ನ.22 ರಿಂದ ಕಾಂಬೋಡಿಯಾದಲ್ಲಿ ವಿಶ್ವ ಕ್ಷತ್ರಿಯ ಮಹಾ ಸಮ್ಮೇಳನ
ಬೆಂಗಳೂರು, ಅ. 22: ಕರ್ನಾಟಕ ಕ್ಷತ್ರಿಯ ಸಂಘದ ವತಿಯಿಂದ ನ.22 ರಿಂದ 27ರವರೆಗೆ ಕಾಂಬೋಡಿಯಾದಲ್ಲಿ ವಿಶ್ವ ಕ್ಷತ್ರಿಯ ಮಹಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಲ್ಲಿ ವಿಶ್ವ ಕ್ಷತ್ರಿಯ ಮಹಾ ಸಮ್ಮೇಳನದ ರಾಜ್ಯ ಸಂಚಾಲಕ ಎಂ.ಡಿ. ಸೂರ್ಯ ಪ್ರಕಾಶ್ ಮಾತನಾಡಿ, ದೇಶದಲ್ಲಿ ಸುಮಾರು 15 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಕ್ಷತ್ರಿಯ ಸಮುದಾಯದ ಮಂದಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ ಎಂದು ತಿಳಿಸಿದರು.
ಆದರೆ ಈ ರಾಜ್ಯಗಳಲ್ಲಿಯೇ ನಮ್ಮ ಸಮುದಾಯದ ಮಂದಿಯನ್ನು ಕಡೆಗಣಿಸಲಾಗಿದೆ. ಹೀಗಾಗಿ ಕ್ಷತ್ರಿಯ ಸಮಯದಾಯವನ್ನು ಒಟ್ಟುಗೂಡಿಸಿ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸದೃಢಗೊಳ್ಳುವುದರ ಬಗ್ಗೆ ಚರ್ಚಿಸಲು ವಿಶ್ವ ಕ್ಷತ್ರಿಯ ಮಹಾ ಸಮ್ಮೇಳನ ಆಯೋಜಿಸಲಾಗಿದೆ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕ್ಷತ್ರಿಯ ಸಮಾಜದ ಸಮಗ್ರ ಅಭಿವೃದ್ಧಿಯ ಬಗ್ಗೆ, ಕೇಂದ್ರ ಸರಕಾರ ನೀಡುತ್ತಿರುವ ಸೌಲಭ್ಯಗಳು ಕ್ಷತ್ರಿಯ ಸಮಾಜಕ್ಕೆ ಸಮಪರ್ಕವಾಗಿ ಲಭಿಸದೆ ಇರುವುದರ ಬಗ್ಗೆ ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ಹಲವು ರಾಜಕೀಯ ಪಕ್ಷಗಳಿಂದ ಕಡೆಗಣಿಸಲ್ಪಟ್ಟ ಕ್ಷತ್ರಿಯ ಸಮಾಜವು ಮುಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಅದರಲ್ಲೂ ಕರ್ನಾಟಕಕ್ಕೆ ಸಂಬಂಧಿಸಿದಂತೆ ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎಂಬುದರ ಕುರಿತಾಗಿಯೂ ಚಿಂತನೆ ನಡೆಸಲಾಗುವುದು. ಕಾಂಬೋಡಿಯಾದ ಸಮ್ಮೇಳನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 98869 73284 ಸಂಪರ್ಕಿಸಬಹುದು ಎಂದು ತಿಳಿಸಿದರು.