ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರ ಖಡ್ಗಗಳು ರಾಜ್ಯಕ್ಕೆ ಮರಳಿ ಬರಲಿ: ಜಯಮೃತ್ಯುಂಜಯ ಸ್ವಾಮೀಜಿ
ಬೆಂಗಳೂರು, ಅ.23: ವಿದೇಶಿ ವಸ್ತು ಸಂಗ್ರಹಾಲಯದಲ್ಲಿರುವ ವೀರ ವನಿತೆ ಕಿತ್ತೂರು ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಖಡ್ಗಗಳನ್ನು ರಾಜ್ಯಕ್ಕೆ ಮರಳಿ ತರುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮುಂದಾಗಬೇಕೆಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ಮಂಗಳವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ, ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಲಂಡನ್ ವಸ್ತು ಸಂಗ್ರಹಾಲಯದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಖಡ್ಗಗಳು ರಾಜ್ಯದ ಅಸ್ಮಿತೆ, ಸ್ವಾಭಿಮಾನದ ಸಂಕೇತಗಳು. ಹೀಗಾಗಿ ಖಡ್ಗಗಳನ್ನು ಮರಳಿ ರಾಜ್ಯಕ್ಕೆ ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿದೇಶಾಂಗ ಸಚಿವರ ಜತೆ ಶೀಘ್ರವೆ ಮಾತುಕತೆ ನಡೆಸಬೇಕು ಎಂದು ಅವರು ಹೇಳಿದರು.
ಕಿತ್ತೂರು ಚನ್ನಮ್ಮ ಹೋರಾಟದ ಬದುಕು ರಾಜ್ಯದ ಜನತೆಗೆ ಆದರ್ಶವಾದದ್ದು. ಬ್ರಿಟಿಷರ ಯಾವ ಬೆದರಿಕೆ, ಷಡ್ಯಂತ್ರಗಳಿಗೆ ಜಗ್ಗದೆ ದಿಟ್ಟವಾಗಿ ಎದುರಿಸುವ ಮೂಲಕ ಜನತೆಯ ಮನಸ್ಸಿನಲ್ಲಿ ಸ್ವಾತಂತ್ರದ ಬೀಜವನ್ನು ಬಿತ್ತಿದಾಕೆ. ಈಕೆಯ ಧೈರ್ಯ, ಸಾಹಸಗಳು ಯುವ ಜನತೆ ಮೈಗೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಭವ್ಯ ಮೆರವಣಿಗೆ: ನಗರದ ಬಿಬಿಎಂಪಿ ಕಚೇರಿ ಮುಂಭಾಗದಿಂದ ರವೀಂದ್ರ ಕಲಾಕ್ಷೇತ್ರ ವರೆಗೂ ಕಿತ್ತೂರು ರಾಣಿ ಚನ್ನಮ್ಮ ಅವರ ಸ್ತಬ್ಧ ಚಿತ್ರಗಳ ಭವ್ಯ ಮೆರವಣಿಗೆ ನಡೆಸಲಾಯಿತು. ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಕೂಡಲಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಮತ್ತಿತರರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರ ವೇಷ ಧರಿಸಿ ಕುದುರೆ ಸವಾರಿ ಹಾಗೂ ವಿವಿಧ ಕಲಾತಂಡಗಳ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಚೆನ್ನಮ್ಮ ಕುರಿತು ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು. ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ವಿಶುಕುಮಾರ್, ಬಸವರಾಜ್ ಹೂಗಾರ್ ಸೇರಿದಂತೆ ಪ್ರಮುಖರಿದ್ದರು.