ಅಯೋಧ್ಯೆಯಲ್ಲಿ ರಾಮಮಂದಿರ: ವಿಎಚ್‌ಪಿಯಿಂದ ಬಿರುಸಿನ ಚಟುವಟಿಕೆ

Update: 2018-10-24 04:32 GMT

ಉತ್ತರ ಪ್ರದೇಶ, ಅ.24: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರಕಾರ ಸೂಕ್ತವಾದ ಕಾನೂನು ಜಾರಿಗೆ ತರಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಆಗ್ರಹಿಸಿದ ಬೆನ್ನಲ್ಲೇ, ಈ ನಗರದಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ.

ವಿಶ್ವಹಿಂದೂ ಪರಿಷತ್, ದೇವಾಲಯ ನಿರ್ಮಾಣಕ್ಕೆ ಬಿರುಸಿನ ಸಿದ್ಧತೆಗಳನ್ನು ನಡೆಸುತ್ತಿದ್ದು, ಅಕ್ಟೋಬರ್ 29ರಂದು ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ಆಸ್ತಿ ವಿವಾದದ ಸಂಬಂಧ ಅಕ್ಟೋಬರ್ 29ರಂದು ನಡೆಯುವ ವಿಚಾರಣೆಯ ಫಲಿತಾಂಶ ತಮಗೆ ಪೂರಕವಾಗಲಿದೆ ಎಂಬ ನಿರೀಕ್ಷೆಯಲ್ಲಿದೆ.

ಲೋಡುಗಟ್ಟಲೆ ಕಲ್ಲುಗಳನ್ನು ಪೂರೈಸಲು ಸೂಚಿಸಲಾಗಿದ್ದು, ಇದನ್ನು ಸ್ತಂಭಗಳಾಗಿ ಕೆತ್ತಲು ಶಿಲ್ಪಿಗಳನ್ನು ಕೂಡಾ ಕರೆಸಿಕೊಳ್ಳಲಾಗುತ್ತಿದೆ. ಕಾನೂನು ತಡೆ ತೆರವುಗೊಂಡ ತಕ್ಷಣ ಮೂರು ಮಹಡಿಯ ರಾಮಮಂದಿರಕ್ಕೆ ಇವುಗಳನ್ನು ಅಳವಡಿಸುವ ಕಾರ್ಯ ಆರಂಭಿಸಲಾಗುತ್ತದೆ ಎಂದು ವಿಎಚ್‌ಪಿ ಹೇಳಿದೆ. 70 ಲೋಡ್ ಕಲ್ಲನ್ನು ಅಯೋಧ್ಯೆಗೆ ತರಲಾಗುತ್ತಿದ್ದು, ಇದು ಶೀಘ್ರವೇ ಅಯೋಧ್ಯೆ ತಲುಪಲಿದೆ ಎಂದು ಅಯೋಧ್ಯೆಯ ವಿಎಚ್‌ಪಿ ಮುಖಂಡರು ಹೇಳಿದ್ದಾರೆ.

ಕಾಮಗಾರಿಯನ್ನು ತ್ವರಿತವಾಗಿ ಪೂರೈಸಲು ಹೆಚ್ಚಿನ ಪ್ರಮಾಣದ ಶಿಲೆ ಹಾಗೂ ಶಿಲ್ಪಿಗಳನ್ನು ತರಲಾಗುತ್ತಿದೆ ಎಂದು ವಿಎಚ್‌ಪಿ ಅಂತಾರಾಷ್ಟ್ರೀಯ ಉಪಾಧ್ಯಕ್ಷ ಚಂಪತ್ ರಾಯ್ ಹೇಳಿದ್ದಾರೆ. ವಿಎಚ್‌ಪಿ ಹಾಗೂ ರಾಮ ಜನ್ಮಭೂಮಿ ನ್ಯಾಸ್ ಮುಖಂಡರು ಕಾಮಗಾರಿಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. "ನಾವು ಹಿಂದಡಿ ಇಡುವ ಪ್ರಶ್ನೆಯೇ ಇಲ್ಲ. ಇದು ಸತ್ಯಕ್ಕಾಗಿ ನಡೆಸುವ ಹೋರಾಟ. ನಾವು ಸುಪ್ರೀಂಕೋರ್ಟ್ ಆದೇಶವನ್ನಷ್ಟೇ ಕಾಯುತ್ತಿದ್ದೇವೆ" ಎಂದು ರಾಯ್ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News