ಗಲಭೆಕೋರರನ್ನು ಮಟ್ಟ ಹಾಕಿ: ಅಧಿಕಾರಿಗಳಿಗೆ ಕುಮಾರಸ್ವಾಮಿ ಸೂಚನೆ

Update: 2018-10-21 12:43 GMT

ಬೆಂಗಳೂರು, ಅ.21: ಅಶಾಂತಿ ವಾತಾವರಣ ನಿರ್ಮಿಸಿಲು ಮುಂದಾಗುವ ಗಲಭೆಕೋರರನ್ನು ಪೊಲೀಸ್ ಇಲಾಖೆ ಮಟ್ಟ ಹಾಕಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರವಿವಾರ ನಗರದ ಕೋರಮಂಗಲದ ಕೆಎಸ್‌ಆರ್‌ಪಿ 3ನೇ ಪಡೆ ಕವಾಯತು ಮೈದಾನದಲ್ಲಿ ರಾಜ್ಯ ಪೊಲೀಸ್ ಇಲಾಖೆ ಏರ್ಪಡಿಸಿದ್ದ, ಪೊಲೀಸ್ ಸಂಸ್ಮರಣ ದಿನಾಚರಣೆಯಲ್ಲಿ ಪಾಲ್ಗೊಂಡು, ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿ, ಅವರು ಮಾತನಾಡಿದರು. ಅಶಾಂತಿಯ ವಾತಾವರಣ ಉಂಟು ಮಾಡಲು ಒಂದು ವರ್ಗ ಹುಟ್ಟುಕೊಂಡಿದೆ. ಜಾತಿ, ಧರ್ಮಗಳ ಹೆಸರಿನಲ್ಲಿ ಸಂಘರ್ಷ ಸೃಷ್ಟಿಸಲು ಇವರು ಸಂಚು ರೂಪಿಸುತ್ತಿದ್ದಾರೆ. ಇಂತಹ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ಹಿಂಜರಿಯಬಾರದು. ಇದಕ್ಕೆ ನಮ್ಮ ಸರಕಾರ ಮುಕ್ತ ಅವಕಾಶ ನೀಡುತ್ತದೆ ಎಂದು ಹೇಳಿದರು.

ಮಾದಕ ವಸ್ತುಗಳನ್ನು ನಿಯಂತ್ರಿಸಿ: ಇಂದಿನ ಯುವ ಶಕ್ತಿ, ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಇದು ದೊಡ್ಡ ಸಮಸ್ಯೆಯೂ ಆಗಿ ಬೆಳೆಯುತ್ತಿದೆ. ಮಾದಕ ವ್ಯಸನಿ ಮತ್ತು ಮಾರಾಟಗಾರರ ಮಟ್ಟ ಹಾಕುವ ಹೊಣೆ ಪೊಲೀಸ್ ಇಲಾಖೆ ಮೇಲಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಕುಮಾರಸ್ವಾಮಿ ಸಲಹೆ ನೀಡಿದರು.

ಪೊಲೀಸ್ ಇಲಾಖೆ ಅಧಿಕಾರಿಗಳು ಜನಸ್ನೇಹಿ ಎಂಬ ಭಾವನೆ ಸಾಮಾನ್ಯ ಜನರಲ್ಲಿ ಮೂಡಬೇಕು. ಆ ರೀತಿಯಲ್ಲಿ ನೀವು ಕೆಲಸ ಮಾಡಬೇಕು. ಪೊಲೀಸರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ನಾಡನ್ನು ಕಾಯುವ ಕೆಲಸ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.

ದೇಶದಲ್ಲೇ ರಾಜ್ಯ ಪೊಲೀಸ್ ಕರ್ತವ್ಯನಿಷ್ಠೆ ಮತ್ತು ಪ್ರಾಮಾಣಿಕ ಸೇವೆಯಲ್ಲಿ ಹೆಸರುವಾಸಿಯಾಗಿದೆ. ನಮ್ಮ ಅಧಿಕಾರಿಗಳು ಅತ್ಯುತ್ತಮ ಕೆಲಸ ಮಾಡಿದ್ದಾರೆ. ನಾಡನ್ನು ರಕ್ಷಣೆ ಮಾಡುತ್ತಿರುವ ನಿಮಗೆ ರಾಜ್ಯದ ಪರವಾಗಿ ಗೌರವ ಸಲ್ಲಿಸುತ್ತೇನೆ ಎಂದು ನುಡಿದರು.

ಪೊಲೀಸ್ ಸಂಸ್ಮರಣ: 1959ರ ಅಕ್ಟೋಬರ್ 21ರಂದು ಕೇಂದ್ರ ಮೀಸಲು ಪೊಲೀಸ್ ಪಡೆಯ ಎಸ್ಸೈ ಕರಂ ಸಿಂಗ್ ನೇತೃತ್ವದ 20 ಜನರ ತಂಡ ಭಾರತ ಮತ್ತು ಚೈನಾ ದೇಶದ ಗಡಿ ಪ್ರದೇಶದ ಲಡಾಕ್‌ನ ಹಾಟ್‌ಸ್ಪ್ರಿಂಗ್ ಎಂಬ ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವಾಗ ನೆರೆಯ ಚೈನಾ ದೇಶದ ಸೈನಿಕರು ಹಠಾತ್ತನೆ ಆಕ್ರಮಣ ಮಾಡಿ ಕರಂಸಿಂಗ್ ಮತ್ತು ಇತರೆ 9 ಸಿಬ್ಬಂದಿಯನ್ನು ಹತ್ಯೆ ಮಾಡಿದ್ದು, ಹುತಾತ್ಮರಾದರು. ಈ ದಿನ ರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಾಗ, ರಾಷ್ಟ್ರ ರಕ್ಷಣೆ ಮಾಡುವಾಗ ಮತ್ತು ಇತರೆ ಕರ್ತವ್ಯ ನಿರತ ಅವಧಿಯಲ್ಲಿ ಪ್ರಾಣ ತ್ಯಾಗ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಗೌರವ ಪೂರಕವಾಗಿ ಸ್ಮರಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸರಕಾರ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಗೃಹ ಇಲಾಖೆ ಕಾರ್ಯದರ್ಶಿ ರಜನೀಶ್, ನಟ ಸುದೀಪ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಪ್ರೆಸ್‌ಕ್ಲಬ್ ಅಧ್ಯಕ್ಷ ಸದಾಶಿವ ಶಣೈ, ಕಸಾಪ ಅಧ್ಯಕ್ಷ ಡಾ.ಮನುಬಳಿಗಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News