಂ ಬಗ್ಗೆ ಕಟುವಾಗಿ ಬರೆದಿದ್ದಾನೆ. ಪೊಲೀಸ್ ವ್ಯವಸ್ಥೆಯಲ್ಲಿ ಸ್ವಾತಂತ್ರಕ್ಕೆ ಅವಕಾಶವಿಲ್ಲದ್ದನ್ನೂ ಕಂಡು ಬಹುವಾಗಿ ಬೇಸರ ವ್ಯಕ್ತಪಡಿಸಿದ್ದಾನೆ. ಬಹುಶಃ ಇದೇ ಕಾರಣಕ್ಕಾಗಿಯೋ ಏನೋ ಕೇವಲ ಐದು ವರ್ಷದ ಅವಧಿಯಲ್ಲೇ, ಪೊಲೀಸ್ ಹುದ್ದೆಯನ್ನು ತೊರೆದ. ನಂತರ ಲಂಡನ್ ಮತ್ತು ಪ್ಯಾರಿಸ್‌ನ ಬಡವರ್ಗಗಳ ಅಧ್ಯಯನದಲ್ಲಿ ನಿರತನಾದ.

1928 ರಿಂದ 1935 ರವರೆಗೆ ಪ್ರೈವೇಟ್ ಶಾಲೆಗಳಲ್ಲಿ ಶಿಕ್ಷಕ ವೃತ್ತಿಯನ್ನು ಮಾಡಿ ಬದುಕಿಗೆ ದಾರಿ ಕಂಡುಕೊಂಡ. ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವುದರ ಮೂಲಕವೂ ಅಲ್ಪ ಹಣವನ್ನು ಸಂಪಾದಿಸಿದ. ನಂತರ ಇಂಗ್ಲೆಂಡಿನ ಒಂದು ಸಣ್ಣ ಹಳ್ಳಿಯಲ್ಲಿ ಅಂಗಡಿಯೊಂದನ್ನು ತೆರೆದು ವ್ಯಾಪಾರ ವೃತ್ತಿಗಿಳಿದ. 1940 ರವರೆಗೆ ‘ನ್ಯೂ ಇಂಗ್ಲಿಷ್ ವೀಕ್ಲಿ’ಗೆ ಕಾದಂಬರಿಗಳ ಕುರಿತಾಗಿ ರಿವ್ಯೆಗಳನ್ನು ಬರೆದ.

1936ರಲ್ಲಿ ನಿರುದ್ಯೋಗ ಕೇಂದ್ರಗಳಾಗಿದ್ದ ಲ್ಯಾಂಕಷೈರ್ ಮತ್ತು ಯಾರ್ಕ್‌ಷೈರ್‌ಗಳಿಗೆ ಭೇಟಿಕೊಟ್ಟು ಅಲ್ಲಿನ ನಿರುದ್ಯೋಗದ ಭಯಂಕರ ಸ್ವರೂಪವನ್ನು ಗಂಭೀರವಾಗಿ ಅಧ್ಯಯನ ಮಾಡಿ, ‘ದಿ ರೋಡ್ ಟು ವಿಗಾನ್ ಪಿಯರ್’ ಎನ್ನುವ ಕೃತಿಯನ್ನು 1937 ರಲ್ಲಿ ರಚಿಸಿದ. ಇದರಲ್ಲಿ ನಿರುದ್ಯೋಗ ಸಮಸ್ಯೆಯ ಹಲವಾರು ಮುಖಗಳ ಪರಿಚಯ, ಚರ್ಚೆ ಮುಖ್ಯ ವಿಷಯವಾಗಿದೆ. ನಿರುದ್ಯೋಗವೇ ಬಡತನಕ್ಕೆ ಕಾರಣವೆಂಬ ಕಟು ಸತ್ಯದ ದರ್ಶನವನ್ನು ಇಲ್ಲಿ ಕಾಣಿಸಿದ್ದಾನೆ.

1935ರಲ್ಲಿ ಇವನ ಮೊತ್ತಮೊದಲ ಕಾದಂಬರಿ ‘ಎ ಕ್ಲೆರ್ಜಿಮ್ಯಾನ್ಸ್ ಡಾಟರ್ಸ್‌’ ಪ್ರಕಟವಾಯಿತು. ನಂತರ ಮರು ವರುಷವೇ ಅವನ ಎರಡನೆ ಕಾದಂಬರಿ ‘ಕೀಪ್ ದಿ ಆಸ್ಪಿಡಿಸ್ಟ್ರಾ ಪ್ಲೈಯಿಂಗ್’ ಕೂಡಾ ಪ್ರಕಟವಾಯಿತು. ನಂತರ ಇವನ ಬರವಣಿಗೆ ನಿರಂತರವಾಗಿ ಮುಂದುವರಿದು, ‘ಹೋಮೇಜ್ ಟು ಕ್ಯಾಟಲೋನಿಯಾ’, ‘ಕಮಿಂಗ್ ಅಪ್ ಫಾರ್ ಏರ್’, ‘ಆ್ಯನಿಮಲ್ ಫಾರಮ್’ ಮೊದಲಾಗಿ ಹಲವಾರು ಕೃತಿಗಳು ಪ್ರಕಟವಾದವು.

ಇವನ ವೈಯಕ್ತಿಕ ಬದುಕಿನ ಬಗ್ಗೆ ಬರೆಯುವುದಾದರೆ, ಅಷ್ಟು ಹಿತಕರವೆನಿಸಲಾರದು. 1936ರಲ್ಲಿ ಮನಃಶಾಸ್ತ್ರ ವಿದ್ಯಾರ್ಥಿನಿಯಾದ ಐರೀನ್‌ಳನ್ನು ಮದುವೆಯಾದ. ಇದೇ ವರ್ಷ ‘ಸಿವಿಲ್ ವಾರ್’ನಲ್ಲಿ ಭಾಗವಹಿಸಲು ಜನರಲ್ ಫ್ರಾಂಕೋಸ್‌ನನ್ನು ಸೇರಿಕೊಳ್ಳಲು ಸ್ಪೈನ್‌ಗೆ ಹೋದ. ಪಬ್ಲಿಕನ್ಸ್ ಪರವಾಗಿ ಯುದ್ಧ ಮಾಡಿದ. ಆದರೆ ಈ ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡ ತನ್ನ ಈ ಯುದ್ಧದಲ್ಲಿನ ದಿಟ್ಟ ಅನುಭವಗಳನ್ನು ‘ಹೋಮೇಜ್ ಟು ಕ್ಯಾಟಲೋನಿಯಾ’ ಕೃತಿಯಲ್ಲಿ ದಾಖಲಿಸಿದ.

ದುರದೃಷ್ಟವೆಂಬಂತೆ, 1938ರಲ್ಲಿ ಕ್ಷಯರೋಗಕ್ಕೆ ತುತ್ತಾದ. ಎರಡನೇ ಜಾಗತಿಕ ಸಮರ ಪ್ರಾರಂಭವಾದಾಗ, ತಾನೂ ಭಾಗವಹಿಸಲು ಇಚ್ಛಿಸಿದನಾದರೂ, ಇವನ ಅನಾರೋಗ್ಯದ ಕಾರಣದಿಂದ ತಿರಸ್ಕೃತನಾದ. ಆದರೆ ಬಿ.ಬಿ.ಸಿ.ಯ ಇಂಡಿಯನ್ ಸರ್ವಿಸ್ ಸೇರಿ, ಯುದ್ಧದ ಸುದ್ದಿ ಸಮಾಚಾರಗಳನ್ನು ಹಿಂದೂಸ್ಥಾನಿ ಭಾಷೆಯಲ್ಲಿ ಬಿತ್ತರಿಸಿದ. 1945ರಲ್ಲಿ ಪ್ರಕಟವಾದ ‘ಆ್ಯನಿಮಲ್ ಫಾರಮ್’ ಎಂಬ ಕಿರು ಕಾದಂಬರಿ, ಇವನಿಗೆ ಪ್ರಚಂಡ ಯಶಸ್ಸನ್ನೂ, ಹಣವನ್ನೂ ಗಳಿಸಿಕೊಟ್ಟಿತು. ಇದೇ ವರ್ಷ ಇವನ ಹೆಂಡತಿಯೂ ತೀರಿಕೊಂಡಳು. ನಂತರ ಇವನು ಹೆಬ್ರಿಡೆ ದ್ವೀಪಕ್ಕೆ ಹೋಗಿ ನೆಲೆಸಿದ. ಇಲ್ಲಿಯೇ ಇದ್ದು ತನ್ನ ಕೊನೆಯ ಕಾದಂಬರಿಯಾದ ‘ನೈನ್‌ಟೀನ್ ಎಯ್ಟಿ ಫೋರ್’ ಅನ್ನು ರಚಿಸಿದ. 1948ರ ಹೊತ್ತಿಗೆ ಇವನ ಆರೋಗ್ಯ ತೀರಾ ಹದಗೆಟ್ಟಿತು. ನಂತರ ಆರೋಗ್ಯ ಸ್ವಲ್ಪ ಸುಧಾರಿಸಿದಂತೆ ಕಂಡಾಗ ಸೋನಿಯಾ ಬ್ರಾನೆಲ್ ಎನ್ನುವವಳನ್ನು ಎರಡನೆ ಮದುವೆಯಾದ. ಆದರೆ ಮದುವೆಯಾದ ಎರಡೇ ವರ್ಷಗಳಲ್ಲಿ, ಅಂದರೆ ಜನವರಿ, 1950 ರಲ್ಲಿ ಕೊನೆಯುಸಿರೆಳೆದ.

ಆ್ಯನಿಮಲ್ ಫಾರಮ್ ಕೃತಿಯ ಕುರಿತು

1945ರಲ್ಲಿ ‘ಆ್ಯನಿಮಲ್ ಫಾರಮ್’ ಮತ್ತು 1949 ರಲ್ಲಿ ‘ನೈನ್‌ಟೀನ್ ಎಯ್ಟಿ ಫೋರ್’ ಕಾದಂಬರಿಗಳು ಪ್ರಕಟವಾಗುವುದಕ್ಕೆ ಮೊದಲೇ ಜಾರ್ಜ್ ಆರ್ವೆಲ್‌ನ ಐದು ಕಾದಂಬರಿಗಳು ಪ್ರಕಟವಾಗಿದ್ದರೂ ಇವನಿಗೆ ಹೆಸರು ಮತ್ತು ಹಣವನ್ನು ತಂದುಕೊಟ್ಟವುಗಳು ಈ ಕಡೆಯ ಎರಡು ಕಾದಂಬರಿಗಳು ಮಾತ್ರ. ಈ ಕಾದಂಬರಿಗಳು ಸಾಹಿತ್ಯ ಜಗತ್ತಿನಲ್ಲಿ ಗುರುತಿಸಿಕೊಳ್ಳುವವರೆಗೂ ಆರ್ವೆಲ್ ಜೀವನೋಪಾಯಕ್ಕಾಗಿ ಎಷ್ಟೋ ಬಗೆಯ ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ. ಆ್ಯನಿಮಲ್ ಫಾರಮ್ ಪ್ರಕಟವಾಗುವುದಕ್ಕೆ ಮೊದಲು ಎಷ್ಟೋ ಮಂದಿ ಪ್ರಕಾಶಕರು, ಅದನ್ನು ಪ್ರಕಟಿಸಲು ನಿರಾಕರಿಸಿದ್ದರು. ಫೇಬರ್ ಆ್ಯಂಡ್ ಫೇಬರ್ ಪ್ರಕಾಶನ ಸಂಸ್ಥೆಯ ಟಿ.ಎಸ್. ಎಲಿಯಟ್ ಅಂತಹ ಸಾಹಿತ್ಯ ದೈತ್ಯರೂ ಇದನ್ನು ಕಡೆಗಣಿಸಿ, ಪ್ರಕಟಿಸಲು ಹಿಂಜರಿದಿದ್ದರು. ಆ್ಯನಿಮಲ್ ಫಾರಮ್ ಒಂದು ಅಲೆಗೊರಿಕಲ್ (ಅನ್ಯೋಕ್ತಿ) ಕೃತಿಯಾಗಿದೆ. ಇದು ಮುಖ್ಯವಾಗಿ ಸ್ಟಾಲಿನ್ ಮತ್ತು ಬಾಲ್ಷೆವಿಕ್‌ರ ಮೇಲೆ ಅನ್ಯೋಕ್ತಿ ಅಥವಾ ಅಲೆಗೊರಿ ಮೂಲಕ ನಡೆಸಿದ ಆಕ್ರಮಣವಾಗಿದೆ. ಕಾಕತಾಳೀಯವೆಂಬಂತೆ, ಎರಡನೇ ಮಹಾಯುದ್ಧ ಮುಗಿಯುತ್ತಿದ್ದ ಸಮಯದಲ್ಲಿಯೇ, ಈ ಕಾದಂಬರಿಯೂ ಪ್ರಕಟವಾಯಿತು. ಸ್ಟಾಲಿನ್‌ನ. ಯು.ಎಸ್.ಎಸ್.ಆರ್. ವಿಜಯಿಶಕ್ತಿಶಾಲಿ ರಾಷ್ಟ್ರಗಳಾದ ಯು.ಎಸ್., ಯು.ಕೆ. ಮತ್ತು ಫ್ರಾನ್ಸ್‌ನ ಮಿತ್ರರಾಷ್ಟ್ರವಾಗಿತ್ತು. ಆದ್ದರಿಂದ ಆಂತರ್ಯದಲ್ಲಿ, ಬ್ರಿಟಿಷ್ ಅಧಿಕಾರಿಗಳು ಸ್ಟಾಲಿನ್‌ನ ಟೀಕೆಯನ್ನು ವಿರೋಧಿಸಿದರು. ಅಲ್ಲದೆ ಲಿಬರಲ್ಸ್ ಮತ್ತು ರ್ಯಾಡಿಕಲ್ಸ್ ಸುದ್ದಿ ಪತ್ರಿಕೆಗಳು ಕೂಡಾ ಸ್ಟಾಲಿನ್ ಮತ್ತು ಯು.ಎಸ್.ಎಸ್.ಆರ್. ಬಗೆಗಿನ ಟೀಕೆಯನ್ನು ಸಹಿಸಲಿಲ್ಲ.

ಒಂದು ರೀತಿಯಿಂದ ಆರ್ವೆಲ್ ಪ್ರಚಾರವಾಗಿ, ಇವನ ಬರಹಗಳು, ಎಚ್.ಜಿ. ವೆಲ್ಸ್, ಅಲ್ಡರ್ಟ್ ಹಕ್ಸ್ಲಿ, ಬರ್ನಾಡ್ ಷಾರಂತೆ, ವಿಚಾರಪೂರ್ಣವಾದವು. ಇವನ ‘ನೈನ್‌ಟೀನ್ ಎಯ್ಟಿಫೋರ್; ಕೃತಿಯಂತೂ, ಅಲ್ಡ್‌ರ್ಟ್ ಹಕ್ಸ್ಲಿಯ ‘ದಿ ಬ್ರೇವ್ ನ್ಯೂ ವರ್ಲ್ಡ್’ ಮತ್ತು ಆರ್ಥರ್ ಕೊಯೆಸ್ಸಲರ್‌ನ ‘ಡಾರ್ಕ್‌ನೆಸ್ ಅಟ್ ನೂನ್’ ಕೃತಿಗಳನ್ನು ನೆನಪಿಸುತ್ತವೆ. ಈ ಬಗೆಯ ವಿಚಾರಪೂರ್ಣ ಕೃತಿಗಳು ಚಾರ್ಲ್ಸ್ ಡಿಕೆನ್ಸ್‌ನ ಪರಂಪರೆಯ ಮುಂದುವರಿಕೆಯ ಪ್ರತೀಕವಾಗಿದೆ.

‘ಆ್ಯನಿಮಲ್ ಫಾರಮ್’ ಮೊದಲೇ ತಿಳಿಸಿದಂತೆ ಒಂದು ಅಲೆಗೊರಿ (ಅನ್ಯೋಕ್ತಿ). ಇದರಲ್ಲಿ ಪ್ರಾಣಿಗಳು ದಂಗೆಯೆದ್ದು ಮನುಷ್ಯರಿಂದ ಅಧಿಕಾರವನ್ನು ಕಿತ್ತುಕೊಳ್ಳುತ್ತವೆ. ಪ್ರಾಣಿಗಳಿಗೆ ಅಧಿಕಾರ ಹಸ್ತಾಂತರವಾಗುವ ಮುನ್ನ ಫಾರಮ್‌ನ ಮಾಲಕರು, ತಮ್ಮಂತಹ ಮನುಷ್ಯರನ್ನೇ ಶೋಷಿಸುತ್ತಿರುತ್ತಾರೆ. ಆದರೆ ಮನುಷ್ಯರಿಂದ ಅಧಿಕಾರ ಕಸಿದುಕೊಂಡು ತಾವೇ ಫಾರಮ್‌ನನ್ನು ಆಳುತ್ತವೆ. ಅಲ್ಲದೆ ಸಮಾನತೆಯ ಸಿದ್ಧಾಂತವನ್ನು ಎತ್ತಿ ಹಿಡಿಯುತ್ತವೆ. ಅದರ ಬಗ್ಗೆ ದೊಡ್ಡ ದೊಡ್ಡ ಭಾಷಣಗಳನ್ನು ಮಾಡುತ್ತವೆ. ಅಧಿಕಾರದಲ್ಲಿ ಪ್ರತಿಷ್ಠಾಪಿತ ಹಂದಿಗಳು, ಅಧಿಕಾರದ ರುಚಿಯನ್ನು ಸವಿಯುವುದಷ್ಟೇ ಅಲ್ಲದೆ ಅಧಿಕಾರ ಮದೋನ್ಮತ್ತತೆಗೆ ಒಳಗಾಗುತ್ತವೆ. ಡಾ. ಹೆನ್ರಿ ಕಿಸ್ಸಿಂಜರ್ ಒಂದು ಕಡೆ ಇದೇ ವಿಷಯವನ್ನು ಪ್ರಸ್ತಾಪಿಸಿದ್ದಾನೆ. ಅಧಿಕಾರವೇ ಉನ್ಮಾದಕಾರಿಯಾಗಿ, ಎಂಥವರನ್ನೂ ಕ್ರೂರಿಯಾಗಲು, ಪ್ರಜಾಪೀಡಕನಾಗಲು ಪ್ರಚೋದಿಸುತ್ತದೆ ಎಂದು. ಮೋಸ, ವಂಚನೆ, ಕುತಂತ್ರಗಳಿಂದಾಗಿ, ಉಳಿದ ಪ್ರಾಣಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಾ, ಗುಲಾಮಗಿರಿಯ ಸಂಕೋಲೆಗಳಲ್ಲಿ ಬಂಧಿಸಿ, ಅಧಿಕಾರಶಾಹಿ ಹಂದಿಗಳು, ಯಾವ ಮನುಷ್ಯರಿಗೂ ಕಡಿಮೆಯಿಲ್ಲದಂತೆ ವರ್ತಿಸುತ್ತವೆ. ಬಂಡವಾಳಶಾಹಿ, ಅಧಿಕಾರಶಾಹಿ ವ್ಯವಸ್ಥೆಯ ಪುನರವತರಣದಂತೆ ಕಾಣಿಸುತ್ತದೆ.

ಅಲೆಗೊರಿಯ ಹಿಂದಿನ ಅರ್ಥ ಸ್ಪಷ್ಟವಾಗಿಯೇ ಇದೆ. ಸೋವಿಯೆಟ್ ಯೂನಿಯನ್‌ನಲ್ಲಿ ಆರ್ಥಿಕ, ಸಾಮಾಜಿಕ ಸಮಾನತೆಯ ಅತ್ಯಂತ ಆದರ್ಶಮಯ ತಾತ್ವಿಕ ಚಿಂತನೆಗಳ ನೆಲಗಟ್ಟಿನ ಮೇಲೆ ಕಮ್ಯೂನಿಸಂ ಉದಯವಾಯಿತು. ಆದರೆ ಬಹಳ ಅಲ್ಪ ಕಾಲದಲ್ಲಿಯೇ, ಅವನತಿಯತ್ತ ಸಾಗಿತು. ವಿಮರ್ಶಕನೊಬ್ಬನ ಮಾತಿನಲ್ಲಿ, ಆ್ಯನಿಮಲ್ ಫಾರಮ್, ಸೋವಿಯತ್ ಸರಕಾರ ಸಮಾಜವಾದಿ ಸಿದ್ಧಾಂತಗಳಿಗೆ ಹೇಗೆ ವಿರುದ್ಧವಾಗಿ ನಡೆದುಕೊಂಡಿತೆಂಬುದನ್ನು ವಿಡಂಬಿಸಲೆಂದೇ ಬರೆದ ಕೃತಿಯಾಗಿದೆ.

ಕಾದಂಬರಿಯ ಕಡೆಯ ಪುಟಗಳಂತೂ ಲೇಖಕನ ಮುಖ್ಯ ಆಶಯವನ್ನು ಅತ್ಯಂತ ಸಮರ್ಥವಾಗಿ, ಧ್ವನಿಪೂರ್ಣವಾಗಿ ವಿವರಿಸುತ್ತವೆ. ಹಂದಿಗಳು ಮನುಷ್ಯರು ಒಟ್ಟಿಗೆ ಕುಳಿತು ಕುಡಿಯುತ್ತಾರೆ; ಇಸ್ಪಿಟ್ ಆಡುತ್ತಾರೆ. ಮನುಷ್ಯರ ದಬ್ಬಾಳಿಕೆ, ಶೋಷಣೆಗಳಿಂದ ಮುಕ್ತವಾದ ಪ್ರಾಣಿ ಜಗತ್ತೊಂದನ್ನು ಸೃಷ್ಟಿಸಿ, ತಮ್ಮ ತಮ್ಮ ಪರಿಶ್ರಮದ ಫಲವನ್ನು ತಾವೇ ಸಮಾನವಾಗಿ ಅನುಭವಿಸಬೇಕು; ಅನುಭೋಗಿಸಬೇಕೆಂಬ ಆಶಯಗಳೆಲ್ಲ ಕುಸಿದು, ತಾವೇ ತಮ್ಮವರನ್ನು, ಮನುಷ್ಯರಿಗಿಂತಲೂ ಕಡೆಯಾಗಿ ಕ್ರೂರವಾಗಿ ನಡೆಸಿಕೊಳ್ಳುವ ಸನ್ನಿವೇಶಗಳು ದುರಂತ ವ್ಯಂಗ್ಯವಾಗಿ ಕಾಣಿಸುತ್ತದೆ. ಮನುಷ್ಯರ ಒಡನಾಟದಲ್ಲಿ, ಮನುಷ್ಯರಂತೆಯೇ ವರ್ತಿಸುತ್ತಿರುವ, ತಮ್ಮ ನಾಯಕ ಹಂದಿಗಳನ್ನು ನೋಡಿ ಪ್ರಾಣಿಗಳು ಭ್ರಮನಿರಸನಗೊಳ್ಳುತ್ತವೆ. ಬಂಡವಾಳಶಾಹಿ ಮನೋರ್ ಫಾರಮ್ ಕ್ರಾಂತಿಯ ಮೂಲಕ ಆ್ಯನಿಮಲ್ ಫಾರಮ್ ಆಗಿ, ಮತ್ತೆ ಬಂಡವಾಳಶಾಹಿ ಮನೋರ್ ಫಾರಮ್ ಆಗಿ ಪರಿವರ್ತಿತವಾಗುವುದು, ಮನುಷ್ಯರಂತೆ ಎರಡು ಕಾಲಿನ ಮೇಲೆ ನಡೆಯುವುದು, ಕೈಯಲ್ಲಿ ಚಾಟಿ ಹಿಡಿಯುವುದು; ಬಟ್ಟೆ ತೊಡುವುದು-ಇವೆಲ್ಲವೂ ಕಾದಂಬರಿಯ ಕ್ಲೈಮ್ಯಾಕ್ಸ್ (ಪರಾಕಾಷ್ಠೆ) ಆಗಿದೆ. ಒಂದು ಕಾಲಕ್ಕೆ ಮನುಷ್ಯರನ್ನು ದ್ವೇಷಿಸಬೇಕೆಂದು ಪ್ರತಿಪಾದಿಸಿ, ಎರಡು ಕಾಲಿನ ಮೇಲೆ ನಡೆಯುವುದೆಲ್ಲ ನಮ್ಮ ಹಗೆ ಎಂದು ಸೂತ್ರಪ್ರಾಯವಾಗಿ ಸಾರಿದ ಹಂದಿಗಳೇ, ಕಡೆಗೆ ಮನುಷ್ಯರಂತೆ ಎರಡು ಕಾಲಿನ ಮೇಲೆ ನಡೆಯುವುದು ಬಹುದೊಡ್ಡ ವ್ಯಂಗ್ಯವೂ ವಿಪರ್ಯಾಸವೂ ಆಗಿ ಕಾಣಿಸುತ್ತದೆ. ಅವನತಿಯ ಪರಾಕಾಷ್ಠೆಯ ದರ್ಶನದೊಂದಿಗೆ ಕಾದಂಬರಿ ಕೊನೆಯಾಗುತ್ತದೆ.

ಇಷ್ಟಾದರೂ ಆರ್ವೆಲ್‌ನನ್ನು ಟೀಕಿಸುವವರೂ ಕೆಲವರಿದ್ದಾರೆ. ಬ್ರಿಟಿಷ್ ವಿಮರ್ಶಕ ಡಿ.ಎಸ್. ಸವಾಜ್ ಒಂದುಕಡೆ ಆರ್ವೆಲ್ ಒಬ್ಬ ಕಲಾವಿದನಾಗಿ ಸೋತಿದ್ದಾನೆ. ತನ್ನ ವಸ್ತು ಮತ್ತು ಅನುಭವಗಳನ್ನು ಕಲಾತ್ಮಕವಾಗಿ ರೂಪಾಂತರಿಸುವಲ್ಲಿ ಅಸಮರ್ಥನಾಗಿದ್ದಾನೆ ಎಂದು ಆರ್ವೆಲ್‌ನಲ್ಲಿನ ಕೊರತೆಯನ್ನು ಎತ್ತಿ ತೋರಿಸಿದ್ದಾನೆ.

Writer - ಪ್ರೊ. ಬಸವರಾಜ್

contributor

Editor - ಪ್ರೊ. ಬಸವರಾಜ್

contributor

Similar News