×
Ad

ಸಂಧಾನ ಸಭೆಯ ಮೂಲಕ ಬಗೆಹರಿಸಲು ಸಮಿತಿ ರಚನೆ: ವಾಣಿಜ್ಯ ಮಂಡಳಿಯ ಅಧ್ಯಕ್ಷ ಚಿನ್ನೇಗೌಡ

Update: 2018-10-22 22:02 IST

ಬೆಂಗಳೂರು, ಅ.22: ನಟಿ ಶ್ರುತಿ ಹರಿಹರನ್ ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಸಮಿತಿಯೊಂದನ್ನು ರಚನೆ ಮಾಡಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿಯೇ ಬಗೆಹರಿಸಿಕೊಳ್ಳಲಾಗುತ್ತದೆ ಎಂದು ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಹೇಳಿದ್ದಾರೆ.

ಮೀ ಟೂ ಚಳವಳಿಯಲ್ಲಿ ಬಹುಭಾಷಾ ನಟ ಅರ್ಜುನ್ ಸರ್ಜಾ ಮೇಲೆ ಆರೋಪ ಮಾಡಿರುವ ನಟಿ ಶೃತಿ ಹರಿಹರನ್ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅರ್ಜುನ್ ಸರ್ಜಾ ಅವರ ಮಾವ ಹಾಗೂ ಹಿರಿಯ ನಟ ರಾಜೇಶ್ ದೂರು ದಾಖಲಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಈ ವಿಚಾರದ ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆಸಲಾಗಿದೆ ಎಂದು ಅವರು ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುವ ಬದಲಿಗೆ ನೇರವಾಗಿ ನಮ್ಮಲ್ಲಿಗೆ ಬಂದಿದ್ದರೆ ಇಲ್ಲೇ ಎಲ್ಲವನ್ನೂ ಪರಿಹಾರ ಮಾಡಿಕೊಳ್ಳಬಹುದಿತ್ತು. ಆದರೆ, ಅವರಿಬ್ಬರೂ ಕಾನೂನಾತ್ಮಕ ಹೋರಾಟ ಮಾಡಲು ಮುಂದಾಗಿದ್ದಾರೆ. ಹೀಗಾಗಿ, ಈ ಸಂಬಂಧ ಸಮಿತಿಯೊಂದನ್ನು ರಚಿಸಲಿದ್ದೇವೆ. ಅದರ ರೂಪುರೇಷೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುತ್ತದೆ. ಅಲ್ಲದೆ, ಸಂದಾನ ಸಮಿತಿಯಲ್ಲಿ ಚಿತ್ರರಂಗದ ಎಲ್ಲ ವಿಭಾಗದ ಹಿರಿಯರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕ ಸಾ.ರಾ.ಗೋವಿಂದು ಮಾತನಾಡಿ, ಶ್ರುತಿ ಹರಿಹರನ್ ಏಕಾಏಕಿ ಮಾಧ್ಯಮದ ಎದುರು ಬಂದಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಈ ಹಿಂದೆ ರಶ್ಮಿ ಅವರ ವಿಚಾರವನ್ನು ಮಂಡಳಿಯಲ್ಲಿಯೇ ವಿಚಾರಣೆ ನಡೆಸಿ ಇತ್ಯರ್ಥಪಡಿಸಿದ್ದೆವು. ಶ್ರುತಿ ಮಂಡಳಿಗೆ ದೂರು ನೀಡಬಹುದಿತ್ತು ಎಂದು ಹೇಳಿದರು.

ಶ್ರುತಿ ಹಾಗೂ ಅರ್ಜುನ್ ಸರ್ಜಾ ನಡುವೆ ನಡೆದಿದೆ ಎನ್ನಲಾದ ಈ ಘಟನೆ ಹಲವಾರು ವರ್ಷಗಳ ಹಳೆಯದ್ದು. ಅದನ್ನು ಆವಾಗಲೇ ಹೇಳಬೇಕಿತ್ತು. ಅದನ್ನು ಈಗ ಹೇಳುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ. ನಾನು ಅರ್ಜುನ್ ಸರ್ಜಾರನ್ನು ಚಿಕ್ಕ ವಯಸ್ಸಿನಿಂದಲೇ ನೋಡಿಕೊಂಡು ಬಂದಿರುವೆ. ಅವರಂತಹ ಸಜ್ಜನಿಕೆ ವ್ಯಕ್ತಿಯ ಮೇಲೆ ಆರೋಪ ಮಾಡಿರುವುದು ಸರಿಯಲ್ಲ ಎಂದು ಅವರು ದೂರಿದರು.

ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಲೈಂಗಿಕ ಆರೋಪದ ದಾಖಲೆ ಕೊಡ್ತೀನಿ ಎನ್ನುತ್ತಿದ್ದಾರೆ. ಅದು ಸ್ವಾಗತಾರ್ಹ, ಅವರು ಮೊದಲು ದಾಖಲೆ ನೀಡಲಿ ಎಂದ ಅವರು, ಇನ್ನು ಸಂಜನಾ ಗಲ್ರಾನಿಯೂ 12 ವರ್ಷಗಳ ಹಿಂದಿನ ವಿಷಯವನ್ನು ಈಗ ಹೇಳುತ್ತಿದ್ದಾರೆ. ದಂಡುಪಾಳ್ಯ ಸಿನಿಮಾದಲ್ಲಿ ಅವರು ನಟಿಸಿದ ಅಭಿನಯ ಹೇಗಿತ್ತು ಎಂದು ಪ್ರಶ್ನಿಸಿದರು.

ಚೇತನ್ ಯಾರು?: ನಟ ಚೇತನ್‌ಗೆ ನನ್ನ ಬಗ್ಗೆ ಮಾತನಾಡಲು ಈ ಚೇತನ್ ಯಾರು, ಅವರಿಗೆ ಯಾವ ಹಕ್ಕಿದೆ. ನಾನು ಡಾ.ರಾಜ್‌ಕುಮಾರ್‌ರೊಂದಿಗೆ ಬೆಳೆದ ವ್ಯಕ್ತಿ. ಚೇತನ್ ಅರೆಬೆತ್ತಲೆ ಹುಡುಗಿಯೊಂದಿಗೆ ಕುಡಿದ ಆರೋಪ ಈಗಲೂ ಪೊಲೀಸ್ ಠಾಣೆಯಲ್ಲಿದೆ ಎಂದು ಹೇಳಿದರು.

ಕೆಲಸದ ಸ್ಥಳದಲ್ಲಿ ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾಗದಂತೆ ತಡೆಯಲು 2013 ರ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ(ತಡೆ, ನಿಷೇಧ ಮತ್ತು ಪರಿಹಾರ) ಕಾಯ್ದೆ ಸಂಸತ್ತು ರೂಪಿಸಿ, 2013 ಎಪ್ರಿಲ್‌ನಿಂದ ಜಾರಿ ಮಾಡಲಾಗಿದೆ. ಹೀಗಾಗಿ, ಇದನ್ನು ಸಿನಿಮಾ ಉದ್ಯಮದಲ್ಲಿಯೂ ಮಾಡಬೇಕು. ಅದನ್ನು ರಚಿಸುವ ಹೊಣೆ ನಿರ್ಮಾಣ ಸಂಸ್ಥೆಗಳ ಮುಖ್ಯಸ್ಥರು ಹೊರಬೇಕು.

-ಜಯ್ನ, ಸೆಂಟರ್ ಫಾರ್ ಲಾ ಅಂಡ್ ಪಾಲಿಸಿ ರಿಸರ್ಚ್‌ನ ಸಹ-ಸಂಸ್ಥಾಪಕಿ

ಕನ್ನಡ ಚಲನಚಿತ್ರ ರಂಗದಲ್ಲಿ ಲೈಂಗಿಕ ದೌರ್ಜನ್ಯಗಳ ವಿಚಾರಣೆ ಆಂತರಿಕ ದೂರು ಸಮಿತಿ ಇದ್ದು, ಇದುವರೆಗೂ ಯಾವುದೇ ದೂರು ಬಂದಿಲ್ಲ. ಮೀ ಟೂ ವಿವಾದ ಭುಗಿಲೇಳುವುದಕ್ಕೂ ಮೊದಲು ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿದ್ದೆ. ಸಾ.ರಾ.ಗೋವಿಂದು ಮತ್ತು ಚಿನ್ನೇಗೌಡ ಅವರೊಂದಿಗೆ ಚರ್ಚೆ ನಡೆಸಿದ್ದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News