ಪೂರ್ವ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ನ್ಯಾಯಾಲಯ ಪ್ರಾರಂಭಿಸಿ: ಬೆಂಗಳೂರು ನಗರ ಡಿಸಿ ವಿಜಯಶಂಕರ್

Update: 2018-10-21 16:56 GMT

ಬೆಂಗಳೂರು, ಅ.21: ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ನ್ಯಾಯಾಲಯ ಪ್ರಾರಂಭಿಸಲು ಇರುವ ಅಡೆತಡೆಗಳನ್ನು ಸರಿಪಡಿಸುವಂತೆ ತಹಶೀಲ್ದಾರ್ ರಾಮಲಕ್ಷ್ಮಯ್ಯ ಅವರಿಗೆ ಜಿಲ್ಲಾಧಿಕಾರಿ ಎಂ.ಬಿ.ವಿಜಯಶಂಕರ್ ಸೂಚಿಸಿದ್ದಾರೆ. 

ಬೆಂಗಳೂರು ಪೂರ್ವ ತಾಲೂಕು ಬಿದರಹಳ್ಳಿ ಹೋಬಳಿ ಮತ್ತು ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ ಅವರು ಇಲ್ಲಿ ನ್ಯಾಯಾಲಯ ಆರಂಭಿಸಲು ಉದ್ದೇಶಿಸಿದ್ದು ಇನ್ನೂ ಸಂಪೂರ್ಣವಾಗಿ ಕೊಠಡಿಗಳನ್ನು ನೀಡದ್ದಕ್ಕೆ ಬೇಸರ ವ್ಯಕ್ತಪಡಿಸಿ, ಕೂಡಲೆ ನ್ಯಾಯಾಲಯಕ್ಕೆ ಅಗತ್ಯವಿರುವ ಸ್ಥಳಾವಕಾಶ ಕಲ್ಪಿಸುವಂತೆ ಆದೇಶಿಸಿದರು.

ತಹಶೀಲ್ದಾರ್ ಕಚೇರಿಯಲ್ಲಿ 10 ವರ್ಷದಿಂದ ವಿಲೇವಾರಿಯಾಗದ ಕಡತಗಳ ಬಗ್ಗೆ ಪರಿಶೀಲಿಸಲು ಉಪ ಸಮಿತಿ ರಚನೆ ಮಾಡಲಾಗುವುದು. ಬಿದರಹಳ್ಳಿ ಗ್ರಾಮದ ಸರ್ವೆ ನಂಬರ್ 106ರ ಸರಕಾರಿ ಜಾಗದಲ್ಲಿ ಕಳೆದ 35 ವರ್ಷಗಳಿಂದ ಖಾಸಗಿ ಶಾಲೆ ನಡೆಸುತ್ತಿದ್ದು, ಇದನ್ನು ಕೂಡಲೆ ತೆರವುಗೊಳಿಸಿ ಬಿದರಹಳ್ಳಿ ನಾಡ ಕಚೇರಿ ಆರಂಭಿಸುವಂತೆ ಸೂಚಿಸಲಾಗಿದೆ ಎಂದರು.

ಕೊಳಚೆ ನಿರ್ಮೂಲನೆ ಮಂಡಳಿ ಮತ್ತು ರಾಜೀವ್‌ಗಾಂಧಿ ಆಶ್ರಯ ಯೋಜನೆಗೆ ಮಂಜೂರು ಮಾಡಿರುವ ಭೂಮಿಯನ್ನು ಕೂಡಲೆ ಹಸ್ತಾಂತರಿಸಲು ತಿಳಿಸಿದರು. ಇದೇ ವೇಳೆ ಆವಲಹಳ್ಳಿ ಸರಕಾರಿ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಅಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಹಾಜರಾತಿ ಇಲ್ಲದ್ದನ್ನು ಕಂಡು ಹಾಜರಾತಿ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಂಡು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಕ್ರಮ ಜರುಗಿಸುವಂತೆ ಸೂಚಿಸುವುದಾಗಿ ತಿಳಿಸಿದರು. ಇನ್ನು ವರ್ತೂರು ಭಾಗದಲ್ಲಿ ಅನೇಕ ಅನಧಿಕೃತ ಬಡಾವಣೆಗಳು ತಲೆ ಎತ್ತುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಂಡಿರುವುದಾಗಿ ಇದೆ ವೇಳೆ ಎಂ.ಬಿ.ವಿಜಯ್‌ಶಂಕರ್ ತಿಳಿಸಿದರು. ಈ ಸಂದರ್ಭದಲ್ಲಿ ಎಸಿ ನಾಗರಾಜ್, ತಹಶೀಲ್ದಾರ್ ರಾಮಲಕ್ಷ್ಮಯ್ಯ ಸೇರಿ ಮತ್ತಿತರರು ಹಾಜರಿದ್ದರು.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News