×
Ad

ಅಧಿಕ ವಾಯುಮಾಲಿನ್ಯ: 15 ವರ್ಷಕ್ಕಿಂತ ಹಳೆಯ ವಾಹನಗಳ ನಿಯಂತ್ರಣಕ್ಕೆ ಚಿಂತನೆ

Update: 2018-10-22 19:58 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.22: ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ನಗರದಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ.

ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಮಾಲಿನ್ಯ ಪ್ರಮಾಣ ಹೆಚ್ಚುತ್ತಿದ್ದು, ದೇಶದ ರಾಜಧಾನಿ ದಿಲ್ಲಿಯ ನಂತರದ ಸ್ಥಾನದಲ್ಲಿ ಬೆಂಗಳೂರು ನಗರವಿದೆ. ಇದು ಜನರಲ್ಲಿ ಹೆಚ್ಚು ಆತಂಕ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಪರಿಸರ ಸಂರಕ್ಷಣೆಗೆ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿರುವ ಮಂಡಳಿ ಹಳೆಯ ವಾಹನಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.

ನಗರದಲ್ಲಿಯೇ ಸುಮಾರು 16 ಲಕ್ಷಕ್ಕೂ ಹೆಚ್ಚು ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರದ ವಾಹನಗಳಿವೆ. ಅದರಿಂದ ವಿಷಕಾರಿ ಅನಿಲ ಹೆಚ್ಚು ಹೊರಬರುತ್ತಿರುವುದರಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇದರಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಎಂಬ ವ್ಯತ್ಯಾಸವಿರುವುದಿಲ್ಲ. ಹೀಗಾಗಿ, ವಿಷಕಾರಿ ಅನಿಲ ಸೂಸುವ ಹದಿನೈದು ವರ್ಷಕ್ಕಿಂತ ಹಳೆಯ ವಾಹನಗಳ ಸಂಚಾರವನ್ನು ರದ್ದು ಮಾಡಬೇಕು. ಈ ಸಂಬಂಧ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮಂಡಳಿ ವರದಿ ಸಲ್ಲಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸರಕಾರಕ್ಕೆ ಕೆಎಸ್‌ಪಿಸಿಬಿ 2016 ರಲ್ಲೇ ವರದಿ ಸಲ್ಲಿಸಲಾಗಿತ್ತು. ಆದರೆ, ಅದನ್ನು ಜಾರಿ ಮಾಡುವಲ್ಲಿ ಹಿಂದಿನ ಸರಕಾರ ಮುಂದಾಗಿರಲಿಲ್ಲ. ಹೀಗಾಗಿ, ಇದೀಗ ಅಧಿಕಾರದಲ್ಲಿರುವ ಸರಕಾರವಾದರೂ ಅದನ್ನು ಜಾರಿ ಮಾಡುವಂತೆ ಕೆಎಸ್‌ಪಿಸಿಬಿ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರಬರೆಯಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಹೇಳಿದ್ದಾರೆ.

ನಗರದಲ್ಲಿ 70 ಲಕ್ಷ ವಾಹನಗಳಿದ್ದು, 32,000 ವಾಹನಗಳ ಹೊಗೆ ತಪಾಸಣೆಯನ್ನ ಮಾಲಿನ್ಯ ನಿಯಂತ್ರಣ ಮಂಡಳಿ ಮಾಡಿಸಿದೆ. ಇದರಲ್ಲಿ 14% ಪೆಟ್ರೋಲ್ ವಾಹನಗಳು ಹಾಗೂ 25% ಡೀಸೆಲ್ ವಾಹನಗಳಿಂದ ವಿಷಕಾರಿ ಅನಿಲ ಬರುತ್ತಿರುವುದು ಗಮನಿಸಲಾಗಿದೆ. ಇವುಗಳಿಂದ ಹೊರಸೂಸುವ ಗಾಳಿಯ ಮಟ್ಟ ರಾಷ್ಟ್ರೀಯ ಮಾನದಂಡಕ್ಕಿಂತ ಕಡಿಮೆ ಇರುವುದು ಗೊತ್ತಾಗಿದೆ.

ಪ್ರಮುಖ 48 ಅಂಶಗಳನ್ನು ಕಾರ್ಯೋನ್ಮುಖಗೊಳಿಸಲು ಚರ್ಚೆ ನಡೆಯುತ್ತಿದ್ದು, ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಹೆಚ್ಚಿಸಲು ಹಾಗೇ ಪಾರ್ಕಿಂಗ್ ಶುಲ್ಕ ಹೆಚ್ಚಿಸುವಂತೆಯೂ ಮಂಡಳಿ ವರದಿ ನೀಡಿದೆ. ಅಲ್ಲದೆ ನಗರದಲ್ಲಿ ಬೃಹತ್ ಗಾತ್ರದ ವಾಹನಗಳ ಸಂಚಾರಕ್ಕೆ ರಿಂಗ್ ರಸ್ತೆಗಳಲ್ಲಿ ಡೈವರ್ಟ್ ಮಾಡಬೇಕು. ಕಾನೂನು ಮೀರಿದವರಿಗೆ ದೊಡ್ಡ ಪ್ರಮಾಣದ ದಂಡ ವಿಧಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News