ನಮ್ಮ ಮೆಟ್ರೋಗೆ ಎಂಟು ವರ್ಷ: ಪ್ರತಿನಿತ್ಯ ಐದು ಲಕ್ಷ ಪ್ರಯಾಣಿಕರ ಸಂಚಾರಕ್ಕೆ ಕ್ರಮ

Update: 2018-10-23 16:51 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.22: ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ರೈಲು ಸೇವೆ ಆರಂಭವಾಗಿ 8 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಬಿಎಂಆರ್‌ಸಿಎಲ್ ಮುಂದಿನ ವರ್ಷದಿಂದ ಪ್ರತಿದಿನ ಐದು ಲಕ್ಷ ಪ್ರಯಾಣಿಕರ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ.

ಜನರಿಂದ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆಯಿಂದ ಬಿಎಂಆರ್‌ಸಿಎಲ್ ಮುಂದಿನ ವರ್ಷದೊಳಗೆ ಐದು ಲಕ್ಷ ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಗುರಿಯನ್ನಿಟ್ಟುಕೊಂಡಿದೆ. ಪ್ರಸ್ತುತ ವಾರಾಂತ್ಯಗಳಲ್ಲಿ 4 ಲಕ್ಷಕ್ಕೂ ಅಧಿಕ ಜನ ಪ್ರಯಾಣಿಸುತ್ತಿದ್ದಾರೆ. ವಿಜಯದಶಮಿ ಹಿನ್ನೆಲೆಯಲ್ಲಿ ನಾಲ್ಕೂವರೆ ಲಕ್ಷ ಜನರು ಮೆಟ್ರೋನಲ್ಲಿ ಪ್ರಯಾಣಿಸಿದ್ದಾರೆ.

ಅ.21, 2011 ರಂದು ಮೊದಲ ಬಾರಿಗೆ ಮಹಾತ್ಮಗಾಂಧಿ ರಸ್ತೆ ನಿಲ್ದಾಣದಿಂದ ಬೈಯಪ್ಪನಹಳ್ಳಿ ವರೆಗೆ ಮೆಟ್ರೋ ಸೇವೆ ಆರಂಭಗೊಂಡಿತ್ತು. ವಾರದಲ್ಲಿ ಪ್ರತಿನಿತ್ಯ ಸರಾಸರಿ 4 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಆರು ಬೋಗಿಗಳ ರೈಲನ್ನು ಬಿಡುವ ಮುಂಚೆ ಪ್ರತಿದಿನ 3.8 ಲಕ್ಷ ಜನರು ಸಂಚರಿಸುತ್ತಿದ್ದರು. ಜೂ.23 ಪ್ರಥಮ ಹಾಗೂ ಅ.4 ರಿಂದ ದ್ವಿತೀಯ ಆರು ಬೋಗಿಗಳ ರೈಲು ನೇರಳ ಮಾರ್ಗದಲ್ಲಿ ಸಂಚಾರ ಆರಂಭಗೊಂಡ ನಂತರ ಮಹಿಳೆಯರಿಗೂ ಅನುಕೂಲವಾಗಿದ್ದು, ಪ್ರತಿ ನಿತ್ಯ 4 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.

ಮೂರನೇ ಹಂತದ ಆರು ಬೋಗಿ ರೈಲು ಪರೀಕ್ಷಾರ್ಥ ಕಾರ್ಯ ನಡೆಯುತ್ತಿದ್ದು, ಅಕ್ಟೋಬರ್ ಅಂತ್ಯಕ್ಕೆ ಅಥವಾ ನವೆಂಬರ್ ಮೊದಲ ವಾರದಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮುಂದಿನ ವರ್ಷದ ಡಿಸೆಂಬರ್ ವೇಳೆ ಎಲ್ಲ 48 ರೈಲುಗಳಿಗೂ ಆರು ಬೋಗಿಗಳನ್ನು ಅಳವಡಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News