"ಹೋರಾಟಗಾರರು ಕಲ್ಲು ಹೊಡೆದಿದ್ದರಿಂದಲೇ ಕನ್ನಡ ಉಳಿದಿದೆ"

Update: 2018-10-21 16:33 GMT

ಬೆಂಗಳೂರು, ಅ. 21: ನಾಡು-ನುಡಿಯನ್ನು ಉಳಿಸಲು ಹೋರಾಟಗಾರರು ಕಲ್ಲು ಹೊಡೆದಿದ್ದರಿಂದಲೇ ಇಂದು ಕಲೆ, ಸಾಹಿತ್ಯ, ಸಂಸ್ಕೃತಿ, ಭಾಷೆ ಉಳಿದಿದೆ ಎಂದು ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಕಸಾಪದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ, ವಿವಿಧ ದತ್ತಿ ಪ್ರಶಸ್ತಿ ಪ್ರದಾನ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಯಿ ಭುವನೇಶ್ವರಿ ಮಕ್ಕಳ ಹೋರಾಟದ ಫಲವಾಗಿ ಎರಡು ಸಾವಿರ ವರ್ಷ ಇತಿಹಾಸವುಳ್ಳ ಕನ್ನಡ ಭಾಷೆ ಉಳಿದಿದೆ. ನಾಡಿನ ಏಳಿಗೆಗಾಗಿ ವಾಟಾಳ್ ನಾಗರಾಜ್‌ರಂತಹ ಅನೇಕ ಕನ್ನಡ ಪರ ಚಳುವಳಿಗಾರರ ಹೋರಾಟದ ಶ್ರಮದಿಂದ ನಗರದಲ್ಲಿ ಇನ್ನೂ ಕನ್ನಡದ ಗಾನವನ್ನು ಕೇಳುತ್ತಿದ್ದೇವೆ ಎಂದರು.

ನಗರದಾದ್ಯಂತ ಪರಭಾಷಿಗರು ಹೆಚ್ಚಿದ್ದು, ನಮ್ಮತನದ ಉಳಿವಿಗಾಗಿ ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ. ಭಾಷೆಯ ಹೆಸರು ಹೇಳಿಕೊಂಡು ತಳಕು-ಬಳಕು ನಡೆ-ನುಡಿಯುವವರು ಹೆಚ್ಚು ಕಾಲ ಉಳಿಯುವುದಿಲ್ಲ, ಸಾರ್ವಜನಿಕ ಜೀವನದಲ್ಲಿ ಸಮಾಜಮುಖಿಯಾಗಿ ಬದುಕುವವರು ಮಾತ್ರ ಸ್ಥಿರವಾಗಿ ಉಳಿಯುತ್ತಾರೆ. ಹತ್ತು ಲಕ್ಷ ಪುಸ್ತಕಗಳನ್ನು ಗಡಿನಾಡಿ ಶಾಲಾ ಮಕ್ಕಳಿಗೆ ಹಂಚಿದ್ದೇವೆ. ಅಲ್ಲಿ ತೆಲಗು ಮಾತೃ ಭಾಷೆಯ ಮಕ್ಕಳೂ ಕನ್ನಡ ಕಲಿಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಮೊಬೈಲ್‌ಗಳು ಸಮಾಜದ ಸ್ವಾಸ್ಥ ಕುಟುಂಬಗಳನ್ನು ಹಾಳುಗೆಡವುತ್ತಿವೆ ಹಾಗೂ ಸಂಬಂಧಗಳ ಅರಿವಿಕೆಯನ್ನು ಮಿತಗೊಳಿಸುತ್ತಿದೆ. ಹೀಗಾಗಿ ಮಕ್ಕಳು ಮೊಬೈಲ್ ಬಳಕೆಯನ್ನು ಮಿತಗೊಳಿಸಿ, ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನವನ್ನು ಅರಿಸಬೇಕು ಎಂದು ಸಲಹೆ ಮಾಡಿದರು.

ಪತ್ರಿಕೆಯಲ್ಲಿ ಬಂದಿರುವ ಆರೋಪವಲ್ಲ ಸುಳ್ಳು, ನಾನು ಪಾಲಿಕೆಗೆ ಒಂದು ಪೈಸೆಯನ್ನೂ ಲಪಟಾಯಿಸಿಲ್ಲ ಹಾಗೂ ಭುವನೇಶ್ವರಿ ತಾಯಿಯ ಸೇವೆಯನ್ನು ಪ್ರಮಾಣಿಕವಾಗಿ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಜಿ.ನಾಗರಾಜ, ಎಂ.ಲಿಂಗರಾಜು, ಎಂ.ಎಸ್.ಶ್ರೀಲಕ್ಷ್ಮಿ, ಕೃಷ್ಣಬಾಯಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News