×
Ad

ಮೀಟರ್ ಬಡ್ಡಿ ದಂಧೆ ಆರೋಪ: ದಲಿತ ಸಂರಕ್ಷ ಸಮಿತಿ ರಾಜ್ಯಾಧ್ಯಕ್ಷ ಬಾಲಕೃಷ್ಣ ಬಂಧನ

Update: 2018-10-23 22:26 IST

ಬೆಂಗಳೂರು, ಅ.23: ಸರಕಾರದ ಕೆಲ ಇಲಾಖೆ ಅಧಿಕಾರಿ, ರಾಜಕೀಯ ಮುಖಂಡರಿಗೆ ಬೆದರಿಕೆ ಹಾಕಿ ಹಣ ವಸೂಲಿ, ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ದಲಿತ ಸಂರಕ್ಷ ಸಮಿತಿ ರಾಜ್ಯಾಧ್ಯಕ್ಷ ಲಯನ್ ಕೆ.ವಿ.ಬಾಲಕೃಷ್ಣ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಮಂಗಳವಾರ ನಗರದ ಮಹದೇವಪುರ, ನಾರಾಯಣಪುರದಲ್ಲಿರುವ ಕೆ.ವಿ.ಬಾಲಕೃಷ್ಣ ಮಾಲಕತ್ವದ ಮನೆ ಹಾಗೂ ನಗರದ ವಿವಿಧೆಡೆ ಇರುವ 4 ಕಚೇರಿಗಳ ಮೇಲೆ ಏಕಕಾಲದಲ್ಲಿ ಸಿಸಿಬಿ ತನಿಖಾಧಿಕಾರಿಗಳು ದಾಳಿ ನಡೆಸಿದರು ಎನ್ನಲಾಗಿದೆ.

ದಾಳಿ ಸಂದರ್ಭದಲ್ಲಿ 1.20 ಲಕ್ಷ ನಗದು, ಕೆಲವು ಸಾರ್ವಜನಿಕರ ಆಸ್ತಿಗಳ ದಾಖಲೆ ಪತ್ರಗಳು, ಖಾಲಿ ಚೆಕ್‌ಗಳು, ಬಾಂಡ್‌ಗಳು, ಸಹಿ ಮಾಡಿರುವ ಖಾಲಿ ಕಾಗದಗಳನ್ನು ಜಪ್ತಿ ಮಾಡಿದ್ದೇವೆ ಎಂದು ಸಿಸಿಬಿಯ ಡಿಸಿಪಿ ಎಸ್.ಗಿರೀಶ್ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ದಲಿತ ಸಂರಕ್ಷ ಸಮಿತಿ ಹೆಸರಿನಲ್ಲಿ ಆರೋಪಿಯು, ಮಾಹಿತಿ ಹಕ್ಕು ಕಾಯ್ದೆ ದುರುಪಯೋಗಪಡಿಸಿಕೊಂಡು ಉದ್ದೇಶಪೂರ್ವಕವಾಗಿಯೇ ಕೆಲವರನ್ನು ಬೆದರಿಸಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ. ಅದಲ್ಲದೆ, ಈತನ ವಿರುದ್ಧ 20ಕ್ಕೂ ಹೆಚ್ಚು ದೂರುಗಳು ಸಿಸಿಬಿಗೆ ಬಂದಿದ್ದವು. ಅವುಗಳ ತನಿಖೆ ಕೈಗೊಂಡಿದ್ದ ಸಿಸಿಬಿ ತನಿಖಾಧಿಕಾರಿಗಳು, ಏಕಕಾಲದಲ್ಲಿ ದಾಳಿ ನಡೆಸಿ, ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ದೂರು ನೀಡಿ: ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಆರೋಪಿ ಲಯನ್ ಬಾಲಕೃಷ್ಣ, ಸಾಲಗಾರರ ಮೇಲೂ ಹಲ್ಲೆ ಮಾಡುತ್ತಿದ್ದರು ಎನ್ನುವ ಗಂಭೀರ ಆರೋಪ ಇದೆ. ಆ ಬಗ್ಗೆ ಸಹಾಯವಾಣಿಗೆ ಸಾಕಷ್ಟು ಕರೆಗಳು ಬಂದಿವೆ. ಅವರಿಂದ ತೊಂದರೆ ಅನುಭವಿಸಿದವರು ಸಿಸಿಬಿ ಕಚೇರಿಗೆ ಬಂದು ದೂರು ನೀಡಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News