ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧಿಕಾರಿ ಬಂಧನ

Update: 2018-10-23 18:47 GMT

ಕೊಲಂಬೊ, ಅ.23: ಆಳವಾಗಿ ಬೇರುಬಿಟ್ಟಿರುವ ಭ್ರಷ್ಟಾಚಾರವನ್ನು ತೊಲಗಿಸಲು ಹೋರಾಟ ನಡೆಸುತ್ತಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ ಇದೀಗ ಮತ್ತೊಂದು ಹಿನ್ನಡೆ ಅನುಭವಿಸಿದೆ. ಮಂಡಳಿಯ ಮುಖ್ಯ ಹಣಕಾಸು ಅಧಿಕಾರಿ(ಸಿಎಫ್‌ಒ)ಯೊಬ್ಬರು ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿದ್ದಾರೆ ಎಂದು ಲಂಕಾ ಪೊಲೀಸರು ತಿಳಿಸಿದ್ದಾರೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಪೊಲೀಸ್ ಮಹಾ ನಿರೀಕ್ಷ್ಷಕರಿಗೆ(ಐಜಿಪಿ)ದೂರು ನೀಡಿದ ಹಿನ್ನೆಲೆಯಲ್ಲಿ ಪಿಯಾಲ್ ನಂದನ ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರ ರುವಾನ್ ಗುಣಶೇಖರ ತಿಳಿಸಿದ್ದಾರೆ. ಕ್ರಿಕೆಟ್‌ನಲ್ಲಿ ಕೇಳಿಬರುತ್ತಿರುವ ವ್ಯಾಪಕ ಭ್ರಷ್ಟಾಚಾರ ಆರೋಪವನ್ನು ತನಿಖೆ ನಡೆಸಲು ಭಾರತದ ಕೇಂದ್ರ ತನಿಖಾ ದಳದ(ಸಿಬಿಐ)ತಾಂತ್ರಿಕ ತಜ್ಞರನ್ನು ಕಳುಹಿಸಿಕೊಡುವಂತೆ ಶ್ರೀಲಂಕಾದ ಮಾಜಿ ನಾಯಕ ಹಾಗೂ ದೇಶದ ಪೆಟ್ರೋಲಿಯಂ ಸಚಿವ ಅರ್ಜುನ ರಣತುಂಗ ಒತ್ತಾಯಿಸಿದ್ದಾರೆ.

‘‘ಮ್ಯಾಚ್ ಫಿಕ್ಸಿಂಗ್‌ನಲ್ಲಿನ ಹಲವು ಭ್ರಷ್ಟಾಚಾರ ಚಟುವಟಿಕೆಗಳಿಗೆ ಸಂಬಂಧಿಸಿ ಕಠಿಣ ಕ್ರಮ ಕೈಗೊಂಡಿರುವ ಭಾರತ ಈ ವಿಷಯದಲ್ಲಿ ವಿಶೇಷ ಜ್ಞಾನ ಹೊಂದಿದೆ. ಪ್ರಧಾನಮಂತ್ರಿ(ಶ್ರೀಲಂಕಾ) ಹಾಗೂ ನಾನು ಭಾರತದ ಪ್ರಧಾನಿ ನರೇಂದ್ರ ಮೋದಿಗೆ ವಿಶೇಷವಾಗಿ ವಿನಂತಿಸಿದ್ದೇವೆ. ನಮ್ಮಲ್ಲಿ ಇಂತಹ ಸಮಸ್ಯೆಯನ್ನು ನಿಭಾಯಿಸುವ ತಜ್ಞರು ಹಾಗೂ ಕಾನೂನುಗಳಿಲ್ಲ. ಈ ನಿಟ್ಟಿನಲ್ಲಿ ನೆರವು ನೀಡುವುದಾಗಿ ಭಾರತ ಭರವಸೆ ನೀಡಿದೆ’’ ಎಂದು ದಿಲ್ಲಿಯಿಂದ ವಾಪಸಾದ ಬಳಿಕ ರಣತುಂಗಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News