ಲಂಚಕ್ಕೆ ಬೇಡಿಕೆ ಆರೋಪ: ಅಧಿಕಾರಿಗಳಿಬ್ಬರು ಎಸಿಬಿ ಬಲೆಗೆ
Update: 2018-10-23 20:11 IST
ಬೆಂಗಳೂರು, ಅ.23: ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದಡಿ ಇಬ್ಬರು ಸರಕಾರಿ ಆರೋಗ್ಯಾಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸಿದ್ದು, ತನಿಖೆ ಕೈಗೊಂಡಿದೆ.
ನಗರದ ಗಿರಿನಗರ ವಾರ್ಡ್‌ನ ಹಿರಿಯ ಆರೋಗ್ಯ ಪರಿವೀಕ್ಷಕ ಎಂ. ಜಯಕುಮಾರ್, ಎನ್‌ಆರ್ ಕಾಲನಿಯ ಹಿರಿಯ ಆರೋಗ್ಯ ಪರಿವೀಕ್ಷಕ ಜಗದೀಶ್ ಎಂಬವರ ವಿರುದ್ಧ ಎಸಿಬಿ ದೂರು ದಾಖಲಿಸಿದೆ.
ಹೊಟೇಲೊಂದರ ಪರವಾನಿಗೆ ನವೀಕರಣಕ್ಕಾಗಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಪರವಾನಿಗೆ ನೀಡಬೇಕಾದರೆ 30 ಸಾವಿರ ರೂ. ಲಂಚ ನೀಡಬೇಕು ಎಂದು ಎಂ. ಜಯಕುಮಾರ್ ಬೇಡಿಕೆಯಿಟ್ಟಿದ್ದರು. ಇದರ ಬಗ್ಗೆ ಖಚಿತ ಮಾಹಿತಿ ಪಡೆದ ಎಸಿಬಿ ಅಧಿಕಾರಿಗಳು, ಲಂಚ ಪಡೆಯುವ ವೇಳೆ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇಬ್ಬರು ಅಧಿಕಾರಿಗಳ ಕಚೇರಿಯಲ್ಲಿ ದಾಖಲೆಯಿಲ್ಲದ 4 ಲಕ್ಷ ರೂ. ನಗದು ಪತ್ತೆಯಾಗಿದ್ದು, ಎಂ. ಜಯಕುಮಾರ್, ಜಗದೀಶ್ ಅವರನ್ನು ಎಸಿಬಿ ಪೊಲೀಸರು ದಸ್ತಗಿರಿ ಮಾಡಿ ತನಿಖೆ ಮುಂದುವರಿಸಿದ್ದಾರೆ.