ಆಯೋಗಕ್ಕೆ ವಿದ್ಯಾರ್ಥಿನಿ ದೂರು ಹಿನ್ನೆಲೆ: ಹೈಕೋರ್ಟ್ ಮೆಟ್ಟಿಲೇರಿದ ನ್ಯೂ ಬ್ಲಾಸಮ್ಸ್ ಶಾಲೆ

Update: 2018-10-21 16:07 GMT

ಬೆಂಗಳೂರು, ಅ.21: ವಿದ್ಯಾರ್ಥಿನಿಯೊಬ್ಬಳು ನೀಡಿದ್ದಾಳೆನ್ನಲಾದ ದೂರು ಆಧರಿಸಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನೀಡಿರುವ ಸಮನ್ಸ್ ಪ್ರಶ್ನಿಸಿ ಬಾಗಲಗುಂಟೆಯ ನ್ಯೂ ಬ್ಲಾಸಮ್ಸ್ ಎಜುಕೇಷನ್ ಸೊಸೈಟಿ ಹೈಕೋರ್ಟ್ ಮೆಟ್ಟಿಲೇರಿದೆ.

ಸಮನ್ಸ್ ಜಾರಿ ನಂತರದ ಯಾವುದೇ ಕ್ರಮಗಳನ್ನು ಜರುಗಿಸದಂತೆ ನಿರ್ದೇಶನ ನೀಡಬೇಕೆಂದು ಸಲ್ಲಿಸಿದ್ದ ಅರ್ಜಿ ಕುರಿತು ವಿಚಾರಣೆ ನಡೆಸಿ ನ್ಯಾ.ಎಸ್.ಸುಜಾತ ಅವರಿದ್ದ ಏಕಸದಸ್ಯಪೀಠ ವಿಚಾರಣೆಯನ್ನು ಮುಂದೂಡಿ, ಇದೇ ರೀತಿಯ ಅರ್ಜಿಗಳ ಜೊತೆ ಅದನ್ನೂ ಸೇರಿಸಿ ವಿಚಾರಣೆ ನಡೆಸಲಾಗುವುದು ಎಂದು ಹೇಳಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಜಿ.ಆರ್.ಮೋಹನ್ ಅವರು, ವಿದ್ಯಾರ್ಥಿನಿಯೊಬ್ಬರು ನೀಡಿದ್ದಾಳೆನ್ನಲಾದ ಸುಳ್ಳು ದೂರು ಆಧರಿಸಿ ಆಯೋಗ, ಶಾಲೆಯ ಪ್ರಾಂಶುಪಾಲರ ವಿವರಣೆಯನ್ನೂ ಆಲಿಸದೆ ಏಕಾಏಕಿ ಸಮನ್ಸ್ ಜಾರಿಗೊಳಿಸಿದೆ. ಶಾಲಾ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಎಲ್ಲ ಕ್ರಮ ಕೈಗೊಂಡಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಕಠಿಣ ಶಿಕ್ಷೆ ನೀಡಲಾಗುತ್ತಿದೆ ಎಂಬ ಬಗ್ಗೆ ವೃಷಭಶ್ರೀ ಎಂಬ ವಿದ್ಯಾರ್ಥಿನಿಯಿಂದ ದೂರು ಬಂದಿರುವುದಾಗಿ ಆಯೋಗ ಹೇಳಿದೆ. ಆದರೆ, ಆ ಬಗ್ಗೆ ಪ್ರಾಂಶುಪಾಲರು ವಿವರಣೆ ನೀಡಲು ಮುಂದಾದರೂ ಆಯೋಗ ಅದನ್ನು ಆಲಿಸಿಲ್ಲ. ಬದಲಿಗೆ ಏಕಾಏಕಿ ಶಾಲೆಗೆ ಭೇಟಿ ನೀಡಿ ಅಧಿಕಾರಿಗಳಿಗೆ ಕಿರುಕುಳ ನೀಡಿದ್ದಾರೆ. ಹೀಗಾಗಿ, ಆಯೋಗದ ಸಮನ್ಸ್‌ಗೆ ತಡೆ ನೀಡಬೇಕೆಂದು ಅವರು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News