ವಿಜಯ್ ಹಝಾರೆ ಪ್ರಶಸ್ತಿ ಮೊತ್ತ ಇನ್ನೂ ಸ್ವೀಕರಿಸದ ಮುಂಬೈ ತಂಡ

Update: 2018-10-23 18:34 GMT

ಮುಂಬೈ, ಅ.23: ವಿಜಯ್ ಹಝಾರೆ ಟ್ರೋಫಿ ಫೈನಲ್‌ನಲ್ಲಿ ದಿಲ್ಲಿ ತಂಡವನ್ನು 4 ವಿಕೆಟ್‌ಗಳಿಂದ ರೋಚಕವಾಗಿ ಮಣಿಸಿದ್ದ ಮುಂಬೈ ತಂಡ 2006-07ರ ಬಳಿಕ ಮೊದಲ ಬಾರಿ ಮೂರನೇ ಪ್ರಶಸ್ತಿ ಗೆದ್ದುಕೊಂಡಿತ್ತು. ಆದರೆ, ಮುಂಬೈ ತಂಡದ ಆಟಗಾರರು ಟ್ರೋಫಿಗೆ ಸಂಬಂಧಿಸಿದ ಪ್ರಶಸ್ತಿ ಮೊತ್ತ ಹಾಗೂ ಟೂರ್ನಿಯ ವೇತನವನ್ನು ಇನ್ನಷ್ಟೇ ಸ್ವೀಕರಿಸಬೇಕಾಗಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

 ‘‘ಸಾಮಾನ್ಯ ಸನ್ನಿವೇಶದಲ್ಲಿ ನಾವು ಲೀಗ್ ಹಂತದ ಪಂದ್ಯದ ಬಳಿಕ ಪಂದ್ಯ ಸಂಭಾವನೆ ಸ್ವೀಕರಿಸುತ್ತೇವೆ. ನಮಗೆ ನೇರವಾಗಿ ವೇತನ ಪಾವತಿಸುವ ಬಿಸಿಸಿಐಯೊಂದಿಗೆ ಮಾತನಾಡುವೆ ಎಂದು ನಮ್ಮ ಮ್ಯಾನೇಜರ್(ಅರ್ಮಾನ್ ಮಲಿಕ್)ಹೇಳಿದ್ದಾರೆ.ಆದರೆ, ನಮಗೆ ಡಿಎಯನ್ನು ನೀಡಲು ನಿರಾಕರಿಸಲಾಗುತ್ತಿದೆ. ಏಕೆಂದರೆ ಇದನ್ನು ಎಂಸಿಎ ನೇರವಾಗಿ ಪಾವತಿಸುತ್ತದೆ’’ ಎಂದು ಆಟಗಾರನೊಬ್ಬ ಬಹಿರಂಗಪಡಿಸಿದ್ದಾರೆ.

ಆಟಗಾರರಿಗೆ ಸುಮಾರು 50,000 ಡಿಎ ಕೊಡಬೇಕಾಗಿದೆ. ವಿಜಯ್ ಹಝಾರೆ ಟ್ರೋಫಿಯಲ್ಲಿ ಪ್ರತಿ ಆಟಗಾರ ಪ್ರತಿ ಪಂದ್ಯಕ್ಕೆ 35,000 ರೂ. ಸ್ವೀಕರಿಸುತ್ತಾನೆ. ಮುಂಬೈ ತಂಡ 50 ಓವರ್‌ಗಳ ಟೂರ್ನಿಯಲ್ಲಿ ಒಟ್ಟು 11 ಪಂದ್ಯಗಳನ್ನು ಆಡಿದೆ. ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ)ಯಲ್ಲಿ ಆಡಳಿತಾತ್ಮಕ ಬಿಕ್ಕಟ್ಟು ತಲೆದೋರಿದ್ದು, ಈ ಕಾರಣದಿಂದ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಬೇಕಾಗಿದ್ದ ವಿಂಡೀಸ್ ವಿರುದ್ಧ 4ನೇ ಏಕದಿನ ಪಂದ್ಯ ಬ್ರೆಬೌರ್ನ್ ಸ್ಟೇಡಿಯಂಗೆ ಸ್ಥಳಾಂತರವಾಗಿದೆ. ಇದು ರಾಜ್ಯ ಕ್ರಿಕೆಟ್ ತಂಡದ ಮೇಲೂ ಪರಿಣಾಮಬೀರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News