ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ: ಸಿಬಿಐ ತನಿಖೆಗೆ ಆದೇಶಿಸಿದ ಹೈಕೋರ್ಟ್
ಬೆಂಗಳೂರು, ಅ.22: ಬೆಂಗಳೂರಿನ ವೈಟ್‌ಫೀಲ್ಡ್‌ನಿಂದ ನಾಪತ್ತೆಯಾಗಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಕುಮಾರ್ ಅಜಿತಾಬ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಹೈಕೋರ್ಟ್ ಆದೇಶಿಸಿದೆ.
2017ರ ನ.18ರಿಂದ ಕಣ್ಮರೆಯಾಗಿರುವ ಬಿಹಾರ ಮೂಲದ ಟೆಕ್ಕಿ ಕುಮಾರ್ ಅಜಿತಾಬ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ತಂದೆ ಅಶೋಕ್ ಕುಮಾರ್ ಸಿನ್ಹಾ ಸಲ್ಲಿಸಿದ್ದ ಅರ್ಜಿ ಸಂಬಂಧ ತೀರ್ಪು ನೀಡಿದ ನ್ಯಾ. ಅರವಿಂದ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸಿಬಿಐ ತನಿಖೆ ಹೆಚ್ಚು ಸೂಕ್ತ ಎಂದು ಅಭಿಪ್ರಾಯಪಟ್ಟು ಈ ಆದೇಶ ಹೊರಡಿಸಿದೆ.
ನಗರದ ಬೆಳ್ಳಂದೂರಿನ ಬ್ರಿಟಿಷ್ ಟೆಲಿಕಾಂ ಕಂಪೆನಿಯಲ್ಲಿ 5 ವರ್ಷಗಳಿಂದ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಅಜಿತಾಬ್ ತನ್ನ ಕಾರನ್ನು ಒಎಲ್‌ಎಕ್ಸ್ ನಲ್ಲಿ ಮಾರಾಟಕ್ಕೆ ಕೇಳಿದ್ದ ವ್ಯಕ್ತಿಗೆ ತೋರಿಸಲು ಮನೆಯಿಂದ ಹೊರ ಹೋಗಿದ್ದರು. ನಂತರ ನಾಪತ್ತೆಯಾಗಿದ್ದರು.
ಬಳಿಕ ಅಜಿತಾಬ್ ಕಾಣೆಯಾದ ಬಗ್ಗೆ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ನಂತರವೂ ಅಜಿತಾಬ್ ಸುಳಿವು ಸಿಗದಿದ್ದಾಗ ಕುಮಾರ್ ತಂದೆ ಅಶೋಕ್ ಕುಮಾರ್ ಸಿನ್ಹಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ ಕೂಡಲೇ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಸೂಚನೆ ನೀಡಿತ್ತು.
ಎಸ್‌ಐಟಿ ಅಧಿಕಾರಿಗಳು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿದರೂ, ಹೊರ ರಾಜ್ಯದ ತನಿಖಾ ಸಂಸ್ಥೆಗಳ ಸಹಕಾರ ಪೂರ್ಣ ಪ್ರಮಾಣದಲ್ಲಿ ಸಿಗದಿದ್ದರಿಂದ ಅಜಿತಾಬ್ ಪತ್ತೆ ಕಾರ್ಯದಲ್ಲಿ ಹಿನ್ನಡೆ ಉಂಟಾಗುತ್ತಿತ್ತು. ಇದೇ ಆಧಾರದಲ್ಲಿ ಪ್ರಕರಣದ ತನಿಖೆಯನ್ನು ಹೈಕೋರ್ಟ್ ಸಿಬಿಐಗೆ ವಹಿಸಿ ಆದೇಶಿಸಿದೆ.
ಟೆಕ್ಕಿ ಅಜಿತಾಬ್ ಪ್ರಕರಣ ತಾರ್ಕಿಕ ಅಂತ್ಯ ಬೇಕಾದರೆ ಸಿಬಿಐ ತನಿಖೆ ಉತ್ತಮ. ತನಿಖೆಯ ಹಾದಿಯಲ್ಲಿ ಅಂತರ್‌ರಾಷ್ಟ್ರೀಯ ಸಂಸ್ಥೆಗಳಿಂದ ಕೆಲ ವರದಿ ಪಡೆಯಬೇಕಾಗಿದೆ. ಎಸ್‌ಐಟಿ ತನಿಖೆ ಮಾಡಿರುವ ಎಲ್ಲ ದಾಖಲೆಗಳನ್ನು ನೀಡಿ. ಸಿಬಿಐ ರಾಷ್ಟ್ರೀಯ ತನಿಖಾ ಸಂಸ್ಥೆಯಾಗಿದ್ದು, ಅದಕ್ಕೆ ಈ ಸಂವಹನ ಮತ್ತು ಸಮನ್ವಯ ಕೊರತೆ ಸಿಬಿಐಗೆ ಬರಲ್ಲ. ಬೇರೆ ಬೇರೆ ರಾಜ್ಯಗಳ ನಡುವೆ ತನಿಖೆಗೆ ಸಹಾಯವಾಗುತ್ತೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ. ಈಗಾಗಲೇ ಕಾಲ್ ರೆಕಾರ್ಡ್, ಗೂಗಲ್ ಚೆಕಪ್, ಇಂಟರ್‌ಪೋಲ್ ಮೂಲಕ ಮಾಹಿತಿ ಕಲೆ ಹಾಕಿದ್ದಾರೆ ಸಿಐಡಿ ಟೀಂ. ಆದರೆ, ಇನ್ನೂ ಅಜಿತಾಬ್ ಎಲ್ಲಿದ್ದಾರೆ ಎನ್ನುವುದರ ಮಾಹಿತಿ ಲಭ್ಯವಾಗಿಲ್ಲ.