ಮಾದಕ ವಸ್ತು ಮಾರಾಟ: ರೌಡಿ ಸೇರಿ ಇಬ್ಬರು ಆರೋಪಿಗಳ ಬಂಧನ

Update: 2018-10-22 13:56 GMT

ಬೆಂಗಳೂರು, ಅ.22: ಸಾರ್ವಜನಿಕರಿಗೆ ಮಾದಕ ವಸ್ತುಗಳಾದ ಬ್ರೌನ್‌ಶುಗರ್ ಮತ್ತು ಅಫೀಮು ಮಾರಾಟ ಮಾಡುತ್ತಿದ್ದ ಆರೋಪದಡಿ ರೌಡಿ ಸೇರಿ ಇಬ್ಬರನ್ನು ಇಲ್ಲಿನ ಮಡಿವಾಳ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕೆ.ಜಿ.ಹಳ್ಳಿಯ ವಿನೋಭನಗರ ನಿವಾಸಿ ಮುದಸ್ಸಿರ್ (29) ಮತ್ತು ನೀಲಸಂದ್ರ ನಿವಾಸಿ ಬಾಲವಿಗ್ನೇಶ್ (27) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಕೋರಮಂಗಲದ ಒಂದನೇ ಬ್ಲಾಕ್‌ನಲ್ಲಿರುವ ಖಾಸಗಿ ಕಾಲೇಜು ಬಳಿ ಮಾದಕವಸ್ತುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದರ ಬಗ್ಗೆ ಮಾಹಿತಿ ಪಡೆದ ಮಡಿವಾಳ ಠಾಣೆಯ ಇನ್ಸ್‌ಪೆಕ್ಟರ್ ಭರತ್ ಮತ್ತು ತಂಡದವರು ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 14 ಗ್ರಾಂ ಬ್ರೌನ್‌ಶುಗರ್ ಮತ್ತು 8 ಗ್ರಾಂ ಅಫೀಮು, 2 ಸಾವಿರ ರೂ.ನಗದು, 2 ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಮಾದಕ ವಸ್ತುಗಳನ್ನು ಆರೋಪಿಗಳು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಐಟಿಬಿಟಿ ಕಂಪೆನಿಯ ಉದ್ಯೋಗಿಗಳಿಗೆ 1 ಗ್ರಾಂಗೆ 2,500 ರೂ.ಯಿಂದ 4 ಸಾವಿರ ರೂ.ವರೆಗೆ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿ ಮುದಸ್ಸಿರ್ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದು, ಆತನ ಮೇಲೆ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿರುವ ಆತ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ.

ಆಗ್ನೇಯ ವಿಭಾಗದ ಡಿಸಿಪಿ ಡಾ.ಬೋರಲಿಂಗಯ್ಯ ಅವರ ಮಾರ್ಗದರ್ಶನದಲ್ಲಿ ಮಡಿವಾಳ ಉಪ ವಿಭಾಗದ ಎಸಿಪಿ ಜಿ.ಯು.ಸೋಮೇಗೌಡ ಅವರ ನೇತೃತ್ವದಲ್ಲಿ ಮಡಿವಾಳ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಭರತ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News