×
Ad

ಹಂಪಿ ಬಳಿಯ ಆನೆಗುಂದಿಗೆ ಪುರಾತತ್ವ ಇಲಾಖೆಯಿಂದ ಕಾಯಕಲ್ಪ

Update: 2018-10-24 22:21 IST

ಬೆಂಗಳೂರು, ಅ.24: ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಕೊಪ್ಪಳ ಜಿಲ್ಲೆಯ ಹಂಪಿ ಬಳಿಯ ಆನೆಗುಂದಿಯ 14ನೆ ಶತಮಾನದ ಶಿಥಿಲಗೊಂಡಿರುವ ಕೋಟೆಗೆ ಕಾಯಕಲ್ಪ ಮಾಡಲು ರಾಜ್ಯ ಪುರಾತತ್ವ ಇಲಾಖೆ ನಿರ್ಧರಿಸಿ ಕೆಲಸ ಆರಂಭಿಸಿದೆ.

ವಿಜಯನಗರದ ಕಾಲದಲ್ಲಿ ಇಲ್ಲಿ ಆನೆಗಳಿಗೆ ಸ್ನಾನ ಮಾಡಿಸುತ್ತಿದ್ದುದರಿಂದ ಆನೆಗುಂದಿ ಎಂದು ಹೆಸರಾದ ಈ ಸ್ಥಳ ಹಂಪಿಗಿಂತಲೂ ಹಳೆಯದು. ನಂತರ ಇದೇ ಆನೆಗುಂದಿ ನಂತರದ ಶತಮಾನಗಳಲ್ಲಿ ಬಿಜಾಪುರ ಸುಲ್ತಾನರು, ಮೊಘಲರು, ಮರಾಠರು, ಟಿಪ್ಪುಸುಲ್ತಾನ್ ಮತ್ತು ಬ್ರಿಟಿಷರ ವಶವಾಯಿತು. ವಿಜಯನಗರದ ರಾಜರಿಗೆ ಈ ಕೋಟೆ ವಿಶೇಷವಾದದ್ದು, ಏಕೆಂದರೆ ಪ್ರತಿ ಬಾರಿ ಯುದ್ಧಕ್ಕೆ ಹೊರಡುವಾಗಲೂ ಇಲ್ಲಿನ ದುರ್ಗಿಗುಡಿಗೆ ತೆರಳಿ ಅವರು ಪೂಜೆ ಸಲ್ಲಿಸುತ್ತಿದ್ದರು. ನಂತರ ಹಲವಾರು ರಾಜರುಗಳ ಆಕ್ರಮಣದಿಂದಾಗಿ ಕಾಲಕ್ರಮೇಣ ಆನೆಗುಂದಿ ನಿರ್ಲಕ್ಷಕ್ಕೀಡಾಯಿತು. ಅಂದ ಕಳೆದುಕೊಂಡ ಆನೆಗುಂದಿ ಕೋಟೆಯ 13 ಅಡಿ ಎತ್ತರದ ಗೋಡೆಗಳು ಕುಸಿದು ಬಿದ್ದಿದ್ದು ಸಮಾಧಿಗಳು ಚೆಲ್ಲಾಪಿಲ್ಲಿಯಾಗಿವೆ.

ಈ ಕೋಟೆ ಹಲವಾರು ಕಾರಣಗಳಿಗಾಗಿ ವಿಶೇಷವಾದದ್ದು, ಇದನ್ನು ಬೀಮ್ ಮತ್ತು ಕಂಬಗಳ ಆಧಾರವಿಲ್ಲದೆ ನಿರ್ಮಿಸಲಾಗಿದ್ದು ಅತಿ ಹೆಚ್ಚು ಭಾರ ತೆಗೆದುಕೊಳ್ಳುವ ಸ್ಥಳಗಳನ್ನು ಆಗಿನ ಕಾಲದಲ್ಲೇ ಇಂಜಿನಿಯರ್‌ಗಳು ಗುರುತಿಸಿದ್ದಾರೆ. ಸೂಕ್ತ ಕಾರ್ಮಿಕರು ಮತ್ತು ಉಪಕರಣಗಳು ದೊರೆತಲ್ಲಿ 3 ತಿಂಗಳಲ್ಲಿ ಕೆಲಸ ಮುಗಿಸಬಹುದು ಎಂದು ಪುರಾತತ್ವ ಸಂರಕ್ಷಣಾ ಇಂಜಿನಿಯರ್ ಎಸ್.ಎಸ್.ಮುಲಾಪುರ ಹೇಳುತ್ತಾರೆ.

ಹಂಪಿ ಉತ್ಸವಕ್ಕೆ ಮುನ್ನವೇ ಆನೆಗುಂದಿ ಕಾಯಕಲ್ಪದ ಕೆಲಸ ಮುಗಿಸಿದ್ದರೆ ಚೆನ್ನಾಗಿತ್ತು. ಆದರೆ, ಕಾಲಾವಕಾಶ ಸಾಲದು. ಈ ಸ್ಥಳದ ಐತಿಹಾಸಿಕ ಮಹತ್ವ ಅರಿಯದ ಕೆಲವು ಜನ ಕೋಟೆ ಗೋಡೆಯ ಚಪ್ಪಡಿಗಳನ್ನು ಹೊತ್ತೊಯ್ದಿದ್ದಾರೆ, ನಿಧಿ ಮತ್ತಿತರ ನಂಬಿಕೆಯಿಂದಾಗಿ ವಿಗ್ರಹಗಳನ್ನು ಭಗ್ನಗೊಳಿಸಿದ್ದಾರೆ. ಸಾಲದ್ದಕ್ಕೆ ಗೋಡೆ ಬರಹಗಳಿಂದ ಅಂದಗೆಡಿಸಿರುವುದಲ್ಲದೆ ಹಲವಾರು ಅಕ್ರಮ ಚಟುವಟಿಕೆಗಳಿಗೆ ಇದು ಕೇಂದ್ರ ಸ್ಥಾನವಾಗಿ ಹೋಗಿದೆ. ಒಮ್ಮೆ ದುರಸ್ಥಿ ಕಾರ್ಯ ಮುಗಿದರೆ ಅದನ್ನು ಹಂಪಿ ಉತ್ಸವಕ್ಕೆ ಮಹತ್ವ ಕುರಿತು ಅರಿವು ಮೂಡಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News