‘ತೋಂಟದಾರ್ಯ ಶ್ರೀ’ ಕೋಮುಸೌಹಾರ್ದತೆಯ ಹರಿಕಾರ: ಕುಮಾರಸ್ವಾಮಿ

Update: 2018-10-21 13:54 GMT

ಗದಗ, ಅ.21: ತ್ರಿವಿಧ ದಾಸೋಹಿ, ಕೋಮು ಸೌಹಾರ್ದತೆಯ ಬೆಳವಣಿಗೆಯ ಹರಿಕಾರರಾಗಿದ್ದ ಗದುಗಿನ ತೋಂಟದಾರ್ಯ ಮಠದ ಡಾ.ಸಿದ್ದಲಿಂಗ ಸ್ವಾಮೀಜಿ ಅಗಲಿಕೆ ವೈಯಕ್ತಿಕವಾಗಿ, ದೊಡ್ಡಮಟ್ಟದಲ್ಲಿ ತಮಗೆ ಮತ್ತು ಇಡೀ ನಾಡಿಗೆ ಆಘಾತವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ರವಿವಾರ ಡಂಬಳ-ಗದಗ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ 19ನೇ ಪೀಠಾಧಿಪತಿಯಾಗಿದ್ದ ಡಾ.ತೋಂಟದ ಸಿದ್ದಲಿಂಗ ಸ್ವಾಮಿಗಳ ಪಾರ್ಥಿವ ಶರೀರಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೊಂದಿಗೆ ಪುಷ್ಪ ಗೌರವ ಅರ್ಪಿಸಿ, ಮಠದ 20ನೇ ಪೀಠಾಧಿಪತಿಯಾಗಿ ನೇಮಕಗೊಂಡ ನಾಗನೂರು ರುದ್ರಾಕ್ಷಿಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿಯನ್ನು ಗೌರವಿಸಿ, ಆಶೀರ್ವಾದ ಪಡೆದು ಅವರು ಮಾತನಾಡಿದರು.

ಯಾರೇ ಇರಲಿ ಅವರಿಗೆ ತಿಳುವಳಿಕೆ, ಮಾರ್ಗದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದ ತೋಂಟದಾರ್ಯ ಶ್ರೀಗಳ ಜೀವನ ಎಲ್ಲರಿಗೂ ಮಾದರಿಯಾದದ್ದು. ನಾಗನೂರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಠದ ಕ್ಷೇತ್ರದಿಂದಲೇ ತಾವು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆರಂಭಿಸಿದ ಸಂದರ್ಭದಲ್ಲಿ ಸಿದ್ದಲಿಂಗ ಸ್ವಾಮೀಜಿ ಈ ಕಾರ್ಯ ಜನತೆಯ ಹತ್ತಿರಕ್ಕೆ ಹೋಗಿ ಬಡಜನರ ನೋವಿಗೆ ಧ್ವನಿಯಾಗುವ, ಪರಿಹಾರ ನೀಡುವ ಉತ್ತಮ ಪ್ರಯತ್ನವಾಗಿದೆ ಎಂದು ನನ್ನನ್ನು ಹುರಿದುಂಬಿಸಿದ್ದರು ಎಂದು ಮುಖ್ಯಮಂತ್ರಿ ಹೇಳಿದರು.

ಕನ್ನಡ ನಾಡಿನ ಬೆಳವಣಿಗೆಯಲ್ಲಿ ಹಾಗೂ ಶಿಕ್ಷಣ, ಸಾಮಾಜಿಕ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಸಿದ್ದಲಿಂಗ ಸ್ವಾಮೀಜಿ ನೀಡಿರುವ ಕೊಡುಗೆಗಳು ಬಹುಕಾಲ ನೆನಪಿಡುವಂತಹ ಕಾರ್ಯಗಳಾಗಿವೆ ಎಂದು ಮುಖ್ಯಮಂತ್ರಿ ತಿಳಿಸಿದರು.

ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿ ನೆನಪಿನಲ್ಲಿ ಕೋಮು ಸೌಹಾರ್ದತೆ ಪ್ರಶಸ್ತಿ ನೀಡುವ ಚಿಂತನೆಯಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News