ಕ್ರೀಡೆ ಎಂಬುದು ಸಂಘರ್ಷವಿದ್ದಂತೆ: ಬೆಂಗಳೂರು ಕೇಂದ್ರ ವಿವಿ ಕುಲಪತಿ ಪ್ರೊ.ಜಾಫೆಟ್
ಬೆಂಗಳೂರು, ಅ.22: ಕ್ರೀಡೆ ಎಂಬುದು ಸಂಘರ್ಷವಿದ್ದಂತೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ-ಯುವಜನರು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕಾದ ಅಗತ್ಯವಿದೆ ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಾಫೆಟ್ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಅಂತರ್ ಕಾಲೇಜ್ ಅಥ್ಲೆಟಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ 20 ರಿಂದ 40 ವಯೋಮಾನದ ಯುವಜನತೆ ಶೇ.60 ರಷ್ಟು ಜನರಿದ್ದಾರೆ. ಅವರಲ್ಲಿ ಶೇ.75 ರಷ್ಟು ಜನರಿಗೆ ಕ್ರೀಡಾ ವಲಯದಲ್ಲಿ ಆಸಕ್ತಿ ಮೂಡಿಸುವಂತಾಗಬೇಕಿದೆ ಎಂದರು.
ಶಿಕ್ಷಣ ಎಂದರೆ ಕೇವಲ ಪುಸ್ತಕಗಳಿಂದ ಪಡೆಯುವುದು ಅಷ್ಟೇ ಅಲ್ಲ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಂದಲೂ ಶಿಕ್ಷಣವನ್ನು ಕಲಿಯಬಹುದು. ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ಸಾಧಿಸುವ ಛಲವನ್ನು ಮತ್ತು ನಮ್ಮ ಜ್ಞಾನದ ಮಟ್ಟವನ್ನು ಹೆಚ್ಚಿಸುತ್ತದೆ. ಸಾಂಸ್ಕೃತಿಕ ಚಟುವಟಿಕೆಗಳು ಸಂಸ್ಕಾರವನ್ನು ಕಲಿಸುತ್ತದೆ. ಆದುದರಿಂದಾಗಿ, ಕ್ರೀಡೆಯಿಲ್ಲದ ಶಿಕ್ಷಣ ವ್ಯರ್ಥ ಎಂದು ಅವರು ನುಡಿದರು.
ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹೆಚ್ಚು ದೃಢವಾಗಿರುತ್ತೇವೆ ಎಂದ ಅವರು, ಕೇಂದ್ರ ವಿಶ್ವವಿದ್ಯಾಲಯವು ನಗರದ ಹೃದಯ ಭಾಗದಲ್ಲಿದೆ. ಹೀಗಾಗಿ, ಇದು ಹಲವಾರು ಕ್ರೀಡಾಪಟುಗಳಿಗೆ ಕೇಂದ್ರ ಸ್ಥಾನವಾಗಿ ಮಾರ್ಪಟ್ಟಿದೆ. ಇಲ್ಲಿಂದ ಹೋದ ಅನೇಕರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಅಂತರ್‌ರಾಷ್ಟ್ರೀಯ ಅಥ್ಲೀಟ್ ಪಟು ಪರಿಮಳಾ ಅಯ್ಯಪ್ಪ ಮಾತನಾಡಿ, ಜೀವನದಲ್ಲಿ ಗೆಲುವು ಎಂಬುದು ಒಂದೇ ಬಾರಿಗೆ ಸಿಗುವುದಿಲ್ಲ. ಅದಕ್ಕಾಗಿ ಸತತವಾದ ಪ್ರಯತ್ನ ಪಡಬೇಕು. ಹಲವಾರು ಸಂಕಷ್ಟಗಳನ್ನು, ನೋವು, ಅವಮಾನಗಳನ್ನು ಎದುರಿಸಬೇಕಿದೆ. ಇಂದು ಸಿಗದಿದ್ದರೆ ಮುಂದೊಂದು ದಿನ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ನಾನು ಒಲಿಂಪಿಕ್ಸ್‌ನಲ್ಲಿ ಸತತವಾಗಿ 12 ವರ್ಷಗಳ ಕಾಲ ಸ್ಪರ್ಧೆ ಮಾಡಿದ್ದೆ. ಹಲವಾರು ಅವಮಾನಗಳನ್ನು ಎದುರಿಸಿದ್ದರೂ, ಸಾಧಿಸುವ ಛಲವನ್ನು ಬಿಟ್ಟಿರಲಿಲ್ಲ. ನಾನು ಸೋತ ಪ್ರತಿಬಾರಿಯೂ ನಾನು ಸೋತಿದ್ದೀನಿ ಎಂಬ ನಿರಾಸೆ ಭಾವ ಮೂಡಿರಲಿಲ್ಲ. ಕೊನೆಗೊಂದು ದಿನ ಒಲಿಂಪಿಕ್ಸ್‌ನಲ್ಲಿ ಗೆದ್ದಾಗ ಅಲ್ಲಿ ನಮ್ಮ ದೇಶದ ರಾಷ್ಟ್ರ ಧ್ವಜವನ್ನು ಹಾರಿಸಿ, ರಾಷ್ಟ್ರಗೀತೆ ಹಾಡಿದಾಗ ಆದ ಸಂತೋಷ ನಾನೆಂದಿಗೂ ಮರೆಯುವುದಿಲ್ಲ ಎಂದು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಎಂ.ರಾಮಚಂದ್ರಗೌಡ, ರಿಜಿಸ್ಟ್ರಾರ್(ಶಿಕ್ಷಣ) ಡಾ.ಗಾಂಧಿ, ವಿವಿ ಮಾಜಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಆರ್.ಮುನಿರೆಡ್ಡಿ, ಮಾಜಿ ಅಂತರ್‌ರಾಷ್ಟ್ರೀಯ ಅಥ್ಲೀಟ್ ಪಟು ಮುಹಮ್ಮದ್ ಮುದಾಸೀರ್, ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಮುಹಮ್ಮದ್ ಇಲ್ಯಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.