ಇರುವುದೆಲ್ಲವ ಬಿಟ್ಟು ನೀವೂ ಒಮ್ಮೆ ಓದಿ

Update: 2018-10-20 17:55 GMT

ಪ್ರಕಾಶ್ ರೈ ಹಾಗೇನೆ. ಅವರದು ವಿಶೇಷ ಚಿಂತನೆ, ಆಕರ್ಷಕ ಮಾತು ಮತ್ತು ಭಿನ್ನ ಬರಹ. ‘ಇರುವುದೆಲ್ಲವ ಬಿಟ್ಟು’ ಅವರ ಅಂಕಣಗಳ ಕೃತಿ ಓದುಗನೊಂದಿಗೆ ಹರಟುವ ಶೈಲಿಯೂ ಇದುವೇ. ಯಾವುದೇ ಮುಚ್ಚು ಮರೆಯಿಲ್ಲದೆ ತುಂಬಾ ಸಮಯದ ಬಳಿಕ ಸಿಕ್ಕ ಗೆಳೆಯನಂತೆ ಕೃತಿ ಓದುಗನೊಂದಿಗೆ ಮಾತಿಗಿಳಿಯುತ್ತದೆ. ಪ್ರೀತಿಯ ಜೊತೆಗಾರನಂತೆ ಪ್ರಕಾಶ್ ರೈಯವರು ಹೆಗಲಿಗೆ ಕೈ ಹಾಕಿ ಮಾತಾಡುತ್ತಾರೆ. ಸರಳ ಭಾಷೆ ಕೃತಿಯ ಹೆಗ್ಗಳಿಕೆ. ಮುಖ್ಯವಾಗಿ ಕೃಷಿ ಜೀವನದೊಳಗಿನ ಖುಷಿ, ಸಮಾಧಾನ, ನಂಬಿಕೆಗಳನ್ನೆಲ್ಲಾ ಕೃತಿ ವಸ್ತುವಾಗಿಸಿಕೊಂಡಿದೆ. ಅದಲ್ಲದೆ ತನ್ನ ಭಿನ್ನ ಅನುಭವಗಳನ್ನು ಪರಿಣಾಮಕಾರಿಯಾಗಿ ಓದುಗರ ಮುಂದೆ ತೆರೆದಿಡುವ ಲೇಖಕರು ಹೊಸತನದ ಅನುಭವವನ್ನು ಓದುಗನಲ್ಲೂ ಬಿತ್ತುವ ರೀತಿ ಖುಷಿಯೆನಿಸುತ್ತದೆ. ತಾನು ಕಂಡ ಕೃಷಿ ಬದುಕಿನೊಂದಿಗೆ ಕೈಗಾರಿಕೆ, ವ್ಯಾಪಾರದ ಯಾಂತ್ರಿಕ ಬದುಕನ್ನು ತುಲನಿಸಿ ವ್ಯವಸಾಯದ ಪ್ರೀತಿಯನ್ನು ಕೃತಿ ಹೇಳುತ್ತದೆ.

ಪ್ರಕೃತಿ ಮನುಷ್ಯನಿಗೆ ಎಲ್ಲವೂ. ಹಣದ ಹಿಂದೆ ಬಿದ್ದಿರುವ ಮನುಷ್ಯ ಕಳೆದುಕೊಳ್ಳುತ್ತಿರುವ ಬಾಳು, ಬದುಕಿನ ಸತ್ವ ಅಡಗಿರುವ ವ್ಯವಸಾಯದ ಬಗೆಗಿನ ಮನುಷ್ಯನ ಅಸಡ್ಡೆ ಮನುಷ್ಯನನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದೆ. ಸಂಬಂಧ, ಪ್ರೀತಿ, ನಂಬಿಕೆಗಳೆಲ್ಲವೂ ಹಣದ ಮುಂದೆ ಅರ್ಥ ಕಳೆದುಕೊಂಡಿದೆ. ಬದುಕೆಂದರೆ ಹಣ, ಸಂಪಾದನೆ ಎಂದು ಅಂದುಕೊಂಡವರ ಬಗ್ಗೆ ಲೇಖಕರು ಮರುಗುತ್ತಾರೆ. ಎಷ್ಟರವರೆಗೆ ಎಂದರೆ ತಾಜ್ ಮಹಲನ್ನು ನೋಡಲು ಹೋಗಿ ‘ನಿರ್ಮಾಣಕ್ಕೆ ಎಷ್ಟು ತಗಲಿರಬಹುದು’ ಎಂದು ಉದ್ಘರಿಸುವ ಜನರೂ ಇದ್ದಾರೆ ಎಂದು ಲೇಖಕರು ಅಚ್ಚರಿ ಪಡುತ್ತಾರೆ. ಬದುಕಿನ ವಿವಿಧ ಮಜಲುಗಳತ್ತ ನೋಟ ಬೀರುವ ಕೃತಿ ನೈಜ ಬದುಕಿನ ಅರ್ಥ ಕಂಡು ಹಿಡಿಯುವಲ್ಲಿ ಗೆಲುವಾಗುತ್ತದೆ. ಇನ್ನೊಬ್ಬನ ಬದುಕನ್ನು ನಕಲು ಮಾಡಿಕೊಂಡು ನಮ್ಮ ಬದುಕನ್ನು ಬಾಳಲಾಗದೆ ನಾವು ಅತೃಪ್ತರಾಗುತ್ತೇವೆ. ಪ್ರತಿಯೊಬ್ಬರಿಗೂ ಬದುಕು ವಿಶಾಲ. ಕಾಯುತ್ತಿರುತ್ತದೆ ನೂರಾರು ಬಣ್ಣಗಳಲ್ಲಿ. ಅವಕಾಶಗಳ ಗುಚ್ಛವನ್ನು ಮುಂದಿಡುತ್ತಾ. ‘ಮಾತೃ ಭಾಷೆ ನಮ್ಮಾಳಗೆ ಹರಿವ ಜೀವನದಿ’ ಎನ್ನುವ ಬರಹದಲ್ಲಿ ಕನ್ನಡತನದ ಮೆಚ್ಚುಗೆಗೆ, ಪ್ರೀತಿಗೆ ಹೆಮ್ಮೆಯ ಅಪ್ಪುಗೆಯಿದೆ. ಕನ್ನಡವನ್ನು ಲೇಖಕರು ಕೊಂಡಾಡುತ್ತಾರೆ. ಮಾತೃಭಾಷೆಯೊಂದಿಗೆ ಬೆಸೆದುಕೊಂಡಿರುವ ಸಂಸ್ಕೃತಿ, ಸಂಪ್ರದಾಯಗಳ ರುಚಿಯೇ ಬೇರೆ. ಭಾಷೆ ಕಲಿಯುವುದೆಂದರೆ ಒಂದು ಸಂಸ್ಕೃತಿಯನ್ನು ಅರಿತುಕೊಂಡಂತೆ.

ಸಂಸ್ಕೃತಿ ಮತ್ತು ಭಾಷೆ ಮಿಳಿತವಾದವುಗಳು. ಇನ್ನು ‘ನಮ್ಮೆಲ್ಲರ ಮುಸ್ಸಂಜೆ ಕಥಾ ಪ್ರಸಂಗ’ ಬರಹದಲ್ಲಿ ಹಿರಿಯರ ಬಗೆಗಿನ ಮೆಚ್ಚುಗೆ, ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಅಟ್ಟುವವರ ಬಗೆಗಿನ ವಿರೋಧದ ಕಿಚ್ಚು ಎರಡೂ ಕಾಣಸಿಗುತ್ತದೆ. ಬದುಕಿದ್ದಾಗ ಮೂಲೆಗುಂಪು ಮಾಡಿ, ಸತ್ತ ನಂತರ ಫೋಟೊ ಇಟ್ಟು ಪೂಜಿಸುವುದರಲ್ಲಿ ಇರುವ ಅರ್ಥವನ್ನು ಕೃತಿ ಪ್ರಶ್ನಿಸುತ್ತದೆ. ಸಂಬಂಧಗಳು ಶಿಥಿಲವಾಗತೊಡಗಿದೆ. ಯಾಂತ್ರಿಕವಾಗಿದೆ. ನಿರ್ದಿಷ್ಟ ಸಮಯದವರೆಗೆ ಆರ್ಥಿಕವಾಗಿ ಬಲ ಕೊಡಬಲ್ಲವ ಮಾತ್ರ ಎಂದು ಇಂದಿನ ಮಕ್ಕಳು ಅಂದುಕೊಳ್ಳತೊಡಗಿದ್ದಾರೆ. ಅಮ್ಮನ ಅಮೂಲ್ಯತೆ ಗೊತ್ತಿಲ್ಲ. ತುತ್ತು ತಿನ್ನಿಸಿ, ಮುತ್ತನ್ನಿಟ್ಟು ಪ್ರೀತಿಯಿಂದ ಮೈದಡವುದರ ಹಿಂದಿರುವ ಅಮ್ಮನ ಮಮತೆ, ಅವಳ ತ್ಯಾಗ ಇಂದಿನ ಮಕ್ಕಳಿಗೆ ಅರ್ಥವೇ ಆಗುವುದಿಲ್ಲ. ಇದು ನಮ್ಮ ನಡುವಿನ ದುರಂತ. ಸಂಬಂಧಗಳ ಮಾತು ಮಧುರ. ಕೃತಿಯುದ್ದಕ್ಕೂ ಈ ಮಧುರ ಮಾತುಗಳಿವೆ. ದ್ವೀಪವಾಗಿ ಉಳಿಯುವ ಏಕಾಂತ ಜೀವನವನ್ನು ಪ್ರಶ್ನಿಸಿ ಸಂಬಂಧದ ಹಳಿಗೆ ಓದುಗನನ್ನು ಎಳೆದು ತರುವ ಪ್ರಯತ್ನ ಕೃತಿಯಲ್ಲಿದೆ. ನಟ, ತಂದೆ, ಮಗ, ಬರಹಗಾರ, ವಾಗ್ಮಿ ಹೀಗೆ ಹಲವು ತೆರನಾಗಿ ಬದುಕನ್ನು ಕಂಡಿದ್ದಾರೆ ಪ್ರಕಾಶ್ ರೈ. ಅನುಭವಗಳ ಮಾತು ಓದುಗನನ್ನು ಅವರೊಂದಿಗಿರಿಸುತ್ತದೆ. ಓದುಗನ ಬದುಕನ್ನು ತನ್ನ ಬದುಕಿನ ಅಚ್ಚಿನಲ್ಲಿಟ್ಟು ನೋಡಿದ್ದಾರೆ ಲೇಖಕರು. ಪ್ರೀತಿಯ ಮಾತು, ಸರಳ ಭಾಷೆ, ವಿಶೇಷ ಅಭಿವ್ಯಕ್ತಿಯಿಂದ ಖುದ್ದು ಅವರ ಜೊತೆ ಹರಟಿದಂತೆ ಕೃತಿಯುದ್ಧಕ್ಕೂ. ಮನಬಿಚ್ಚಿ ನಮ್ಮನ್ನು ತೆರೆದಿಟ್ಟುಕೊಂಡಂತೆ. ನಮ್ಮ ಬದುಕಿನ ಆಯಾಮಗಳು, ಅಭಿವ್ಯಕ್ತಿಗಳು ಇನ್ನೊಬ್ಬನಿಗೆ ಹೊರೆಯಾಗಬಾರದು ಮತ್ತು ಇನ್ನೊಬ್ಬನ ಬದುಕನ್ನು ಹೊರೆಯಾಗಿಸಿಕೊಳ್ಳಬಾರದು ಎನ್ನುತ್ತದೆ ಕೃತಿ. ಕೊನೆಗೆ ‘ನೀ ಯಾರಿಗಾದೆಯೋ ಎಲೆ ಮಾನವಾ?’ ಬರಹದಡಿ ಕಳೆದುಹೋದಾಗ ಯಾವೆಲ್ಲಾ ಕಾರಣಗಳಿಂದ ನಾವು ಹುಡುಕಿಸಿಕೊಳ್ಳುತ್ತೇವೆ? ಅಪ್ಪ, ಅಮ್ಮ, ಹೆಂಡತಿ, ಮಕ್ಕಳು, ಗೆಳೆಯರು ಯಾಕಾಗಿ ನಮ್ಮನ್ನು ಹುಡುಕುತ್ತಾರೆ ಎಂಬ ಪ್ರಶ್ನೆಗಳು ಚಿಂತನೆಗೆ ಹಚ್ಚುತ್ತವೆ. ಸ್ವಲ್ಪವೂ ಕಳೆದುಹೋಗದೆ ಪ್ರತೀಕ್ಷಣವನ್ನೂ ಬದುಕಿ ಬಿಡೋಣ ಅನ್ನುತ್ತಾರೆ ಲೇಖಕರು. ಸಮಾಜದಲ್ಲಿ, ಕುಟುಂಬದಲ್ಲಿ ನಾವು ಹೇಗಿರಬೇಕು ಮತ್ತು ಹೇಗಿರಬಾರದೆಂಬುದನ್ನು ಕೃತಿ ಹೇಳಿದೆ.

ಮೊಬೈಲು, ಟಿವಿ ಅಂತ ನಮ್ಮ ಮಕ್ಕಳು ನಮ್ಮಿಂದ ಕಳೆದುಹೋಗುತ್ತಿದ್ದಾರೆ. ಇಂದಿನ ಮನುಷ್ಯನಲ್ಲಿ ಸ್ವಾರ್ಥ, ಸಂಕುಚಿತ ಮನೋಭಾವ ಜಿಡ್ಡುಗಟ್ಟಿದೆ. ಇನ್ನೊಬ್ಬನ ನೋವಿಗಿರುವ ಸ್ಪಂದನೆ, ಮನುಷ್ಯತ್ವದ ಮೌಲ್ಯ ಮಾಯವಾಗಿರುವ ಇಂದಿನ ಸನ್ನಿವೇಶಕ್ಕೆ ಕೃತಿ ಕನ್ನಡಿ ಹಿಡಿದಿದೆ. ಹಿಂದೆ ಮತ್ತು ಇಂದಿನ ಸನ್ನಿವೇಶಗಳನ್ನು ಚರ್ಚೆಗೆ ಎಳೆದು ತಂದು ನಮ್ಮ ಹಿರಿಯರು ಬದುಕಿದ ಬಗೆ ಪ್ರಸ್ತುತವನ್ನು ಅಣಕಿಸುತ್ತದೆ.

ಹೇಳುವುದಿಷ್ಟೇ,

ಇರುವುದೆಲ್ಲವ ಬಿಟ್ಟು ನೀವೂ ಒಮ್ಮೆ ಇದನ್ನು ಓದಿ.... ?

ನಾನು ಓದಿದ ಪುಸ್ತಕ

- ಎ. ರಹ್‌ಮಾನ್, ಕಕ್ಯಪದವು

Writer - ಎ. ರಹ್‌ಮಾನ್, ಕಕ್ಯಪದವು

contributor

Editor - ಎ. ರಹ್‌ಮಾನ್, ಕಕ್ಯಪದವು

contributor

Similar News