ಔರಾದ್ಕರ್‌ ಸಮಿತಿ ಜಾರಿಗೆ ಬದ್ಧ: ಎಚ್.ಡಿ.ಕುಮಾರಸ್ವಾಮಿ

Update: 2018-10-21 12:10 GMT

ಬೆಂಗಳೂರು, ಅ.21: ಪೊಲೀಸರ ವೇತನ ಪರಿಷ್ಕರಣೆ ಸಂಬಂಧ ಹೆಚ್ಚುವರಿ ಪೊಲೀಸ್ ನಿರ್ದೇಶಕ ಔರಾದ್‌ಕರ್ ನೇತೃತ್ವದ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿದ್ದು, ಈ ಸಂಬಂಧ ಶೀಘ್ರದಲ್ಲಿಯೇ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ನಗರದ ಕೋರಮಂಗಲದ ಕೆಎಸ್‌ಆರ್‌ಪಿ 3ನೇ ಪಡೆ ಕವಾಯತು ಮೈದಾನದಲ್ಲಿ ರಾಜ್ಯ ಪೊಲೀಸ್ ಇಲಾಖೆ ಏರ್ಪಡಿಸಿದ್ದ, ಪೊಲೀಸ್ ಸಂಸ್ಮರಣ ದಿನಾಚರಣೆಯಲ್ಲಿ ಪಾಲ್ಗೊಂಡು, ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿ, ಅವರು ಮಾತನಾಡಿದರು.

ದೇಶಕ್ಕಾಗಿ ದುಡಿದು ಪ್ರಾಣ ತ್ಯಾಗ ಮಾಡಿದವರನ್ನು ಸ್ಮರಿಸುವ ಈ ದಿನದಂದು ಪೊಲೀಸರ ಬೇಡಿಕೆಗಳನ್ನು ಈಡೇರಿಸಲು ಸರಕಾರ ಸಿದ್ಧವಿದೆ. ಸರಕಾರದ ಮೇಲೆ ಎಷ್ಟೇ ಹೊರೆ ಇದ್ದರೂ ನಿಮಗೆ ಸಹಕಾರಿಯಾಗುವಂತಹ ಕೆಲಸ ಮಾಡುತ್ತೇವೆ. ಈ ಕುರಿತು ಚರ್ಚೆ ನಡೆಯುತ್ತಿದೆ. ಆದಷ್ಟು ಬೇಗ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಹೇಳಿದರು.

ನಾಡಿನಲ್ಲಿ ಯಾವುದೇ ಅಮಾನವೀಯ ಘಟನೆಗಳು ಸಂಭವಿಸದಂತೆ ಪೊಲೀಸರು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯಾವುದೇ ರಾಜಿಗೆ ಒಳಗಾಗದೇ ಮುಕ್ತವಾಗಿ ಕೆಲಸ ಮಾಡಬೇಕು. ಇನ್ನೂ ಹೆಚ್ಚಿನ ರೀತಿಯ ಕೆಲಸವನ್ನು ನಾವು ನಿಮ್ಮಿಂದ ಬಯಸುತ್ತಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News