ಬ್ಯಾಂಕಿಗೆ ಮಿನಿಮಮ್ ಅಕೌಂಟ್ ಬ್ಯಾಲೆನ್ಸ್ ದಂಡ ತೆತ್ತು ಸುಸ್ತಾಗಿದ್ದೀರಾ?: ಹಾಗಿದ್ದರೆ ಈ ಖಾತೆಗೆ ಬದಲಾಗಿ

Update: 2018-10-23 13:09 GMT

ನಾವೆಲ್ಲ ಸಾಮಾನ್ಯವಾಗಿ ಒಂದಲ್ಲ ಒಂದು ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿರುತ್ತೇವೆ ಮತ್ತು ಖಾತೆಯಲ್ಲಿ ನಮ್ಮದೇ ದುಡ್ಡನ್ನು ಇಟ್ಟಿರುತ್ತೇವೆ. ಆದರೂ ಖಾತೆಯಲ್ಲಿ ಕನಿಷ್ಠ ಶಿಲ್ಕು (ಎಂಎಬಿ)ಕಾಯ್ದುಕೊಳ್ಳದಿದ್ದರೆ ಬ್ಯಾಂಕುಗಳು ನಮಗೆ ದಂಡ ವಿಧಿಸುತ್ತವೆ. ಹಿಂದೆ ಜನರು ತಮ್ಮ ಖಾತೆಗಳಿಗೆ ಹಣ ಜಮಾ ಮಾಡಲು ಮತ್ತು ಹಿಂತೆಗೆಯಲು ಬ್ಯಾಂಕುಗಳಿಗೆ ಖುದ್ದಾಗಿ ಹೋಗುತ್ತಿದ್ದರು. ಅದೇ ವೇಳೆ ತಮ್ಮ ಪಾಸ್‌ಬುಕ್‌ಗಳಲ್ಲಿ ಬರೆಸಿಕೊಂಡು ಬರುತ್ತಿದ್ದರು. ಖಾತೆಯಲ್ಲಿ ಏನಾದರೂ ವ್ಯತ್ಯಾಸವಾಗಿದ್ದರೆ ತಕ್ಷಣಕ್ಕೆ ಗೊತ್ತಾಗುತ್ತಿತ್ತು ಮತ್ತು ಬ್ಯಾಂಕಿನ ಸಿಬ್ಬಂದಿಗಳನ್ನು ವಿಚಾರಿಸಿ ಉತ್ತರ ಪಡೆಯಬಹುದಿತ್ತು. ಆದರೆ ಈಗೇನಿದ್ದರೂ ಎಟಿಎಂ ಜಮಾನಾ. ಹೀಗಾಗಿ ಅನಿವಾರ್ಯವಿದ್ದರೆ ಮಾತ್ರ ಜನರು ಬ್ಯಾಂಕಿಗೆ ಪ್ರಯಾಣ ಬೆಳೆಸುತ್ತಾರೆ. ಇಲ್ಲದಿದ್ದರೆ ಎಟಿಎಮ್‌ಗಳಲ್ಲಿಯೇ ಹಣ ತುಂಬುವ,ಹಣವನ್ನು ಹಿಂಪಡೆಯುವ ಕೆಲಸ ಮಾಡಿಕೊಳ್ಳುತ್ತಾರೆ. ಹೀಗಾಗಿ ಬ್ಯಾಂಕುಗಳು ಎಂಎಬಿ ಕಾಯ್ದುಕೊಳ್ಳದ್ದಕ್ಕೆ ದಂಡ ಹಾಕಿದ್ದರೂ ಹೆಚ್ಚಿನವರಿಗೆ ಗೊತ್ತೇ ಆಗುವುದಿಲ್ಲ. ಎಟಿಎಮ್‌ಗಳಲ್ಲಿ ಮಿನಿ ಸ್ಟೇಟ್‌ಮೆಂಟ್ ಪಡೆದುಕೊಳ್ಳಬಹುದಾದರೂ ಅವುಗಳಲ್ಲಿಯ ಸಂಕ್ಷಿಪ್ತ ಮಾಹಿತಿಗಳು ಹೆಚ್ಚಿನವರಿಗೆ ಅರ್ಥವೇ ಆಗುವುದಿಲ್ಲ. ವಿವಿಧ ಬ್ಯಾಂಕುಗಳ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಶಿಲ್ಕಿನ ಪ್ರಮಾಣ ಬೇರೆ ಬೇರೆಯಾಗಿದೆ. ನಮ್ಮ ಖಾತೆಗಳಿಂದ ದಂಡವನ್ನು ಕಡಿತಗೊಳಿಸುವಾಗ ಬ್ಯಾಂಕುಗಳು ನಮ್ಮನ್ನು ಕೇಳುವ ಗೋಜಿಗೂ ಹೋಗುವುದಿಲ್ಲ. ಎಂಎಬಿ ದಂಡವನ್ನು ತುಂಬಿ ಸುಸ್ತಾದವರಿಗೆಂದೇ ಆರ್‌ಬಿಐ ಸೌಲಭ್ಯವೊಂದನ್ನು ಕಲ್ಪಿಸಿದೆ. ಅದೇ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್(ಬಿಎಸ್‌ಬಿಡಿ) ಖಾತೆ. ಗ್ರಾಹಕರು ಎಂಎಬಿ ದಂಡದ ಕಿರಿಕಿರಿಯಿಂದ ಪಾರಾಗಲು ತಮ್ಮ ಈಗಿರುವ ಉಳಿತಾಯ ಖಾತೆಯನ್ನೇ ಬಿಎಸ್‌ಬಿಡಿ ಖಾತೆಯನ್ನಾಗಿ ಪರಿವರ್ತಿಸಿಕೊಳ್ಳಬಹುದು.

ಬಿಎಸ್‌ಬಿಡಿ ಶೂನ್ಯ ಶಿಲ್ಕು ಖಾತೆಯಾಗಿದ್ದು, ನೀವು ಕನಿಷ್ಠ ಶಿಲ್ಕನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯತೆಯಿಲ್ಲ. ಡೆಬಿಟ್ ಕಾರ್ಡ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್‌ನಂತಹ ಹಲವಾರು ಸೌಲಭ್ಯಗಳೂ ಇಂತಹ ಖಾತೆದಾರರಿಗೆ ದೊರೆಯುತ್ತವೆ. ಎಸ್‌ಬಿಐ,ಪಿಎನ್‌ಬಿ,ಎಚ್‌ಡಿಎಫ್‌ಸಿ,ಮತ್ತು ಐಸಿಐಸಿಐನಂತಹ ಬ್ಯಾಂಕುಗಳು ಗ್ರಾಹಕರಿಗೆ ಶೂನ್ಯ ಶಿಲ್ಕು ಖಾತೆಗಳ ಸೌಲಭ್ಯಗಳನ್ನು ನೀಡುತ್ತಿವೆ.

ಬಿಎಸ್‌ಬಿಡಿ ಖಾತೆಗಳನ್ನು ಏಕವ್ಯಕ್ತಿಯ ಹೆಸರಿನಲ್ಲಿ ಅಥವಾ ಜಂಟಿಯಾಗಿ ತೆರೆಯಬಹುದು. ಈ ಖಾತೆದಾರರಿಗೆ ಎಟಿಎಂ ಕಾರ್ಡ್, ಪಾಸ್‌ಪುಸ್ತಕ, ಚೆಕ್‌ಪುಸ್ತಕ,ಇಂಟರ್‌ನೆಟ್ ಬ್ಯಾಂಕಿಂಗ್ ಸೌಲಭ್ಯ ಇತ್ಯಾದಿಗಳು ದೊರೆಯುತ್ತವೆ. ಬೇಸಿಕ್ ರುಪೆ ಎಟಿಎಂ-ಕಮ್-ಡೆಬಿಟ್ ಕಾರ್ಡ್‌ಗಳು ಉಚಿತವಾಗಿರುತ್ತವೆ ಮತ್ತು ಇವುಗಳಿಗೆ ವಾರ್ಷಿಕ ನಿರ್ವಹಣಾ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಎನ್‌ಇಎಫ್‌ಟಿ ಮತ್ತು ಆರ್‌ಟಿಜಿಎಸ್‌ನಂತಹ ವಿದ್ಯುನ್ಮಾನ ಪಾವತಿ ವಿಧಾನಗಳ ಮೂಲಕ ಈ ಖಾತೆಗಳ ವಹಿವಾಟುಗಳಿಗೆ ಶುಲ್ಕವನ್ನು ವಿಧಿಸಲಾಗುವುದಿಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರಗಳ ಚೆಕ್‌ಗಳ ಡಿಪಾಸಿಟ್/ಕಲೆಕ್ಷನ್‌ಗೂ ಶುಲ್ಕ ನೀಡಬೇಕಿಲ್ಲ. ನಿಷ್ಕ್ರಿಯ ಖಾತೆಗಳನ್ನು ಸಕ್ರಿಯಗೊಳಿಸಲು ಅಥವಾ ಖಾತೆಗಳನ್ನು ಮುಚ್ಚಲು ಸಹ ಯಾವುದೇ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ.

ಈ ಖಾತೆಗಳಿಗೆ ಅವುಗಳಲ್ಲಿರುವ ಶಿಲ್ಕಿನ ಮೊತ್ತವನ್ನು ಅವಲಂಬಿಸಿ ವಾರ್ಷಿಕ ಶೇ.3.5ರಿಂದ ಶೇ.4ರವರೆಗೆ ಬಡ್ಡಿಯನ್ನು ನೀಡಲಾಗುತ್ತದೆ.

ಆದರೆ ಬಿಎಸ್‌ಬಿಡಿ ಖಾತೆಗಳಿಂದ ಇತರ ಉಳಿತಾಯ ಖಾತೆಗಳಂತೆ ಎರ್ರಾಬಿರ್ರಿ ಹಣವನ್ನು ಹಿಂತೆಗೆಯುವಂತಿಲ್ಲ. ಗ್ರಾಹಕರಿಗೆ ಎಟಿಎಂ/ಆರ್‌ಟಿಜಿಎಸ್/ಎನ್‌ಇಎಫ್‌ಟಿ/ಕ್ಲಿಯರಿಂಗ್/ಬ್ರಾಂಚ್ ಕ್ಯಾಷ್ ವಿತ್‌ಡ್ರಾವಲ್/ಟ್ರಾನ್ಸ್‌ಫರ್/ಇಂಟರ್‌ನೆಟ್ ಡೆಬಿಟ್ಸ್/ಸ್ಟಾಡಿಂಗ್ ಇನ್‌ಸ್ಟ್ರಕ್ಷನ್ಸ್/ಇಎಂಐ ಇತ್ಯಾದಿಗಳು ಸೇರಿದಂತೆ ತಿಂಗಳಿಗೆ ನಾಲ್ಕು ಬಾರಿ ಮಾತ್ರ ತಮ್ಮ ಖಾತೆಗಳಿಂದ ಹಣವನ್ನು ಹಿಂದೆಗೆಯಲು ಅವಕಾಶವಿದೆ. ಇದನ್ನು ಮೀರಿದರೆ ಬಿಎಸ್‌ಬಿಡಿ ಖಾತೆಯು ಸಾಮಾನ್ಯ ಉಳಿತಾಯ ಖಾತೆಯಾಗಿ ಪರಿವರ್ತನೆಗೊಳ್ಳುತ್ತದೆ ಮತ್ತು ಎಂಎಬಿ ದಂಡದ ಭೂತ ಮತ್ತೆ ನಿಮ್ಮನ್ನು ಕಾಡುತ್ತದೆ.

 ಯಾವುದೇ ಬ್ಯಾಂಕಿನಲ್ಲಿ ಬಿಎಸ್‌ಬಿಡಿ ಖಾತೆ ತೆರೆಯಬೇಕಿದ್ದರೆ ಅದೇ ಬ್ಯಾಂಕಿನಲ್ಲಿ ಸಾಮಾನ್ಯ ಉಳಿತಾಯ ಖಾತೆಯನ್ನು ಹೊಂದಿರುವಂತಿಲ್ಲ. ಒಂದು ವೇಳೆ ಅಂತಹ ಖಾತೆಯಿದ್ದರೆ ಬಿಎಸ್‌ಬಿಡಿ ಖಾತೆಯನ್ನು ತೆರೆದ 30 ದಿನಗಳಲ್ಲಿ ಅದನ್ನು ಮುಚ್ಚಬೇಕಾಗುತ್ತದೆ.

ನೀವು ಸಾಮಾನ್ಯವಾಗಿ ತಿಂಗಳಿಗೆ ನಾಲ್ಕಕ್ಕಿಂತ ಹೆಚ್ಚು ಸಲ ಹಣವನ್ನು ಹಿಂದೆಗೆಯುವುದಿಲ್ಲ ಎಂದಿದ್ದರೆ ನಮಗೆ ಈ ಖಾತೆ ಹೇಳಿ ಮಾಡಿಸಿದಂತಿದೆ. ಖಾತೆಯಲ್ಲಿನ ಶಿಲ್ಕು ಶೂನ್ಯಕ್ಕಿಳಿದರೂ ದಂಡದ ಭೀತಿಯಿಲ್ಲ.

ಗ್ರಾಹಕರು ಒಂದು ಬ್ಯಾಂಕಿನಲ್ಲಿ ಒಂದೇ ಬಿಎಸ್‌ಬಿಡಿ ಖಾತೆಯನ್ನು ಹೊಂದಿರಬಹುದು. ಆದರೆ ಬೇರೆ ಬ್ಯಾಂಕಿನಲ್ಲಿ ಇನ್ನೊಂದು ಬಿಎಸ್‌ಬಿಡಿ ಖಾತೆಯನ್ನು ಹೊಂದಿರಬಾರದು ಎಂದೇನಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News