ಎಸ್ಸಿ-ಎಸ್ಟಿ ಆಯೋಗದ ಹುದ್ದೆಗೆ ನಾಮನಿರ್ದೇಶನ ಮಾಡಿದ್ದ ಆದೇಶ ರದ್ದು: ತಕರಾರು ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು, ಅ.22: ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ನಂತರ ವಿವಿಧ ನಿಗಮ-ಮಂಡಳಿಗಳ ಹಾಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕ ರದ್ದುಗೊಳಿಸಿದ್ದ ಸರಕಾರದ ಕ್ರಮ ಪ್ರಶ್ನಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಆಯೋಗದ ಅಧ್ಯಕ್ಷ ಎ.ಮುನಿಯಪ್ಪ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಆರ್. ವೆಂಕಟೇಶ್ ಸಲ್ಲಿಸಿದ್ದ ತಕರಾರು ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.
ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ನಂತರ ವಿವಿಧ ನಿಗಮ-ಮಂಡಳಿಗಳ ಹಾಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕ ರದ್ದುಗೊಳಿಸಲು ರಾಜ್ಯ ಸರಕಾರ ಕೈಗೊಂಡಿರುವ ಕ್ರಮ ಪ್ರಶ್ನಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಆಯೋಗದ ಅಧ್ಯಕ್ಷ ಎ.ಮುನಿಯಪ್ಪ ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಸೇರಿ ನಾಲ್ವರು ಹೈಕೋರ್ಟ್‌ಗೆ ಪ್ರತ್ಯೇಕ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದಕುಮಾರ್ ಅವರಿದ್ದ ನ್ಯಾಯಪೀಠ, ನಿಗಮ-ಮಂಡಳಿಗಳ ಹಾಲಿ ಅಧ್ಯಕ್ಷ, ಉಪಾಧ್ಯಕ್ಷರ ನೇಮಕವನ್ನು ರದ್ದುಗೊಳಿಸುವ ಅಧಿಕಾರ ಸರಕಾರಕ್ಕೆ ಬಿಟ್ಟದ್ದು, ಸರಕಾರ ಇಚ್ಛಾನುಸಾರ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಿದೆ.
ಹಿಂದಿನ ಕಾಂಗ್ರೆಸ್ ಸರಕಾರವು ವಿವೇಚನಾ ಅಧಿಕಾರ ಬಳಸಿ ತಮ್ಮನ್ನು ಆಯೋಗದ ಅಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡಲಾಗಿತ್ತು. ಹೀಗಿದ್ದರೂ ಇದೀಗ ಏಕಾಏಕಿ ತಮ್ಮ ನಾಮನಿರ್ದೇಶನ ಆದೇಶ ರದ್ದುಪಡಿಸಿ ಸರಕಾರ ಆದೇಶಿಸಿದೆ ಎಂದು ದೂರಿದ್ದರು. ಜತೆಗೆ, ಆದೇಶ ಹೊರಡಿಸುವುದಕ್ಕೂ ಮುನ್ನ ತಮಗೆ ನೋಟಿಸ್ ನೀಡಲಿಲ್ಲ. ಇದು ಸಹಜ ನ್ಯಾಯದ ಉಲ್ಲಂಘನೆ. ಅಲ್ಲದೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಸರಕಾರ ಈ ಆದೇಶ ಮಾಡಿದೆ. ಹಾಗೆಯೇ, ಸಂಪುಟ ಸಚಿವ ರಚನೆಯಾಗುವ ಮುನ್ನವೇ ಸರಕಾರ ಆದೇಶ ಹೊರಡಿಸಿರುವುದು ಸಂವಿಧಾನದ ಉಲ್ಲಂಘನೆ. ಹೀಗಾಗಿ, ತಮ್ಮ ನಾಮ ನಿರ್ದೇಶನ ರದ್ದುಪಡಿಸಿದ ಸರಕಾರದ ಆದೇಶ ರದ್ದುಪಡಿಸಬೇಕು. ಆಯೋಗದ ಅಧ್ಯಕ್ಷ ಸ್ಥಾನದಲ್ಲಿ ತಮ್ಮನ್ನು ಮುಂದುವರಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದರು.