ಧರ್ಮದ ಹೆಸರಿನಲ್ಲಿ ದ್ವೇಷ ಹರಡಿಸುವವರ ಬಗ್ಗೆ ಎಚ್ಚರ: ಪರಮೇಶ್ವರ್

Update: 2018-10-21 14:56 GMT

ಬೆಂಗಳೂರು, ಅ.21: ಧರ್ಮದ ಹೆಸರಿನಲ್ಲಿ ದ್ವೇಷ ಹರಡಿಸುವವರ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು. ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆಯನ್ನು ಬೆಳೆಸಲು ಎಲ್ಲರೂ ಮುಂದಾಗಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕರೆ ನೀಡಿದರು.

ರವಿವಾರ ನಗರದ ಜಾನ್ಸನ್ ಮಾರ್ಕೆಟ್ ಬಳಿಯಿರುವ ಶಿಯಾ ಖಬರಸ್ಥಾನ್ ಆವರಣದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಶಿಕ್ಷಣ ತಜ್ಞ ಆಗಾ ಸುಲ್ತಾನ್ ಆಯೋಜಿಸಿದ್ದ ‘ಇಮಾಮ್ ಹುಸೇನ್ ದಿನಾಚರಣೆ’(ದ್ವೇಷದ ವಿರುದ್ಧ ಧ್ವನಿ)ಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸತ್ಯ ಹಾಗೂ ಹಕ್ಕಿಗಾಗಿ 1400 ವರ್ಷಗಳ ಹಿಂದೆ ಇಮಾಮ್ ಹುಸೇನ್ ಕರ್ಬಲಾದಲ್ಲಿ ತಮ್ಮ ಜೀವ ಬಲಿದಾನ ಮಾಡಿದರು. ಇವತ್ತು ಇಮಾಮ್ ಹುಸೇನ್ ಅವರ ಮಾರ್ಗದರ್ಶನದಲ್ಲಿ ಮುಂದುವರೆದು ಸತ್ಯ ಹಾಗೂ ಹಕ್ಕಿಗಾಗಿ ಪ್ರತಿಯೊಬ್ಬರೂ ಎದ್ದು ನಿಲ್ಲಬೇಕಿದೆ ಎಂದು ಅವರು ಹೇಳಿದರು.

ಜಗತ್ತು ಎಷ್ಟು ವೇಗದಿಂದ ಮುಂದುವರೆಯುತ್ತಿದ್ದೆಯೋ, ಅಷ್ಟೇ ವೇಗದಲ್ಲಿ ದ್ವೇಷವು ಬೆಳೆಯುತ್ತಿದೆ. ಗೌತಮ ಬುದ್ಧ, ಏಸು ಕ್ರಿಸ್ತ, ಮಹಾತ್ಮಗಾಂಧಿ ಸೇರಿದಂತೆ ಎಲ್ಲ ಮಹನೀಯರು ಸಮಾಜಕ್ಕೆ ಶಾಂತಿ, ಸಹೋದರತೆ, ಅಹಿಂಸೆಯ ಸಂದೇಶವನ್ನು ನೀಡಿದ್ದಾರೆ. ಆದರೆ, ನಾವು ಇವತ್ತು ಅದನ್ನು ಮರೆತಿರುವುದು ದುರದೃಷ್ಟಕರ ಎಂದು ಪರಮೇಶ್ವರ್ ತಿಳಿಸಿದರು.

ನಮ್ಮ ದೇಶದ ಸಂವಿಧಾನವು ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಆದರೂ, ಜಾತಿ, ಧರ್ಮದ ಹೆಸರಿನಲ್ಲಿ ದ್ವೇಷ ಹರಡಿಸಲಾಗುತ್ತಿದೆ. ಗುಂಪು ಹಲ್ಲೆಗಳ ಪ್ರಕರಣಗಳೆ ಇದಕ್ಕೆ ಸಾಕ್ಷಿಯಾಗಿವೆ. ನಾವು ನಮ್ಮ ಧರ್ಮವನ್ನು ಪಾಲನೆ ಮಾಡುವುದರ ಜೊತೆಗೆ ಇತರ ಧರ್ಮಗಳಿಗೆ ಗೌರವ ನೀಡುವುದನ್ನು ರೂಢಿಸಿಕೊಳ್ಳಬೇಕಿದೆ. ಆಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಅವರು ಹೇಳಿದರು.

ಕಲ್ಕಿ ಧಾಮದ ಸಂಸ್ಥಾಪಕ ಆಚಾರ್ಯ ಪ್ರಮೋದ್ ಕೃಷ್ಣನ್ ಮಾತನಾಡಿ, ಇಮಾಮ್ ಹುಸೇನ್ ಯಾವುದೋ ಒಂದು ಧರ್ಮ, ಪಂಗಡ ಹಾಗೂ ದೇಶಕ್ಕೆ ಸೀಮಿತವಾದವರಲ್ಲ. ಒಂದು ವೇಳೆ ಅವರನ್ನು ಒಂದು ಗಡಿಗೆ ಸೀಮಿತಗೊಳಿಸಿದ್ದರೆ ಅವರು ಕರ್ಬಲಾಗೆ ಮಾತ್ರ ಸೀಮಿತಗೊಳ್ಳುತ್ತಿದ್ದರು. ಆದರೆ, ಇಂದು ಇಡೀ ಜಗತ್ತಿನ ಮೂಲೆ ಮೂಲೆಯಲ್ಲಿ ಹುಸೇನ್ ಅವರನ್ನು ಸ್ಮರಿಸಲಾಗುತ್ತಿದೆ ಎಂದರು.

ಇಸ್ಲಾಮ್ ಧರ್ಮ ಪ್ರೀತಿ, ಭಕ್ತಿ, ಶಾಂತಿಯ ಧರ್ಮ. ಅಮಾಯಕರ ರಕ್ತವನ್ನು ಹರಿಸುವ ಧರ್ಮ ಇಸ್ಲಾಮ್ ಅಲ್ಲ. ಹಿಂಸೆಯನ್ನು ಪ್ರತಿಪಾದಿಸುವವರು ಇಸ್ಲಾಮ್ ಧರ್ಮದ ಅನುಯಾಯಿಗಳಾಗಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದರು.

ದೇಶದ ಅಖಂಡತೆ ಹಾಗೂ ಸಾರ್ವಭೌಮತ್ವವನ್ನು ರಕ್ಷಿಸಲು ನಾವು ನಮ್ಮಲ್ಲಿರುವ ಅಪನಂಬಿಕೆಗಳನ್ನು ದೂರ ಮಾಡಿ, ಪರಸ್ಪರ ಎಲ್ಲ ಧರ್ಮೀಯರು ಗೌರವ ನೀಡುವ ಕೆಲಸವನ್ನು ಮಾಡಬೇಕಾದ ಅಗತ್ಯವಿದೆ ಎಂದು ಆಚಾರ್ಯ ಪ್ರಮೋದ್ ಕೃಷ್ಣನ್ ಪ್ರತಿಪಾದಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮೌಲಾನ ಡಾ.ಕಲ್ಬೆ ರುಶೀದ್ ರಿಝ್ವಿ ವಹಿಸಿದ್ದರು. ಕಾರ್ಯಕ್ರಮದ ಸಂಚಾಲಕ ಆಗಾ ಸುಲ್ತಾನ್ ಸ್ವಾಗತಿಸಿದರು. ಬೆಂಗಳೂರಿನ ಆರ್ಚ್ ಬಿಷಪ್ ರೆವರೆಂಡ್ ಪೀಟರ್ ಮಚಾಡೋ, ಹುಸೇನಿ ಬ್ರಾಹ್ಮಿಣ್ ಸಮುದಾಯದ ಸುನಿತಾ ಜಿಂಗಾರಾಮ್ ಶರ್ಮಾ, ಮಾಜಿ ಸಚಿವ ರೋಷನ್‌ಬೇಗ್, ಶಾಸಕ ಎನ್.ಎ.ಹಾರೀಸ್, ಇಸ್ರೋ ವಿಜ್ಞಾನಿ ಮಹೇಂದರ್ ಪಾಲ್ ಸಿಂಗ್, ನಟ ಜಾವೀದ್ ಜಾಫ್ರಿ, ಚಾನೆಲ್ ವಿನ್‌ನ ನಿರ್ದೇಶಕ ಇಮ್ರಾನ್ ರಸೂಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News