ಅಂತರ್‌ರಾಷ್ಟ್ರೀಯ ಪುಸ್ತಕೋತ್ಸವದಲ್ಲಿ 4.5 ಕೋಟಿ ವಹಿವಾಟು
ಬೆಂಗಳೂರು, ಅ.24: ನಗರದ ಅರಮನೆ ಮೈದಾನದಲ್ಲಿ ಇತ್ತೀಚಿಗೆ ನಡೆದ ಅಂತರ್‌ರಾಷ್ಟ್ರೀಯ ಮಟ್ಟದ ಬೆಂಗಳೂರು ಪುಸ್ತಕೋತ್ಸವದಲ್ಲಿ 50 ಲಕ್ಷ ರೂ.ಗಳಷ್ಟು ಕನ್ನಡ ಪುಸ್ತಕಗಳನ್ನೊಳಗೊಂಡಂತೆ 4.5 ಕೋಟಿ ರೂ.ವಹಿವಾಟು ನಡೆದಿದೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಏಳು ದಿನ ಆಯೋಜನೆಯಾಗಿದ್ದ ಪುಸ್ತಕೋತ್ಸವ ಅಂತ್ಯಗೊಂಡ ಎರಡು ದಿನಗಳ ನಂತರ ಅಂತಿಮ ವಹಿವಾಟು ಲೆಕ್ಕಾಚಾರ ಮುಗಿದಿದ್ದು, ಅಲ್ಲಿ ಕನ್ನಡ ಸೇರಿದಂತೆ ಇತರೆ ಭಾಷೆ ಕೃತಿಗಳಿಗೆ ಹೆಚ್ಚು ಪ್ರಾಶಸ್ತ್ಯ ಸಿಕ್ಕಿದ್ದು, ಮಕ್ಕಳ ಪುಸ್ತಕಗಳು ಅತಿಹೆಚ್ಚು ಮಾರಾಟವಾಗಿವೆ ಎಂದು ಹೇಳಲಾಗಿದೆ.
ಐಟಿಬಿಟಿ ಪುಸ್ತಕಗಳಿಗೆ ಬೇಡಿಕೆ: ಮೂರು ವರ್ಷದ ಬಳಿಕ ನಗರದಲ್ಲಿ ಆಯೋಜನೆಯಾಗಿದ್ದ ಅಂತರ್‌ರಾಷ್ಟ್ರೀಯ ಮಟ್ಟದ ಪುಸ್ತಕೋತ್ಸವದಲ್ಲಿ 270ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿತ್ತು. ಇದರಲ್ಲಿ ಕಂಪ್ಯೂಟರ್ ಕಲಿಕೆ ಸೇರಿದಂತೆ ಐಟಿಬಿಟಿಗೆ ಸಂಬಂಧಿಸಿದ ಪುಸ್ತಕಗಳನ್ನು ಅಧಿಕ ಸಂಖ್ಯೆಯಲ್ಲಿ ಖರೀದಿಯಾಗಿವೆ.
ಇಂಗ್ಲಿಷ್ ಕಾದಂಬರಿಗಳು, ಯುರೋಪ್ ಇತಿಹಾಸಕ್ಕೆ ಸಂಬಂಧಿಸಿದ ಪುಸ್ತಕಗಳು, ವಿಜ್ಞಾನ -ತಂತ್ರಜ್ಞಾನಕ್ಕೆ ಸಂಬಂಧಿ ಕೃತಿಗಳು ಸೇರಿದಂತೆ ಆಂಗ್ಲ ಭಾಷೆಯ ಹಲವು ಲೇಖಕರ ಮತ್ತು ಕಾದಂಬರಿಕಾರ ಪುಸ್ತಕಗಳು ಮಾರಾಟವಾಗಿದ್ದು, ಇದರ ವಹಿವಾಟು ಸುಮಾರು 3 ಕೋಟಿ ರೂ. ಮೀರಿದೆ. ಜತೆಗೆ ತೆಲುಗು, ತಮಿಳು, ಹಿಂದಿ ಸೇರಿದಂತೆ ಅನೇಕ ಭಾಷೆಗಳ ಹೆಸರಾಂತ ಲೇಖಕರ ಪುಸ್ತಕಗಳು ಸಾಕಷ್ಟು ಸಂಖ್ಯೆಯಲ್ಲಿ ಬಿಕರಿಯಾಗಿವೆ.
ಕುವೆಂಪು, ಭೈರಪ್ಪ ಕೃತಿಗಳಿಗೆ ಬೇಡಿಕೆ: ರಾಷ್ಟ್ರಕವಿ ಕುವೆಂಪು, ವರ ಕವಿ ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶಿವರಾಮ ಕಾರಂತ, ಪೂರ್ಣಚಂದ್ರ ತೇಜಸ್ವಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಕಾದಂಬರಿಕಾರ ಎಸ್.ಎಲ್.ಭೈರಪ್ಪ ಸೇರಿದಂತೆ ಜನಪ್ರಿಯ ಸಾಹಿತಿಗಳು, ಕಾದಂಬರಿಕಾರರ ಕೃತಿಗಳನ್ನು ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿದ್ದಾರೆ.
ಕುವೆಂಪು ಅವರ ಜನಪ್ರಿಯ ಕಾದಂಬರಿ ‘ಮಲೆಗಳಲ್ಲಿ ಮದುಮಗಳು’, ಡಿವಿಜಿ ಅವರ ‘ಮಂಕುತಿಮ್ಮನ ಕಗ್ಗ’, ಎಸ್.ಎಲ್. ಭೈರಪ್ಪ ಅವರ ‘ಪರ್ವ’ ಸೇರಿದಂತೆ ಹಲವು ಕಾದಂಬರಿಗಳು ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಿವೆ.
ಕನ್ನಡ ಸಾಹಿತ್ಯ ಕೃತಿಗಳ ಮೇಲೆ ಶೇ.10ರಿಂದ ಶೇ. 50ರ ರಿಯಾಯ್ತಿ ನೀಡಲಾಗಿತ್ತು. ಹೀಗಾಗಿ ಸುಮಾರು 50 ಲಕ್ಷ ರೂ. ಮೌಲ್ಯದ ಕನ್ನಡ ಪುಸ್ತಕಗಳು ಮಾರಾಟವಾಗಿವೆ. ಅಲ್ಲದೆ ಹಲವು ಕಾಲೇಜುಗಳು ಕೂಡ ಗ್ರಂಥಾಲಯ ಸಂಗ್ರಹಕ್ಕಾಗಿ ವಿವಿಧ ರೀತಿಯ ಸುಮಾರು ಒಂದು ಲಕ್ಷ ರೂ. ಮೌಲ್ಯದ ಕೃತಿಗಳನ್ನು ಖರೀದಿಸಿವೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರ ಪುಸ್ತಕೋತ್ಸವದಲ್ಲಿ ತೆರೆದಿದ್ದ ಮಳಿಗೆಗೂ ಸಾಕಷ್ಟು ಸಂಖ್ಯೆಯಲ್ಲಿ ಓದುಗರು ಭೇಟಿ ನೀಡಿದ್ದಾರೆ. ಪಂಪಭಾರತ, ಆದಿಪುರಾಣ, ಕವಿ ಸಿದ್ದಲಿಂಗಯ್ಯ ಅವರ ಸಮಗ್ರ ಸಂಪುಟ ಸೇರಿದಂತೆ ಸುಮಾರು 30 ಸಾವಿರ ರೂ. ಮೌಲ್ಯದ ಪುಸ್ತಕಗಳು ಮಾರಾಟವಾಗಿವೆ. ಕನ್ನಡಿಗರಲ್ಲಿ ಪುಸ್ತಕ ಕೊಂಡು ಓದುವ ಪ್ರವೃತ್ತಿ ಇನ್ನೂ ಇದೆ. ಮೈಸೂರು ದಸರಾ ಉತ್ಸವದಲ್ಲೂ ಕನ್ನಡ ಪುಸ್ತಕ ಮಳಿಗೆಗಳಲ್ಲಿ ಸುಮಾರು 5 ಲಕ್ಷ ರೂ. ಮೌಲ್ಯದ ಕನ್ನಡ ಪುಸ್ತಕಗಳು ಮಾರಾಟವಾಗಿವೆ.
-ಡಾ.ವಸುಂಧರಾ ಭೂಪತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ