ಫೈನಲ್‌ಗೆ ತಲುಪಿ ದಾಖಲೆ ಬರೆದ ಓನ್ಸ್ ಜಬ್ಯೂರ್

Update: 2018-10-20 18:45 GMT

ಮಾಸ್ಕೊ, ಅ.20: ಐದನೇ ಶ್ರೇಯಾಂಕದ ಆಟಗಾರ್ತಿ ಲಾತ್ವಿಯಾದ ಅನಸ್ತೇಶಿಯ ಸೆವಸ್ತೋವ ಎದುರು 6-3, 3-6, 6-3 ಅಂತರದ ಜಯ ಸಾಧಿಸಿ ಕ್ರೆಮ್ಲಿನ್ ಕಪ್ ಟೆನಿಸ್ ಟೂರ್ನಿಯ ಫೈನಲ್ ತಲುಪಿರುವ ಟ್ಯುನೀಶಿಯಾದ ಓನ್ಸ್ ಜಬ್ಯೂರ್, ಡಬ್ಲೂಟಿಎ ಫೈನಲ್ ತಲುಪಿದ ಟ್ಯುನೀಶಿಯಾದ ಪ್ರಥಮ ಆಟಗಾರ್ತಿ ಎಂಬ ಐತಿಹಾಸಿಕ ಸಾಧನೆ ಬರೆದಿದ್ದಾರೆ.ಅರ್ಹತಾ ಸುತ್ತಿನಿಂದ ಗೆದ್ದು ಬಂದಿರುವ ವಿಶ್ವದ 101ನೇ ಶ್ರೇಯಾಂಕದ ಆಟಗಾರ್ತಿ ಓನ್ಸ್ 1 ಗಂಟೆ 37 ನಿಮಿಷ ಸಾಗಿದ ಸೆಮಿಫೈನಲ್ ಪಂದ್ಯದಲ್ಲಿ ಜಯ ಸಾಧಿಸಿ ಫೈನಲ್ ಹಂತ ಪ್ರವೇಶಿಸಿದರು.

ಇದೊಂದು ನಿಜಕ್ಕೂ ಅದ್ಭುತ ಸಾಧನೆಯಾಗಿದ್ದು ಸಂತಸವಾಗಿದೆ ಎಂದು 24ರ ಹರೆಯದ ಓನ್ಸ್ ಪ್ರತಿಕ್ರಿಯಿಸಿದ್ದಾರೆ. ಶನಿವಾರ ತಡರಾತ್ರಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಓನ್ಸ್ ಕಳೆದ ವರ್ಷದ ರನ್ನರ್ ಅಪ್ ರಶ್ಯದ ಡರಿಯಾ ಕಸಟ್ಕಿನರ ಸವಾಲನ್ನು ಎದುರಿಸಲಿದ್ದಾರೆ. ಡರಿಯಾ ಮತ್ತೊಂದು ಸೆಮಿಫೈನಲ್‌ನಲ್ಲಿ ಬ್ರಿಟನ್‌ನ ಜೊಹಾನಾ ಕೊಂಟ ಅವರೆದುರು 6-4, 6-3 ನೇರ ಸೆಟ್‌ಗಳ ಜಯ ಸಾಧಿಸಿದರು. ಎಟಿಪಿ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಫ್ರಾನ್ಸ್ ನ ಅಡ್ರಿಯಾನ್ ಮನ್ನರಿನೊ ಬೆಲರೂಸ್‌ನ ಇಗರ್ ಜೆರಸಿಮೋವ್ ಅವರನ್ನು 7-6(7/3), 6-3 ಸೆಟ್‌ಗಳಿಂದ ಸೋಲಿಸಿದರೆ, ಇಟಲಿಯ ಆ್ಯಂಡ್ರಿಯಾಸ್ ಸೆಪ್ಪಿ ಸರ್ಬಿಯಾದ ಫಿಲಿಪ್ ಕ್ರಜಿನೋವಿಕ್ ಎದುರು 6-4, 7-6(7/2) ಅಂತರದ ಗೆಲುವು ಸಾಧಿಸಿದರು. ಸೆಮಿಫೈನಲ್‌ನಲ್ಲಿ ಅಡ್ರಿಯಾನ್ ಮನ್ನರಿನೊ ಹಾಗೂ ಆ್ಯಂಡ್ರಿಯಾಸ್ ಸೆಪ್ಪಿ ಪರಸ್ಪರ ಸೆಣಸಲಿದ್ದಾರೆ. ಇನ್ನೊಂದು ಸೆಮಿಫೈನಲ್‌ನಲ್ಲಿ ರಶ್ಯದ ಡ್ಯಾನಿಲ್ ಮೆಡ್ವೆಡೇವ್ ಸ್ವದೇಶದ ಕ್ಯರೆನ್ ಖಚನೋವ್ ಎದುರು ಸೆಣಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News