ಕೇಂದ್ರ ಸರಕಾರದ ವಿರುದ್ಧ ಪಿಂಚಣಿದಾರರ ಆಕ್ರೋಶ

Update: 2018-10-21 13:19 GMT

ಬೆಂಗಳೂರು, ಅ.21: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಪಿಂಚಣಿದಾರರ ವಿರೋಧಿ ಸರಕಾರವಾಗಿದೆ ಎಂದು ಭವಿಷ್ಯನಿಧಿ ವಂತಿಗೆದಾರರ ಮತ್ತು ಇಪಿಎಫ್ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜೈ.ಶಂಕರರೆಡ್ಡಿ ಆರೋಪಿಸಿದ್ದಾರೆ.

ರವಿವಾರ ನಗರದ ಮಲ್ಲೇಶ್ವರಂನ ಆಜಾದ್ ಮೈದಾನದಲ್ಲಿ ಆಯೋಜಿಸಿದ್ದ ಇಪಿಎಫ್ ಪಿಂಚಣಿದಾರರ ಸಮಾವೇಶದಲ್ಲಿ ಮಾತನಾಡಿದ ಅವರು, 1971ರಲ್ಲಿ ಪಿ.ವಿ.ನರಸಿಂಹರಾವ್ ನೇತೃತ್ವದ ಸರಕಾರ ನಿವೃತ್ತ ಬಡ ಕಾರ್ಮಿಕರ ಆರ್ಥಿಕ ಸಬಲೀಕರಣ ದೃಷ್ಟಿಯಿಂದ ಕುಟುಂಬ ಪಿಂಚಣಿ ಯೋಜನೆಯನ್ನು ಬದಲಾಯಿಸಿ ಕಾರ್ಮಿಕ ಯೋಜನೆ 1995 ಅನ್ನು ಜಾರಿ ಮಾಡಿದ್ದರು ಎಂದು ಹೇಳಿದರು.

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಮೋದಿ ಸರಕಾರ ಹಿಂದಿನ ಕಾರ್ಮಿಕ ಯೋಜನೆಯಲ್ಲಿನ ಅನೇಕ ಅಂಶಗಳನ್ನು ಬದಲಾವಣೆ ಮಾಡಿ ಬಡ ನಿವೃತ್ತ ಕಾರ್ಮಿಕರ ಗಾಯದ ಮೇಲೆ ಬರೆ ಎಳೆದಿದ್ದಾರೆ ಎಂದು ಅವರು ಆರೋಪಿಸಿದರು.

ದೇಶದಲ್ಲಿ ಲಕ್ಷಾಂತರ ಇಪಿಎಫ್ ಪಿಂಚಣಿದಾರರು ಇಂದಿಗೂ ಕೇವಲ ಒಂದು ಸಾವಿರಕ್ಕೂ ಕಡಿಮೆ ಪಿಂಚಣಿ ಪಡೆಯುತ್ತಿದ್ದಾರೆ. ಇಲ್ಲಿಯ ತನಕ ಒಂದು ರೂ.ಯನ್ನು ಹೆಚ್ಚಿಗೆ ಮಾಡಿಲ್ಲ ಎಂದ ಅವರು, ಸರಕಾರಕ್ಕೆ ಯಾವುದೇ ವಂತಿಗೆಯನ್ನು ಸಲ್ಲಿಸದ ಮಾಜಿ ಶಾಸಕರು, ಸಂಸದರು ಲಕ್ಷಗಟ್ಟಲೇ ಪಿಂಚಣಿ ಪಡೆಯುತ್ತಾರೆ. ಅದಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸುವುದಿಲ್ಲ. ಅದೇ ರೀತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರು ನಿವೃತ್ತಿಯಾದ ನಂತರ ಸರಕಾರಕ್ಕೆ ಯಾವುದೇ ವಂತಿಗೆಯನ್ನು ಸಲ್ಲಿಸದೆ ತಮ್ಮ ಕೊನೆಯ ಸಂಬಳದ ಅರ್ಧದಷ್ಟು ಪಿಂಚಣಿಯನ್ನು ಡಿಎ ಸಮೇತ ಪಡೆಯುತ್ತಿದ್ದಾರೆ. ಆದರೆ, ಇದೇ ರೀತಿಯಲ್ಲಿ ಸರಕಾರಕ್ಕೆ ಸೇವೆ ಸಲ್ಲಿಸುವ ಕಾರ್ಮಿಕರಿಗೆ ಪಿಂಚಣಿ ನೀಡಲು ಸರಕಾರಗಳು ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಮಿಕ ಸಚಿವರ ಪ್ರಕಾರ ಮೂರು ಸಾವಿರ ಪಿಂಚಣಿ ಕೊಡಲು ವಾರ್ಷಿಕ 16,540 ಕೋಟಿ ರೂ.ಗಳಷ್ಟು ಹಣದ ಅಗತ್ಯವಿದೆ ಎಂದು ಹೇಳಿಕೆ ನೀಡಿರುವುದು ಶುದ್ಧ ಸುದ್ದು. ಉತ್ಪಾದನಾ ಕ್ಷೇತ್ರದಲ್ಲಿ ದುಡಿದ ನಿವೃತ್ತಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ದೇಶದಲ್ಲಿ ಸುಮಾರು 15 ಕೋಟಿ ಭವಿಷ್ಯನಿಧಿ ವಂತಿಗೆದಾರರಿದ್ದು, ವಾರ್ಷಿಕ 2.25 ಸಾವಿರ ಕೋಟಿ ರೂ.ಹಣ ವಂತಿಗೆ ರೂಪದಲ್ಲಿ ಭವಿಷ್ಯನಿಧಿಗೆ ಸೇರುತ್ತಿದೆ. ಆದರೂ, ನಿವೃತ್ತಿ ಕಾರ್ಮಿಕರಿಗೆ ಪಿಂಚಣಿ ಹೆಚ್ಚಳ ಮಾಡದೇ ಅನ್ಯಾಯ ಮಾಡಲಾಗುತ್ತಿದೆ ಎಂದು ಅವರು ದೂರಿದರು.

ಕೇಂದ್ರ ಸರಕಾರ ಸಾಮಾಜಿಕ ಭದ್ರತೆ, ಕನಿಷ್ಠ ಮಾಸಿಕ ಪಿಂಚಣಿ ಐದು ಸಾವಿರ ರೂ.ಗಳು ನಿಗದಿಪಡಿಸಬೇಕು ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರ ನಿವೃತ್ತ ಸರಕಾರಿ ನೌಕರರಿಗೆ ಡಿಎ ಜತೆಗೆ ನೀಡುವ ಪಿಂಚಣಿಯನ್ನು ನಮಗೂ ಸೇರಿಸಿಕೊಡಬೇಕು. ಸಂಕಷ್ಟದಲ್ಲಿರುವ ಇಪಿಎಫ್ ಪಿಂಚಣಿದಾರರ ಭವಿಷ್ಯಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಮಾವೇಶದಲ್ಲಿ ಸಂಘದ ಗೌರವಾಧ್ಯಕ್ಷ ಅಶ್ವತ್ಥ ನಾರಾಯಣ, ಪ್ರಧಾನ ಕಾರ್ಯದರ್ಶಿ ಕೆ.ಪಿ.ಮಂದಾಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News