ವಿಜ್ಞಾನ ಸಾಹಿತ್ಯ ಅಸ್ಪೃಶ್ಯವಾಗುತ್ತಿದೆ: ಕಾದಂಬರಿಕಾರ ಕೆ.ಎನ್.ಗಣೇಶಯ್ಯ

Update: 2018-10-21 12:23 GMT

ಬೆಂಗಳೂರು, ಅ.21: ವಿಜ್ಞಾನದ ಸಾಹಿತ್ಯವು ಮುಟ್ಟಿಸಿಕೊಳ್ಳದ ಅಸ್ಪಶ್ಯ ಸಾಹಿತ್ಯವಾಗಿ ಹಿಂದೆ ಸರಿಯುತ್ತಿದೆ ಎಂದು ಕಾದಂಬರಿಕಾರ ಕೆ.ಎನ್.ಗಣೇಶಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಗಾಂಧಿ ಭವನದಲ್ಲಿ ಸೆಂಟರ್ ಫಾರ್ ಪಬ್ಲಿಕ್ ಅಂಡರ್ ಸ್ಟಾಂಡಿಂಗ್ ಆಫ್ ಸೈನ್ಸ್ ವತಿಯಿಂದ ಆಯೋಜಿಸಿದ್ದ ಡಾ.ಟಿ.ಎಸ್.ಚನ್ನೇಶ್ ಅವರ ‘ನೊಬೆಲ್ 2017’ ಹಾಗೂ ‘ಅನುರಣನ’ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಿಜ್ಞಾನ ಸಾಹಿತ್ಯದ ಕಡೆ ಯಾರೂ ಹೆಚ್ಚು ಒಲವು ತೋರಿಸದೇ ಅದನ್ನು ಕಡೆಗಣಿಸಲಾಗುತ್ತಿದೆ ಎಂದು ಹೇಳಿದರು.

ವಿಜ್ಞಾನ ಕಬ್ಬಿಣದ ಕಡಲಿದ್ದಂತೆ ಎಂಬ ಅಪನಂಬಿಕೆ ಇದೆ. ಆದರೆ, ವಿಜ್ಞಾನವನ್ನು ಅರಿತು ಬರೆಯುವುದನ್ನು ಅಳವಡಿಸಿಕೊಂಡರೆ ಯಾವುದೂ ಕಷ್ಟವಿಲ್ಲ. ಆದರೆ, ಕೆಲವು ಸಾಹಿತಿಗಳು ವಿಜ್ಞಾನ ಸಾಹಿತ್ಯವನ್ನು ಬರೆಯುತ್ತಿದ್ದರೂ, ಅದರಲ್ಲಿ ವಿಜ್ಞಾನಿಗಳ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ವಿಜ್ಞಾನಿಗಳನ್ನು ಕಳ ನಾಯಕರಂತೆ ಚಿತ್ರಿಸುತ್ತಿದ್ದಾರೆ. ಹೀಗಾಗಿ, ವಿಜ್ಞಾನಿಗಳ ನೈಜ ಮಾನವೀಯ ಮುಖವನ್ನು ತೆರೆದಿಡುವ ಪ್ರಯತ್ನ ಮಾಡಬೇಕು ಎಂದು ನುಡಿದರು.

ವಿಜ್ಞಾನದ ಕುರಿತಂತೆ ಹಲವಾರು ಲೇಖನ, ಪುಸ್ತಕ ಬರೆದಿರುವ ಪೂರ್ಣಚಂದ್ರ ತೇಜಸ್ವಿ ಅವರು ಮ್ಯಾಜಿಕಲ್ ಕ್ರೀಯೇಟರ್ ಆಗಿದ್ದರು. ಅಂತಹವರು ಇಂದಿನ ಸಂದರ್ಭದಲ್ಲಿ ಯಾರೂ ಕಾಣುಸುತ್ತಿಲ್ಲ ಎಂದ ಅವರು, ವಿಜ್ಞಾನಿಗಳು ಹೊಸ ಆವಿಷ್ಕಾರಗಳನ್ನು ಮಾಡಿದ ನಂತರ ಅದನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ಮಾಡುತ್ತಿಲ್ಲ. ಬದಲಿಗೆ, ಅವರು ಮತ್ತೊಂದು ಹೊಸ ಆವಿಷ್ಕಾರ ನಡೆಸಲು ಮುಂದಾಗುತ್ತಿದ್ದಾರೆ. ಇದರಿಂದಾಗಿ, ಹಿಂದಿನದನ್ನು ತಿಳಿಯಲು ಕಷ್ಟವಾಗುತ್ತದೆ ಎಂದರು.

ಇಂದಿನ ಸಂದರ್ಭದಲ್ಲಿ ವಿಜ್ಞಾನವನ್ನು ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಕಟ್ಟಿಕೊಡಲು ಸಾಧ್ಯವಾಗುತ್ತಿಲ್ಲ. ಆದುದರಿಂದಾಗಿ, ಹೆಚ್ಚು ಜನರನ್ನು ತಲುಪಲು ಕಷ್ಟವಾಗುತ್ತಿದೆ. ಹಿಂದೆ ಬಿ.ಜಿ.ಎಲ್. ಸ್ವಾಮಿ ಸೇರಿದಂತೆ ಕೆಲವರು ಈ ಕಡೆ ಪ್ರಯತ್ನ ನಡೆಸಿದ್ದರು. ಅಲ್ಲದೆ, ನಾಗೇಶ್ ಹೆಗಡೆ, ಟಿ.ಆರ್.ಅನಂತರಾಮ ಹಲವು ವಿಜ್ಞಾನದ ಲೇಖನಗಳನ್ನು ಬರೆದಿದ್ದಾರೆ. ಆದರೆ, ಅವರೆಲ್ಲರೂ ಹಿಂದಿನ ಕಾಲದವರಾಗಿದ್ದಾರೆ. ಹೀಗಾಗಿ, ಇಂದಿನ ಲೇಖಕರು, ಬರಹಗಾರರ ಅಗತ್ಯವಿದೆ. ಸಂವಹನ ಮಾಡುವ ಕಾರ್ಯವನ್ನು ಈಗ ಕೈಗೆತ್ತಿಕೊಳ್ಳಬೇಕಿದೆ ಎಂದು ತಿಳಿಸಿದರು.

ಲೇಖಕ ಡಾ.ಟಿ.ಎಸ್.ಚನ್ನೇಶ್ ತಮ್ಮ ಕೃತಿಗಳಲ್ಲಿ ಮಾನವೀಯತೆಯ ಕಾಳಜಿಯನ್ನು ತೋರಿದ್ದಾರೆ. ಮಾನವ ಜನಾಂಗಕ್ಕೆ ಅನುಕೂಲವಾಗುವ ಅಂಶಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಇಂದಿನ ಸಂದರ್ಭಕ್ಕೆ ಅಗತ್ಯವಿರುವ ವಿಜ್ಞಾನ ಸಾಹಿತ್ಯದ ಲೇಖಕರಲ್ಲಿ ಚನ್ನೇಶ್ ಒಬ್ಬರಾಗಿದ್ದಾರೆ ಎಂದು ಗಣೇಶಯ್ಯ ಅಭಿನಂದಿಸಿದರು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಪ್ರಾಧ್ಯಾಪಕ ಪ್ರೊ.ಎನ್. ಸುಬ್ರಮಣಿಯನ್ ಮಾತನಾಡಿ, ವಿಜ್ಞಾನವು ಅಪಾರವಾದ ಕೊಡುಗೆ ನೀಡಿದೆ. ವಿಜ್ಞಾನದಿಂದ ಜೀವನದ ಎಲ್ಲ ಕ್ಷೇತ್ರಗಳಲ್ಲಿಯೂ ಸಹಕಾರಿಯಾಗುತ್ತದೆ. ಹೀಗಾಗಿ, ವಿಜ್ಞಾನದ ಎಲ್ಲ ಮೌಲ್ಯವನ್ನು ಗ್ರಹಿಸಬೇಕು. ಇದು ಇಂದಿನ ಅತ್ಯಗತ್ಯವಾಗಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಜನರಿಗೆ ವಿಜ್ಞಾನ ಏನು ಎಂಬುದನ್ನು ತಿಳಿಸಲು ಸಾಧ್ಯವಾಗುತ್ತಿಲ್ಲ. ಜನರಿಗೆ ಅರ್ಥವಾಗುವ ಭಾಷೆಯಲ್ಲಿ ವಿಜ್ಞಾನದ ವಿಚಾರಗಳನ್ನು ತಲುಪಿಸುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಲೇಖಕ ಡಾ.ಟಿ.ಎಸ್.ಚನ್ನೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News